ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಸುಂಟರಗಾಳಿಯಂತೆ ದೇಶವ್ಯಾಪಿ ಹಬ್ಬುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 4,56,115 ಜನರಿಗೆ ಹೊಕ್ಕಿದ್ರೆ, ಸೋಂಕಿನಿಂದಾಗಿ 14 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ 1,83,058 ಜನರು ಸೋಂಕಿನಿಂದ ನರಳುತ್ತಿದ್ರೆ, 2,58,574 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.
ಟ್ರೈನಿ ನಾವಿಕರಿಗೆ ಕೊರೊನಾ!
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಅಬ್ಬರಕ್ಕೆ ಕೊನೆಯೇ ಇಲ್ಲದಂತಾಗಿದೆ. ನೌಕಾದಳದಲ್ಲಿ ತರಬೇತಿ ಪಡೆಯುತ್ತಿದ್ದ ನಾಲ್ವರು ನಾವಿಕರಿಗೆ ಕೊರೊನಾ ಸೋಂಕು ಹಬ್ಬಿದೆ. ಪುಣೆಯ ಲೊನ್ವಾಲಾದ ಭಾರತೀಯ ನೌಕಾದಳದ ಐಎನ್ಎಸ್ ಶಿವಾಜಿ ಕೇಂದ್ರದಲ್ಲಿ ಸೋಂಕು ಪತ್ತೆಯಾಗಿದ್ದು, ಸಂಸ್ಥೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾದಂತಾಗಿದೆ.
ಕೊರೊನಾಗೆ ಶಾಸಕ ಬಲಿ
ಕ್ರೂರಿ ಕೊರೊನಾ ವೈರಸ್ ಜನಸಾಮಾನ್ಯರಿಂದ ಹಿಡಿದು, ಜನ ನಾಯಕರನ್ನೂ ಬಿಡದೇ ಕಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ ಶಾಸಕ ತಮೋನ್ಸ್ ಘೋಷ್ ಸೋಂಕಿಗೆ ಬಲಿಯಾಗಿದ್ದಾರೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಘೋಷ್ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಅಂತಾ ಸಿಎಂ ಮಮತಾ ಬ್ಯಾನರ್ಜಿ ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ.
ದಿನಕ್ಕೆ 2 ಲಕ್ಷ ಕೊವಿಡ್ ಟೆಸ್ಟ್
ಭಾರತದಲ್ಲಿ ಕ್ರೂರಿ ಕೊರೊನಾ ವೈರಸ್ ಕಾಟದಿಂದಾಗಿ, ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದ್ದು, ಟೆಸ್ಟ್ ಪ್ರಮಾಣವೂ ಹೆಚ್ಚುತ್ತಿದೆ. ದೇಶದಲ್ಲಿ ಪ್ರತಿ ದಿನ 2 ಲಕ್ಷ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ ಅಂತಾ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ಹೇಳಿದೆ. ಇದರಲ್ಲಿ 730 ಸರ್ಕಾರಿ ಲ್ಯಾಬ್ ಮತ್ತು 270 ಖಾಸಗಿ ಲ್ಯಾಬ್ಗಳಲ್ಲಿ ಕೊರೊನಾ ತಪಾಸಣೆ ನಡೆಸುತ್ತಿರುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಲಕ್ಷಕ್ಕೂ ಅಧಿಕ ಭಾರತೀಯರು ವಾಪಸ್
ಕೊರೊನಾ ಸೋಂಕು ಬಂದಾಗಿನಿಂದ ಲಾಕ್ಡೌನ್ ಹೇರಿದ್ದರಿಂದಾಗಿ ವಿವಿಧ ದೇಶಗಳಲ್ಲಿ ಭಾರತೀಯರು ಲಾಕ್ ಆಗಿದ್ರು. ವಿದೇಶದಲ್ಲಿರುವವನ್ನ ತಾಯ್ನಾಡಿಗೆ ಕರೆತರುವ ವಂದೇ ಭಾರತ್ ಮಿಷನ್ ಯೋಜನೆಯಲ್ಲಿ ಈವರೆಗೂ ಸುಮಾರು 1ಲಕ್ಷದ 25 ಸಾವಿರ ಜನರು ಭಾರತಕ್ಕೆ ವಾಪಸ್ ಆಗಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನ ಸುರಕ್ಷತೆಯಿಂದಾಗಿ ಕರೆತರುವ ಪ್ರಯತ್ನದಲ್ಲಿ ಭಾರತ ಯಶಸ್ವಿಯಾಗಿರುವುದಾಗಿ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ.
