ಚೀನಾದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಭಾರತದಲ್ಲಿಯೂ ಆತಂಕ ಮೂಡಿಸಿದೆ. ಕೊರೊನಾ ನಿಯಂತ್ರಣಕ್ಕೆ ಭಾರತ ಸರ್ಕಾರವು ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯುವ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಸಭೆಯ ನಂತರ ವಿಸ್ತೃತ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿತ್ತು. ಈ ಮಧ್ಯೆ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ಶಾಲೆಗಳಿಗಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ.
ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ರಾಜ್ಯಕ್ಕೆ ಬೆಂಗಳೂರಿಗೆ ಸದ್ಯಕ್ಕಿಲ್ಲ ಸ್ಟ್ರಿಕ್ಟ್ ರೂಲ್ಸ್. ಮಾಸ್ಕ್ ಹಾಕಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಬೂಸ್ಟ್ ಡೋಸ್ಗೆ ಒತ್ತು ನೀಡಲು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡುವ ಸಾಧ್ಯತೆಯಿದೆ. ನ್ಯೂ ಇಯರ್ ಹಿನ್ನಲೆ ಮಾಸ್ಕ್ ಧರಿಸುವಂತೆ ರೂಲ್ಸ್ ತರುವ ಸಾಧ್ಯತೆಯಿದೆ. ಹೋಟೆಲ್, ಪಬ್, ಬಾರ್, ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ತೊಂದರೆ ಆಗದಂತೆ ರೂಲ್ಸ್ ಕೈಗೊಳ್ಳಲು ನಿರ್ಧರ. ಥಿಯೇಟರ್, ಮಾಲ್ಗಳಲ್ಲಿ ಪ್ರವೇಶಕ್ಕೆ ಮಾಸ್ಕ್ ಧರಿಸಲು ಸೂಚನೆ ನೀಡುವ ಸಾಧ್ಯತೆಯಿದೆ.
ಚೀನದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ನಿನ್ನೆಯಷ್ಟೇ ಎಲ್ಲಾ ರಾಜ್ಯದ ಆರೋಗ್ಯ ಸಚಿವರೊಂದಿಗೆ ಕೇಂದ್ರ ಸಚಿವರು ಸಭೆ ನಡೆಸಿದ್ದು, ಇದರ ಬೆನ್ನಲ್ಲೇ ರಾಜ್ಯಗಳಿಗೆ ನಿರ್ದೇಶನ ನೀಡಿದ್ದಾರೆ. ಎಲ್ಲಾ ರಾಜ್ಯಗಳು ಸಹ ಆಕ್ಸಿಜನ್ ಸಿಲಿಂಡರ್ ಸ್ಟಾಕ್ ಇಟ್ಟುಕೊಳ್ಳುವುದು. 5 ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ RTPCR ಟೆಸ್ಟ್ ಕಡ್ಡಾಯ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹೊಂಗ್ಕೊಂಗ್ ಮತ್ತೆ ಥೈಲ್ಯಾನ್ಡ್ನಿಂದ ಬರುವವರಿಗೆ ಈ ನಿಯಮ ಅನ್ವಯವಾಗಲಿದೆ. ಬೇರೆ ದೇಶದಿಂದ ಬರುವ ಶೆ.2 ರಷ್ಟು ಪ್ರಯಾಣಿಕರಿಗೆ ರ‍್ಯಾಂಡಮ್ ಕೋವಿಡ್ ಟೆಸ್ಟ್ ಮಾಡುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೀವ ರಕ್ಷಕ ಉಪಕಾರಣಗಳನ್ನ ಸಂಗ್ರಹಿಸಿಡಬೇಕು. ವೆಂಟಿಲೇಟರ್ ಸೇರಿದಂತೆ ಇತರೆ ಅಗತ್ಯ ಉಪಕಾರಣಗಳ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.
ತುಮಕೂರು: ಒಮಿಕ್ರಾನ್ ರೂಪಾಂತರಿ ತಳಿ BF.7 ವ್ಯಾಪಕವಾಗಿ ಹರಡುತ್ತಿದೆ. ಇನ್ನು 3 ರಿಂದ 4 ತಿಂಗಳಲ್ಲಿ BF.7 ವೈರಸ್ ಇಲ್ಲಿಗೂ ಬರಬಹುದು. ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೇರಳದಲ್ಲಿ ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ ಅಂತ ಬರೆದು ಹಾಕ್ತಾರೆ. ಆದರೆ ನಾವು ನಿಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ ಅಂತಾ ಹಾಕಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಹೈದರಾಬಾದ್: ಕೊರೊನಾ ಭೀತಿ ಹಿನ್ನೆಲೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ರ‍್ಯಾಂಡಮ್ ಕೋವಿಡ್ ಪರೀಕ್ಷೆ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂದು ಎಎನ್ಐ ವರದಿ ಮಾಡಿದೆ.
