ಆಗ್ರಾ: ಶೂ ವ್ಯಾಪಾರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ, 40 ಕೋಟಿ ರೂ. ನಗದು ಪತ್ತೆ
ಇತ್ತೀಚಿನ ಬೆಳವಣಿಗೆಯಲ್ಲಿ, ಆದಾಯ ತೆರಿಗೆ ಇಲಾಖೆಯು ಉತ್ತರ ಪ್ರದೇಶದ ಆಗ್ರಾದಲ್ಲಿ ಪ್ರಮುಖ ಶೂ ವ್ಯಾಪಾರಿಗಳ ನಿವಾಸಗಳ ಮನೆ ಮೇಲೆ ದಾಳಿ ನಡೆಸಿದೆ. ಅಧಿಕಾರಿಗಳು ಇದುವರೆಗೆ 40 ಕೋಟಿ ರೂಪಾಯಿ ನಗದು, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಆಗ್ರಾದ ಶೂ ವ್ಯಾಪಾರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ(Income Tax Department) ಅಧಿಕಾರಿಗಳು ದಾಳಿ ನಡೆಸಿದ್ದು, 40 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ನಗರದಲ್ಲಿ ಕನಿಷ್ಠ ಮೂವರು ಶೂ ವ್ಯಾಪಾರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ.
500 ರೂಪಾಯಿ ನೋಟುಗಳ ಹಲವಾರು ಬಂಡಲ್‌ಗಳನ್ನು ಪಾದರಕ್ಷೆ ಕಂಪನಿಯ ಮಾಲೀಕರ ನಿವಾಸದಲ್ಲಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನೋಟುಗಳನ್ನು ಎಣಿಸಲು ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರನ್ನು ಕರೆಸಲಾಯಿತು. ಇತ್ತೀಚೆಗೆ ದೇಶದಲ್ಲಿ ನಡೆದ 2ನೇ ಅತಿದೊಡ್ಡ ದಾಳಿಯೂ ಇದಾಗಿದೆ. ಇದೇ ತಿಂಗಳ ಮೇ 6 ರಂದು ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳ ತಂಡ ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತು ಅವರ ಮನೆ ಕೆಲಸಗಾರ ಜಹಾಂಗೀರ್ ಆಲಂ ಮನೆಯಲ್ಲಿ ಸಿಕ್ಕ 35 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು.
ಸದ್ಯ 40 ಕೋಟಿ ರೂ. ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತಿ ಮಾಡಿದ ಹಣವನ್ನು ಇನ್ನೂ ಏಣಿಕೆ ಮಾಡಲಾಗುತ್ತಿದ್ದು, ಹಣದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ತೆರಿಗೆ ವಂಚನೆ ಮತ್ತು ಅಕ್ರಮ ಆಸ್ತಿ ಹೊಂದಿರುವ ಶಂಕೆಯ ಮೇಲೆ ಇಲಾಖೆ ದಾಳಿ ನಡೆಸಿದೆ.
ಮತ್ತಷ್ಟು ಓದಿ: ಬೆಂಗಳೂರಿನ ಕೆಲ ಖಾಸಗಿ ಕಂಪನಿಗಳ ಮೇಲೆ ಐಟಿ ರೇಡ್
ಶೂ ವ್ಯಾಪಾರಿಗಳು ತೆರಿಗೆ ವಂಚಿಸುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಮಧ್ಯಾಹ್ನ 3 ಗಂಟೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೂವರು ಉದ್ಯಮಿಗಳ ಶೋರೂಂಗಳಿಗೆ ಆಗಮಿಸಿ ಶಾಪಿಂಗ್ ಮಾಡಲು ಬಂದಿದ್ದವರನ್ನು ಹೊರಗೆ ಕಳುಹಿಸಿ ಶೋಧ ಕಾರ್ಯ ಆರಂಭಿಸಿದರು. ಸದ್ಯ ದಾಳಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆ ತಂಡಗಳು ಕಡತಗಳು ಮತ್ತು ಸಾಧನಗಳನ್ನು ಪರಿಶೀಲಿಸುತ್ತಿವೆ.
ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆ ಗುಜರಾತ್‌ನ ಅಹಮದಾಬಾದ್ ಮತ್ತು ವಡೋದರಾದಲ್ಲಿ ದಾಳಿ ನಡೆಸಿತ್ತು. ರಿಯಲ್ ಎಸ್ಟೇಟ್ ಗ್ರೂಪ್ ಮಾಧವ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ರಿಯಲ್ ಎಸ್ಟೇಟ್ ಮತ್ತು ಸರ್ಕಾರಿ ಮೂಲಸೌಕರ್ಯ ಯೋಜನೆಗಳಿಗೆ ಹೆಸರುವಾಸಿಯಾದ ಗುಂಪು, ಎರಡು ನಗರಗಳಾದ್ಯಂತ 27 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತು. ಐಟಿ ಇಲಾಖೆಯ 50ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ ತಂಡದಲ್ಲಿ ಭಾಗಿಯಾಗಿದ್ದರು. ದಾಳಿ ನಡೆಸಿದ ಗುಂಪಿನ ಆವರಣಗಳು ವಡೋದರದ ಸುಭಾನ್‌ಪುರದಲ್ಲಿರುವ ಅವರ ಕಚೇರಿಯನ್ನು ಒಳಗೊಂಡಿತ್ತು. ಕರ್ನಾಟಕ, ದೆಹಲಿ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಮಹಾರಾಷ್ಟ್ರದಲ್ಲಿ ಅಸ್ತಿತ್ವವನ್ನು ಹೊಂದಿರುವ ಮಾಧವ್ ಗ್ರೂಪ್ 2010 ರಲ್ಲಿ ಸ್ಥಾಪನೆಯಾದಾಗಿನಿಂದ ಪರಿಶೀಲನೆಯಲ್ಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