ಆಗಸ್ಟ್ ವರೆಗೂ ರೈಲು ಸಂಚಾರವಿಲ್ಲ
ಕೊರೊನಾ ಭೀತಿಯ ಮಧ್ಯೆಯೂ ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಸಹ, ಭಾರತೀಯ ರೈಲ್ವೆ ಹಳಿ ಮೇಲೆ ಇಳಿಯಲು ಸಾಧ್ಯವಾಗಿಲ್ಲ. ಸೋಂಕಿನ ಪ್ರಮಾಣ ದಿನೇ ದಿನೆ ಹೆಚ್ಚುತ್ತಿರೋದ್ರಿಂದಾಗಿ, ಆಗಸ್ಟ್ 15ರ ವರೆಗೂ ರೈಲು ಸಂಚಾರ ಸಾಧ್ಯ ಇಲ್ಲ ಅಂತಾ ರೈಲ್ವೆ ಇಲಾಖೆ ಹೇಳಿದೆ. ಏಪ್ರಿಲ್ 14ರ ವರೆಗೂ ಬುಕ್ ಮಾಡಲಾಗಿರುವ ಟಿಕೆಟ್ ಮೊತ್ತವನ್ನ ವಾಪಸ್ ನೀಡುವುದಾಗಿಯೂ ಹೇಳಲಾಗಿದೆ.
ಸಿಪ್ಲಾದಿಂದ ಕೊರೊನಾಗೆ ಮದ್ದು?
ಕೊರೊನಾ ವೈರಸ್ ಜಗತ್ತಿಗೆ ಪರಿಚಯವಾಗಿ 6 ತಿಂಗಳಿಗೂ ಹೆಚ್ಚು ಸಮಯವೇ ಆದರೂ, ಸೋಂಕಿಗೆ ಇನ್ನೂ ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದ್ರೆ, ಭಾರತೀಯ ಡ್ರಗ್ ತಯಾರಿಕಾ ಕಂಪನಿ ಕೊರೊನಾಗೆ ಔಷಧಿ ಕಂಡು ಹಿಡಿದಿದೆ ಅಂತಾ ಹೇಳಲಾಗ್ತಿದೆ. ಕೊರೊನಾ ಔಷಧಿ 5000ರೂಗೆ ಸಿಗಲಿದೆ ಅಂತಾ ಸಿಪ್ಲಾ ಸಂಸ್ಥೆ ಹೇಳಿದೆ. ಚಿಕಿತ್ಸೆಯ 100 ಮಿಲಿಗ್ರಾಂ ಔಷಧಿ 5000ದಿಂದ 6000 ರೂ ಗೆ ಲಭ್ಯ ಅಂತಾ ಹೇಳಿದೆ.
ಮಕ್ಕಳ ಶಿಕ್ಷಣಕ್ಕೆ ಹೊಡೆತ
ಭಾರತದಲ್ಲಿ ಕ್ರೂರಿ ಕೊರೊನಾ ವೈರಸ್ ಇನ್ನಿಲ್ಲದಂತೆ ಕಾಡಲು ಶುರು ಮಾಡಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದ್ರಿಂದ ಆತಂಕ ವ್ಯಕ್ತಪಡಿಸಿದ ಯುನಿಸೆಫ್, ಕೊರೊನಾ ಸೋಂಕಿನ ಪರಿಣಾಮ ಭಾರತದಲ್ಲಿ 247 ಮಿಲಿನ್ ಶಾಲಾ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ ಅಂತಾ ಹೇಳಿದ್ದಾರೆ. ಶಾಲಾ ಕಾಲೇಜುಗಳು ತೆರೆಯದೇ ಇರೋದ್ರಿಂದ ಅವರ ಮುಂದಿನ ಭವಿಷ್ಯ ರೂಪಿಸುವ ಶಿಕ್ಷಣದ ಮೇಲೆ ಪರಿಣಾಮ ಸಾಧ್ಯತೆ ಇದೆ ಅಂತಾ ಯುನಿಸೆಫ್ ಆತಂಕ ವ್ಯಕ್ತಪಡಿಸಿದೆ.
ಬಿಜೆಪಿ ಶಾಸಕನಿಗೂ ಸೋಂಕು
ಅಸ್ಸಾಂನಲ್ಲಿ ಕ್ರೂರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಲೇ ಇದ್ದು, ಸೋಂಕಿನ ಸಂಖ್ಯೆ 6 ಸಾವಿರಕ್ಕೆ ಏರಿಕೆಯಾಗಿದೆ. ಇದ್ರ ಮಧ್ಯೆ ಬಿಜೆಪಿ ಶಾಸಕನಿಗೂ ವೈರಸ್ ಹೊಕ್ಕಿದ್ದು, ಆಘಾತ ಹುಟ್ಟಿಸಿದೆ. ಶಾಸಕ ಕೃಷ್ಣನೇಂದು ಪೌಲ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಜೂನ್ 18 ರಂದು ಶಾಸಕರ ಸ್ವ್ಯಾಬ್ ಟೆಸ್ಟ್ ಪಡೆಯಲಾಗಿತ್ತು. ರಿಪೋರ್ಟ್ ನಿನ್ನೆ ಬಂದಿದ್ದು, ಶಾಸಕರ ಕಚೇರಿಯ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲು ಕರೀಂಗಂಜ್ ಜಿಲ್ಲಾಡಳಿತ ಮುಂದಾಗಿದೆ.