ತುಮಕೂರು: ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ BF.7 ಭೀತಿ ಹಿನ್ನೆಲೆ ಸದ್ಯಕ್ಕೆ ಕೇಂದ್ರದಿಂದ ಅಧಿಕೃತ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದರು. ಮಾಸ್ಕ್, ಹಾಗೂ ಬೂಸ್ಟರ್ ಡೋಸ್ ವಿಚಾರದಲ್ಲಿ ಮುಖ್ಯಮಂತ್ರಿ ಸಲಹೆ ಕೊಟ್ಟಿದ್ದಾರೆ. ಈ ಬಗ್ಗೆ ನಾನು ನಮ್ಮ ಸೀನಿಯರ್ ಲೀಡರ್ ಅಶೋಕ್ರವರು ಸೋಮವಾರ ಸಭೆ ಮಾಡ್ತೇವೆ. ಕೇಂದ್ರ ಆರೋಗ್ಯ ಇಲಾಖೆ ಜತೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದರು.
ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ರೂಲ್ಸ್ ಫಾಲೋ ಮಾಡಲು ನಾವು ರೆಡಿ ಎಂದು ನಿಸರ್ಗ ಹೋಟೆಲ್ ಮ್ಯಾನೇಜರ್ ಟಿವಿ9 ಜೊತೆ ಮಾತನಾಡಿದ್ದಾರೆ. ನಮ್ಮ ಹೋಟೆಲ್ನ ಎಲ್ಲಾ ಸಿಬ್ಬಂದಿಗಳಿಗೂ ಎರಡು ಡೋಸ್ ವ್ಯಾಕ್ಸಿನೇಷನ್ ಆಗಿದೆ. ಬೂಸ್ಟರ್ ಡೋಸ್ ಕೆಲವರಿಗೆ ಮಾತ್ರ ಬಾಕಿ ಇದೆ. ಮತ್ತೆ ಕೊರೊನಾ ಅಂದರೆ ತುಂಬಾ ಕಷ್ಟ ಆಗುತ್ತದೆ. ಎರಡ್ಮೂರು ಅಲೆಯಲ್ಲಿ ತುಂಬಾ ಸಂಕಷ್ಟ ಅನುಭವಿಸಿದ್ದೀವಿ. ಈಗ ಮತ್ತೆ ಕೊರೊನಾ ಅಂತಿದ್ದಾರೆ ಏನು ಮಾಡಬೇಕೆಂದು ಗೊತ್ತಿಲ್ಲ. ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಈಗಾಗಲೇ ಕೊರೊನಾ ರೂಲ್ಸ್ ಫಾಲೋ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು: ಕೊವಿಡ್ ನಿಯಂತ್ರಣ ಕುರಿತು ಸೋಮವಾರ (ಡಿ 24) ನೂತನ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಇಂದು ನಾಲ್ಕನೇ ಶನಿವಾರ ರಜೆ ಹಿನ್ನೆಲೆ ಸಭೆ ಮಾಡಲು ಆಗಿಲ್ಲ. ಇನ್ನೂ ಕೆಲವು ಅಧಿಕಾರಿಗಳು ಬೆಳಗಾವಿಯಲ್ಲೇ ಇದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರ ಜತೆಯೂ ಚರ್ಚಿಸಿ ಮಾಹಿತಿ ಸಂಗ್ರಹಿಸುತ್ತೇವೆ. ಬೆಂಗಳೂರು ನಗರ ಮತ್ತು ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಟಿವಿ9ಗೆ ಪ್ರತಿಕ್ರಿಯಿಸಿದರು.
ಹುಬ್ಬಳ್ಳಿ: ಕೊವಿಡ್ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಅಗತ್ಯ ಸೂಚನೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಮುಂಜಾಗ್ರತಾ ಕ್ರಮವಾಗಿ ಬೂಸ್ಟರ್ ಹಾಕಿಕೊಳ್ಳುವಂತೆ ಸಾರ್ವಜನಿಕರಿಗೆ ಅವರು ಮನವಿ ಮಾಡಿದರು. ಬಸ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಟೆಸ್ಟಿಂಗ್ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು: ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವ ಕುರಿತು ಹಾಗೂ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ಮಹಾನಗರ ಪಾಲಿಕೆಯ ಮಾರ್ಷಲ್ಗಳು ಪ್ರಯತ್ನಿಸುತ್ತಿದ್ದಾರೆ. ಯಶವಂತಪುರ ಸರ್ಕಲ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಕೊವಿಡ್ಗೆ ಸಂಬಂಧಿಸಿದಂತೆ ಅರಿವು ಮೂಡಿಲು ಮಾರ್ಷಲ್ಗಳ ತಂಡವು ಪ್ರಯತ್ನಿಸುತ್ತಿದೆ. ಆದರೂ ಬೆಂಗಳೂರಿನಲ್ಲಿ ಮಾಸ್ಕ್ ಧರಿಸಲು ಜನರು ಹಿಂಜರಿಯುತ್ತಿರುವುದು ಕಂಡುಬಂದಿದೆ.
