ಕೊಲ್ಕತ್ತಾ: ಕೊವಿಡ್-19 ಪಿಡುಗಿನ ಕಾರಣದಿಂದ ರದ್ದಾಗಿದ್ದ ಭಾರತ ಮತ್ತು ಬಾಂಗ್ಲಾದೇಶ ನಡುವೆ ರೈಲು ಸಂಚಾರವು (India Bangladesh Train Service) ಇಂದಿನಿಂದ ಮತ್ತೆ ಆರಂಭವಾಗಿದೆ. ಸರ್ಕಾರದ ಈ ನಡೆಯು ಭಾರತ ಮತ್ತು ಬಾಂಗ್ಲಾದೇಶ ಎರಡೂ ದೇಶಗಳ ಜನರಿಗೆ ಅನುಕೂಲ ಕಲ್ಪಿಸಲಿದೆ. ಕೊಲ್ಕತ್ತಾ-ಢಾಕಾ-ಕೊಲ್ಕತ್ತಾ ಮೈತ್ರಿ ಎಕ್ಸ್ಪ್ರೆಸ್, ಕೊಲ್ಕತ್ತಾ-ಖುಲ್ನಾ-ಕೊಲ್ಕತ್ತಾ ಬಂಧನ್ ಎಕ್ಸ್ಪ್ರೆಸ್ ರೈಲುಗಳು ಮೇ 29ರಿಂದ ಮತ್ತೆ ಸಂಚಾರ ಆರಂಭಿಸಲಿವೆ ಎಂದು ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲವ್ಯ ಚಕ್ರವರ್ತಿ ಮಾಹಿತಿ ನೀಡಿದರು.
ಭಾರತ-ಬಾಂಗ್ಲಾದೇಶ ನಡುವೆ ಸಂಚರಿಸುವ ಮೂರನೇ ರೈಲಾದ ಮಿಥಾಲಿ ಎಕ್ಸ್ಪ್ರೆಸ್ ಜೂನ್ 1ರಿಂದ ಸಂಚಾರ ಆರಂಭಿಸಲಿದ್ದು ನ್ಯೂ ಜಲ್ಗೈಪುರಿಯಿಂದ ಢಾಕಾಗೆ ಪ್ರಯಾಣ ಬೆಳೆಸಲಿದೆ. ಈ ಮೂರೂ ರೈಲುಗಳ ಎಲ್ಲ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅವಧಿಗೆ ಮೊದಲೇ ನಿಲ್ದಾಣ ತಲುಪಿದ ರೈಲು: ಪ್ರಯಾಣಿಕರ ಡ್ಯಾನ್ಸ್
ನಾವು ಪ್ರಯಾಣಿಸುವಾಗ ಪ್ರತಿ ಬಾರಿಯೂ ನಾವು ತಲುಪಬೇಕಾದ ಸ್ಥಳವನ್ನು ಸರಿಯಾದ ಸಮಯಕ್ಕೆ ತಲುಪುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಬಸ್, ಕ್ಯಾಬ್, ರೈಲಿನಲ್ಲಿ ಓಡಾಡುವಾಗ ಸಮಯದಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಆದರೆ, ರೈಲು ತನ್ನ ನಿಗದಿತ ಸಮಯಕ್ಕಿಂತ 20 ನಿಮಿಷಗಳ ಮೊದಲು ನಿಲ್ದಾಣವನ್ನು ತಲುಪಿದ ಹಿನ್ನೆಲೆಯಲ್ಲಿ ಬಹಳ ಖುಷಿಯಾದ ಪ್ರಯಾಣಿಕರು ರೈಲ್ವೆ ಸ್ಟೇಷನ್ನಲ್ಲೇ (Railway Station) ಡ್ಯಾನ್ಸ್ ಮಾಡಿ, ಸಂಭ್ರಮಾಚರಣೆ ಮಾಡಿರುವ ವಿಡಿಯೋ ಇದೀಗ ವೈರಲ್ (Video Viral) ಆಗಿದೆ. ಈ ವಿಡಿಯೋವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಕೂಡ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಾಂದ್ರಾ-ಹರಿದ್ವಾರ ರೈಲು ಬುಧವಾರ ರಾತ್ರಿ 10.15ಕ್ಕೆ ಮಧ್ಯಪ್ರದೇಶದ ರತ್ಲಾಮ್ ನಿಲ್ದಾಣಕ್ಕೆ ಬಂದಾಗ ಖುಷಿಯಾದ ಪ್ರಯಾಣಿಕರು ರೈಲ್ವೆ ಪ್ಲಾಟ್ಫಾರ್ಮ್ ಮೇಲೆ ಡ್ಯಾನ್ಸ್ ಮಾಡಿದರು. ಈ ವಿಡಿಯೋವನ್ನು ಸಚಿವ ಅಶ್ವಿನಿ ವೈಷ್ಣವ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ಪ್ರಯಾಣಿಕರಿಗೆ 10 ನಿಮಿಷಗಳ ಸಾಮಾನ್ಯ ನಿಲುಗಡೆ ಸಮಯಕ್ಕಿಂತ ಸಾಕಷ್ಟು ಹೆಚ್ಚು ಸಮಯ ಸಿಕ್ಕಿದ್ದರಿಂದ ಅವರೆಲ್ಲರೂ ರೈಲಿನಿಂದ ಪ್ಲಾಟ್ಫಾರ್ಮ್ಗೆ ಇಳಿದು ಗರ್ಬಾ ನೃತ್ಯ ಪ್ರದರ್ಶಿಸುತ್ತಿರುವುದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:26 am, Sun, 29 May 22