Independence Day 2022: ‘ಜನ ಗಣ ಮನ’ ಭಾರತದ ರಾಷ್ಟ್ರಗೀತೆಯಾಗಿ ಹೇಗೆ ಆಯ್ಕೆಯಾಯಿತು? ಗೀತೆಯ ಅರ್ಥ ಇಲ್ಲಿದೆ
Independence Day: 1911ರ ಡಿಸೆಂಬರ್ 21 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಾರ್ಷಿಕ ಸಮ್ಮೇಳನದಲ್ಲಿ ಹಾಡಲಾದ ಜನ ಗಣ ಮನ ರಾಷ್ಟ್ರಗೀತೆಯನ್ನು 1950ರ ಜನವರಿ 24ರಂದು ಭಾರತದ ಸಂವಿಧಾನವು ಭಾರತದ ಅಧಿಕೃತ ರಾಷ್ಟ್ರಗೀತೆ ಎಂದು ಘೋಷಿಸಿತು. ಇದು ದೇಶದ ಧಾರ್ಮಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಏಕತೆ ಮತ್ತು ವೈವಿಧ್ಯತೆಯನ್ನು ಚಿತ್ರಿಸುತ್ತದೆ.
ಭಾರತೀಯರ ತ್ಯಾಗ, ಬಲಿದಾನ ಮತ್ತು ಸುದೀರ್ಘವಾದ ಹೋರಾಟದ ನಂತರ ಭಾರತವನ್ನು 1947ರ ಆಗಸ್ಟ್ 15 ರಂದು ಬ್ರಿಟಿಷ್ ವಸಾಹತುಶಾಹಿಯಿಂದ ಸ್ವತಂತ್ರವೆಂದು ಘೋಷಿಸಲಾಯಿತು. ಅದರಂತೆ ಭಾರತಕ್ಕೆ ಆಡಳಿತಾತ್ಮಕವಾಗಿ ಎಲ್ಲಾ ಸ್ವಾತಂತ್ರ್ಯವೂ ಸಿಕ್ಕಿತು. ರಾಷ್ಟ್ರಕ್ಕೊಂದು ಧ್ವಜವೂ ಸಿಕ್ಕಿತು. ಇದರೊಂದಿಗೆ ದೇಶಭಕ್ತಿಯನ್ನು ಸಾರುವ ರಾಷ್ಟ್ರಗೀತೆಯನ್ನೂ ಅಧಿಕೃತವಾಗಿ ಘೋಷಿಸಲಾಯಿತು. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರು ಬರೆದ ‘ಜನ ಗಣ ಮನ’ ಗೀತೆಯೇ ರಾಷ್ಟ್ರಗೀತೆಯಾಗಿದೆ. ಈ ಹಾಡು ಭಾರತದ ರಾಷ್ಟ್ರೀಯ ಪರಂಪರೆಯನ್ನು ಪ್ರದರ್ಶಿಸುವುದಲ್ಲದೆ ದೇಶಭಕ್ತಿ, ಹೆಮ್ಮೆ ಮತ್ತು ರಾಷ್ಟ್ರೀಯ ನಿಷ್ಠೆ, ಸಂಸ್ಕೃತಿ, ಧರ್ಮ, ಜಾತಿ ಮತ್ತು ಪ್ರತಿಯೊಬ್ಬ ಭಾರತೀಯನೊಳಗೆ ಇರುವ ಏಕತೆಯ ಭಾವನೆಯ ಬಗ್ಗೆ ಮಾತನಾಡುತ್ತದೆ.
ಮೂಲತಃ ಇದು ಐದು ಚರಣಗಳನ್ನು ಒಳಗೊಂಡಿರುವ ಬಂಗಾಳಿ ಸಂಸ್ಕೃತದಲ್ಲಿ ಬರೆಯಲಾದ “ಭರೋತೋ ಭಾಗ್ಯೋ ಬಿಧಾತ” ಎಂಬ ಬ್ರಹ್ಮ ಸ್ತೋತ್ರವಾಗಿತ್ತು. ಇಂದು ಹಾಡುವ ಗೀತೆಯು ಹಾಡಿನ ತುಣುಕಾಗಿದೆ, ಏಕೆಂದರೆ ಒಂದೇ ಪ್ಯಾರಾಗ್ರಾಫ್ ಅನ್ನು ಭಾರತದ ರಾಷ್ಟ್ರಗೀತೆಯಾಗಿ ಅಳವಡಿಸಲಾಗಿದೆ. ಇದು ದೇಶದ ಧಾರ್ಮಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಏಕತೆ ಮತ್ತು ವೈವಿಧ್ಯತೆಯನ್ನು ಚಿತ್ರಿಸುತ್ತದೆ.
ಭಾರತದ ರಾಷ್ಟ್ರೀಯ ಗೀತೆಯನ್ನು ಮೊದಲ ಬಾರಿಗೆ 1911ರ ಡಿಸೆಂಬರ್ 21 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಾರ್ಷಿಕ ಸಮ್ಮೇಳನದಲ್ಲಿ ಹಾಡಲಾಯಿತು. ಜನ ಗಣ ಮನವನ್ನು ಅಬಿದ್ ಅಲಿ ಅವರು ಹಿಂದಿ ಮತ್ತು ಉರ್ದು ಭಾಷೆಗೆ ಅನುವಾದಿಸಿದ್ದಾರೆ. 1950ರ ಜನವರಿ 24ರಂದು ಭಾರತದ ಸಂವಿಧಾನವು ಜನ ಮನ ಗಣವನ್ನು “ಭಾರತದ ರಾಷ್ಟ್ರೀಯ ಗೀತೆ” ಎಂದು ಅಧಿಕೃತವಾಗಿ ಘೋಷಿಸಿತು.
ಜನ ಗಣ ಮನ ಗೀತೆಯ ಅರ್ಥ
ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚನಾಯಕನೇ
ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ!
ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ
ದ್ರಾವಿಡ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) ಒಡಿಶಾ, ಬಂಗಾಳ
ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ-ಯಮುನೆಯಂತಹ ಜೀವನದಿಗಳು
ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ
ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ,
ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ
ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ
ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ!
ಜಯವಾಗಲಿ…