ಬೆಂಗಳೂರು: ವಿದೇಶಗಳಿಂದ ನಗರಕ್ಕೆ ಬರುವವರಿಗೆ ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಬೇಕು ಎಂಬ ಒತ್ತಡವನ್ನು ಹೇರಲಾಗಿದೆ. ಕೆಲ ದೇಶಗಳಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲು ತಜ್ಞರು ಸಲಹೆ ಮಾಡಿದ್ದಾರೆ. ಈ ಸಂಬಂಧ ನಿನ್ನೆಯಷ್ಟೇ (ಡಿ 23) ಕೇಂದ್ರ ಆರೋಗ್ಯ ಸಚಿವರಿಗೆ ಆರೋಗ್ಯ ಸಚಿವ ಡಾ ಸುಧಾಕರ್ ಮನವಿ ಮಾಡಿದ್ದಾರೆ.
ಬೆಂಗಳೂರು: ಆಟೊ ಮತ್ತು ಕ್ಯಾಬ್ ಚಾಲಕರು ಸ್ವಯಂಪ್ರೇರಿತರಾಗಿ ಮಾಸ್ಕ್ ಧರಿಸಲು ನಿರ್ಧಾರ ಮಾಡಿದ್ದಾರೆ. ಪ್ರಯಾಣಿಕರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಿದ್ದಾರೆ. ಮತ್ತೊಂದೆಡೆ ಬೀದಿಬದಿ ವ್ಯಾಪಾರಿಗಳೂ ಕೊರೊನಾ ಮುಂಜಾಗ್ರತೆಯ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. ‘ಎಲ್ಲ ಬೀದಿಬದಿ ವ್ಯಾಪಾರಿಗಳಿಗೂ ಮಾಸ್ಕ್ ಧರಿಸಿಕೊಂಡೇ ವ್ಯಾಪಾರ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಸರ್ಕಾರವು ಕಠಿಣ ಮಾರ್ಗಸೂಚಿ ನಿಯಮಗಳನ್ನು ಹೊರಡಿಸುವ ಮೊದಲೇ ನಗರದ ಉದ್ಯಮಗಳು ಎಚ್ಚೆತ್ತುಕೊಳ್ಳುತ್ತಿವೆ. ಹೊಟೆಲ್ ಸಿಬ್ಬಂದಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹೊಟೆಲ್ ಮಾಲೀಕರ ಸಂಘವು ಸೂಚನೆ ನೀಡಿದೆ. ಇದೇ ವೇಳೆ ಎಲ್ಲ ಸಿಬ್ಬಂದಿಗೆ ಬೂಸ್ಟರ್ ಡೋಸ್, ಕಡ್ಡಾಯ ಸ್ಯಾನಿಟೈಸರ್ ಬಳಕೆಗೂ ಹೊಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ.
ಬೆಂಗಳೂರು: ಹೊಸ ವರ್ಷಾಚರಣೆಗೆ ಮಾಸ್ಕ್ ಕಡ್ಡಾಯ ಮಾಡುವ ವಿಚಾರವು ಸರ್ಕಾರದ ಪರಿಶೀಲನೆಯಲ್ಲಿದ್ದು ಇನ್ನು ಮೂರ್ನಾಲ್ಕು ದಿನಗಳಲ್ಲಿ ಈ ಸಂಬಂಧ ಅಗತ್ಯ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿದರು. ಈ ಹಿಂದೆ ನಿತ್ಯ 2ರಿಂದ 3 ಸಾವಿರ ಮಂದಿಗೆ ಕೊವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಇದೀಗ ಈಗ ಬೆಂಗಳೂರಿನಲ್ಲಿ ಕೊವಿಡ್ ಟೆಸ್ಟಿಂಗ್ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.
ಬೆಂಗಳೂರು ನಗರದ ಜೀವನಾಡಿ ಎನಿಸಿರುವ ಬೆಂಗಳೂರು ಮೆಟ್ರೋ ರೈಲುಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಇಲ್ಲದ ಪ್ರಯಾಣಿಕರಿಗೆ ರೈಲು ಹತ್ತಲು ಅವಕಾಶ ಸಿಗುತ್ತಿಲ್ಲ. ಮೆಜೆಸ್ಟಿಕ್ ಸೇರಿದಂತೆ ವಿವಿಧ ಮೆಟ್ರೋ ನಿಲ್ದಾಣಗಳ ಬಳಿ ಪ್ರಯಾಣಿಕರು ತರಾತುರಿಯಲ್ಲಿ ಮಾಸ್ಕ್ಗಳನ್ನು ಖರೀದಿಸುತ್ತಿದ್ದ ದೃಶ್ಯ ಶನಿವಾರ ಕಂಡುಬಂತು.
