ಲಕ್ನೋ, ಸೆಪ್ಟೆಂಬರ್ 13: ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್(Azam Khan) ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಂಪುರದಿಂದ ಲಕ್ನೋದವರೆಗಿನ ಅವರ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಲಕ್ನೋ, ರಾಂಪುರ, ಮೀರತ್, ಗಾಜಿಯಾಬಾದ್, ಸಹರಾನ್‌ಪುರ, ಸೀತಾಪುರದಲ್ಲಿ ದಾಳಿ ನಡೆಯುತ್ತಿದೆ. ಅಜಂ ಖಾನ್ ಅವರ ಅಲ್ ಜೌಹರ್ ಟ್ರಸ್ಟ್ ಮೇಲೆ ಕೂಡ ದಾಳಿ ನಡೆದಿದೆ. ನ್ಯಾಯಾಲಯಕ್ಕೆ ಆಜಂ ಖಾನ್ ನೀಡಿರುವ ಪ್ರಮಾಣಪತ್ರದಲ್ಲಿ ಲೋಪದೋಷ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.
ಆಜಂಖಾನ್ ಇಡೀ ಕುಟುಂಬದ ಅಫಿಡವಿಟ್ ನೀಡಿದ್ದರು, ಅದರಲ್ಲಿ ನೀಡಿರುವ ಬ್ಯಾಂಕ್ ವಿವರಗಳಲ್ಲಿ ಹಲವು ದೋಷಗಳಿದ್ದವು. ನಮೂದಿಸದ ಕೆಲವು ಆಸ್ತಿಗಳು ಕೂಡ ಇವೆ. ಇದೇ ವೇಳೆ ಅಲ್ ಜೌಹರ್ ಟ್ರಸ್ಟ್‌ನ ವಿವರಗಳಿಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಕೇಳಿಬಂದಿದ್ದು, ಐಟಿ ಇಲಾಖೆಗೆ ಮಾಹಿತಿಗಳು ಲಭ್ಯವಾಗಿಲ್ಲ. ಹೀಗಾಗಿ ಅವರ ಆಸ್ತಿ ಇರುವ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಮಾಹಿತಿಯ ಪ್ರಕಾರ, ಆಜಂ ಖಾನ್ ಅವರ ಮೌಲಾನಾ ಅಲಿ ಜೋಹರ್ ಟ್ರಸ್ಟ್‌ನ ಎಲ್ಲಾ 11 ಟ್ರಸ್ಟಿಗಳ ಮೇಲೆ ದಾಳಿ ನಡೆಸಲಾಗಿದೆ. ಅಜಮ್ ಅಲ್ಲದೆ, ಶಾಸಕ ನಸೀರ್ ಖಾನ್, ಗಾಜಿಯಾಬಾದ್‌ನಲ್ಲಿರುವ ಏಕ್ತಾ ಕೌಶಿಕ್, ಅಬ್ದುಲ್ಲಾ ಸ್ನೇಹಿತ ಅನ್ವರ್ ಮತ್ತು ರಾಂಪುರದಲ್ಲಿರುವ ಸಲೀಂ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಮತ್ತಷ್ಟು ಓದಿ: ನನ್ನ ರಕ್ಷಣೆಗೆಂದು ನಿಯೋಜಿಸಲ್ಪಟ್ಟ ಪೊಲೀಸರೇ ನನ್ನ ಮೇಲೆ ಗುಂಡು ಹಾರಿಸಬಹುದು; ಅಪನಂಬಿಕೆ ವ್ಯಕ್ತಪಡಿಸಿದ ಆಜಮ್ ಖಾನ್ ಪುತ್ರ
ರಾಂಪುರ ಶಾಸಕ ಆಕಾಶ್ ಸಕ್ಸೇನಾ ಅವರು 2021 ರಲ್ಲಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. 60 ಕೋಟಿ ದೇಣಿಗೆ ನೀಡಿದವರು ಆದಾಯ ತೆರಿಗೆ ಕಟ್ಟಲೇ ಇಲ್ಲ ಎಂದು ಆರೋಪಿಸಲಾಗಿತ್ತು. ಟ್ರಸ್ಟ್ ಹೊಂದಿರುವ ಚರ ಮತ್ತು ಸ್ಥಿರ ಆಸ್ತಿಗಳು ಘೋಷಣೆ ಮಾಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಎಂದು ಆರೋಪಿಸಲಾಗಿದೆ.
ಆಜಂ ಖಾನ್ ವಿರುದ್ಧ ಹಲವು ಆರೋಪಗಳಿವೆ. ಕೆಲವು ತಿಂಗಳ ಹಿಂದೆ, ರಾಂಪುರ ನ್ಯಾಯಾಲಯವು ದ್ವೇಷ ಪೂರಿತ ಭಾಷಣ ಪ್ರಕರಣದಲ್ಲಿ ಅವರಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು. ಇದಲ್ಲದೇ ನ್ಯಾಯಾಲಯ 1000 ರೂಪಾಯಿ ದಂಡವನ್ನೂ ವಿಧಿಸಿತ್ತು. ಸದ್ಯ ಎಸ್ಪಿ ನಾಯಕ ಜಾಮೀನಿನ ಮೇಲೆ ಹೊರಗಿದ್ದಾರೆ.
ಕೆಲ ತಿಂಗಳ ಹಿಂದೆ ಯೋಗಿ ಸರ್ಕಾರ ಅವರ ವೈ ಕೆಟಗರಿ ಭದ್ರತೆಯನ್ನು ತೆಗೆದುಹಾಕಿತ್ತು. ಇದಾದ ಬಳಿಕ ಅವರ ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸರನ್ನು ವಾಪಸ್ ಕರೆಸಲಾಯಿತು. ಈ ವಿಚಾರದಲ್ಲಿ ಸ್ಟೇ ಲೆವೆಲ್ ಸೆಕ್ಯುರಿಟಿ ಕಮಿಟಿಯು ಆಜಂ ಖಾನ್‌ಗೆ ವೈ ಕೆಟಗರಿ ಭದ್ರತೆ ನೀಡುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಜಂ ಖಾನ್‌ನ ತೊಂದರೆ ಗಣನೀಯವಾಗಿ ಹೆಚ್ಚಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