ದೆಹಲಿ: ವಿಶ್ವದ ಹಲವು ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿಗಳ ಹಾವಳಿ ಹೆಚ್ಚಾಗಿದೆ. ಚೀನಾದಲ್ಲಿ BF 7 ಕೊರೊನಾ ಉಪತಳಿಯು ಜನರನ್ನು ಕಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು ಎಂಬ ಆತಂಕ ವ್ಯಕ್ತವಾಗಿದೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ದುಪ್ಪಟ್ಟಾಗುತ್ತಿವೆ. ಜನವರಿ ಮಧ್ಯಭಾಗದಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠಮಟ್ಟಕ್ಕೆ ತಲುಪಬಹುದು ಎಂದು ಶಂಕಿಸಲಾಗಿದೆ. ಫೆಬ್ರುವರಿ ಕೊನೆಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ದಿನಕ್ಕೆ 3 ಕೋಟಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಮಾರ್ಚ್ ಮೊದಲ ವಾರದಲ್ಲಿ ದಿನಕ್ಕೆ 4 ರಿಂದ 4.5 ಲಕ್ಷ ಜನರು ಸಾವನ್ನಪ್ಪಬಹುದು ಎಂದು ಅಂದಾಜಿಸಲಾಗಿದೆ. ಈ ವಿದ್ಯಮಾನವು ಚೀನಾದೊಂದಿಗೆ ಭೌಗೋಳಿಕ ಗಡಿ ಹಂಚಿಕೊಂಡಿರುವ ಭಾರತದಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲಿ ಪರಿಸ್ಥಿತಿಯು ಚೀನಾದಷ್ಟು ಹದಗೆಡುವ ಸಾಧ್ಯತೆ ಕಡಿಮೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಬೆಂಗಳೂರು: ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದ ಪ್ರಯಾಣಿಕರನ್ನು ಬಸ್ಗಳಿಗೆ ಹತ್ತಿಸಿಕೊಳ್ಳುವಂತಿಲ್ಲ ಎಂದು ಕಂಡಕ್ಟರ್ ಮತ್ತು ಡ್ರೈವರ್ಗಳಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು: ಕೊವಿಡ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ರೂಪಿಸುವ ಸಂಬಂಧ ನಡೆಯಬೇಕಿದ್ದ ‘ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ’ದ ಸಭೆ ಶನಿವಾರ (ಡಿ 24) ನಡೆಯುವುದು ಅನುಮಾನ. ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ಅವರ ದಿನದ ಕಾರ್ಯಚಟುವಟಿಕೆಯಲ್ಲಿ ಈ ಸಂಬಂಧ ಯಾವುದೇ ಸೂಚನೆಯಿಲ್ಲ. ಸಭೆಯಲ್ಲಿ ಪಾಲ್ಗೊಳ್ಳಬೇಕಿರುವ ಆರೋಗ್ಯ ಸಚಿವ ಡಾ ಕೆ.ಸುಧಾಕರ ಅವರು ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸದಲ್ಲಿದ್ದಾರೆ. ವಿಪತ್ತು ನಿರ್ವಹಣಾ ಇಲಾಖೆಯ ಬಹುತೇಕ ಅಧಿಕಾರಿಗಳು ಬೆಳಗಾವಿಯಲ್ಲಿಯೇ ಇದ್ದಾರೆ.
ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ BF.7 ತೀವ್ರವಾಗಿ ಹರಡುತ್ತಿರುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ಇಂದಿನಿಂದ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳಿಗೆ ನೆಗಡಿ, ಕೆಮ್ಮು, ಜ್ವರ ಕಂಡುಬಂದರೆ ರಜೆ ನೀಡಬೇಕು. ಶಾಲಾ ಆವರಣದಲ್ಲಿ ಎರಡು ದಿನಗಳಿಗೆ ಒಮ್ಮೆ ಸ್ಯಾನಿಟೈಸ್ ಮಾಡಿಸಬೇಕು. ಶಿಕ್ಷಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲಾ ಆವರಣದಲ್ಲಿ ಮಕ್ಕಳು ಗುಂಪು ಗೂಡುವುದನ್ನು ತಡೆಯಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಇತರೆ ಮಕ್ಕಳಿಗೆ ನೀರು, ಆಹಾರ ಹಂಚದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದಿಂದ ಇಂದು ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಸಭೆಯಲ್ಲಿ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಹೊಸ ವರ್ಷಾಚರಣೆ ಬಗ್ಗೆ ಮತ್ತೊಂದು ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Published On - 6:43 am, Sat, 24 December 22