ಟ್ವೀಟ್ ವಾರ್: ದಿಲ್ಜಿತ್ ಹಾಡು ರಿಹಾನ್ನಾಗೆ ಅರ್ಪಣೆ, ದೇಶಪ್ರೇಮ ಸಾಬೀತಿಗೆ ಕಂಗನಾ ಸವಾಲು

ದೇವತೆಯಂಥ ರಿಹಾನ್ನಾರನ್ನು ಸೃಷ್ಟಿಸಿದ್ದಕ್ಕಾಗಿ ದೇವರಿಗೆ ವಂದನೆ ಎಂದು ಹೇಳುವ ಹೊಸ ಹಾಡಿನ ಬಗ್ಗೆ ದಿಲ್ಜಿತ್ ಮಾಡಿದ ಟ್ವೀಟ್​ಗೆ ಕಂಗನಾ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

  • TV9 Web Team
  • Published On - 20:00 PM, 3 Feb 2021
ಟ್ವೀಟ್ ವಾರ್: ದಿಲ್ಜಿತ್ ಹಾಡು ರಿಹಾನ್ನಾಗೆ ಅರ್ಪಣೆ, ದೇಶಪ್ರೇಮ ಸಾಬೀತಿಗೆ ಕಂಗನಾ ಸವಾಲು
ದಿಲ್ಜಿತ್ ದೊಸಾಂಜ್ ಮತ್ತು ಕಂಗನಾ ರನೌತ್

ಮುಂಬೈ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅಂತರರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಬೆಂಬಲ ಸೂಚಿಸಿದ್ದರ ಬಗ್ಗೆ ಪರ ವಿರೋಧ ಚರ್ಚೆಗಳು ಕಾವೇರುತ್ತಿರುವ ಹೊತ್ತಿನಲ್ಲೇ ಪಂಜಾಬಿ ಗಾಯಕ, ನಟ ದಿಲ್ಜಿತ್ ದೊಸಾಂಜ್ ‘ರಿರಿ’ ಹಾಡನ್ನು ರಿಹಾನ್ನಾ ಅವರಿಗೆ ಅರ್ಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಕಂಗನಾ ರನೌತ್, ಈತ ಎರಡು ರೂಪಾಯಿ ಗಳಿಸಲು ನೋಡುತ್ತಿದ್ದಾನೆ. ನೀವು ಎಷ್ಟು ಕಾಲದಿಂದ ಈ ಯೋಜನೆ ರೂಪಿಸಿದ್ದೀರಿ? ಇದಕ್ಕೆ ಕನಿಷ್ಠ ಒಂದು ತಿಂಗಳು ಬೇಕಾಗಿರುತ್ತದೆ. ಈಗ ಇದೆಲ್ಲ ಸಹಜವಾಗಿ ಆಯಿತು ಎಂದು ನಮ್ಮನ್ನು ನಂಬಿಸಲು ಯತ್ನಿಸುತ್ತಿದ್ದಾರೆ ಎಂದು #Indiatogether #IndiaAgainstPropoganda ಎಂಬ ಹ್ಯಾಷ್​​ಟ್ಯಾಗ್​ನೊಂದಿಗೆ ಟ್ವೀಟ್ ಮಾಡಿದ್ದಾರೆ.

ದೇವತೆಯಂಥ ರಿಹಾನ್ನಾರನ್ನು ಸೃಷ್ಟಿಸಿದ್ದಕ್ಕಾಗಿ ದೇವರಿಗೆ ವಂದನೆ ಎಂದು ಹೇಳುವ ಹೊಸ ಹಾಡಿನ ಬಗ್ಗೆ ದಿಲ್ಜಿತ್ ಮಾಡಿದ ಟ್ವೀಟ್​ಗೆ ಕಂಗನಾ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಕಂಗನಾ ಅವರ ಈ ಟ್ವೀಟ್ ಗೆ ಉತ್ತರಿಸಿ ದಿಲ್ಜಿತ್, ‘ಎರಡು ರೂಪಾಯಿ. ನೀವು ನನಗೆ ಕೆಲಸ ಕಲಿಸಲು ಬರಬೇಡಿ. ನಾನು ಅರ್ಧ ಗಂಟೆಯಲ್ಲಿ ಹಾಡೊಂದನ್ನು ರೂಪಿಸಬಲ್ಲೆ. ನಿಮ್ಮ ಬಗ್ಗೆ ಹಾಡು ಮಾಡಬೇಕಾದರೆ ನನಗೆ ಎರಡು ನಿಮಿಷ ಸಾಕು, ಆದರೆ ನಾನು ಮಾಡಲ್ಲ. ನೀವು ಎಲ್ಲ ಕಡೆ ಮೂಗು ತೂರಿಸುವುದೇಕೆ? ನನಗೆ ಬೋರ್ ಹೊಡೆಸಬೇಡಿ, ಹೋಗಿ ನಿಮ್ಮ ಕೆಲಸ ನೋಡಿಕೊಳ್ಳಿ’ ಎಂದರು.

ಇವರ ನಡುವಿನ ಟ್ವೀಟ್ ಜಗಳದ ಮುಂದುವರಿಕೆ ಹೀಗಾಯ್ತು..
ಕಂಗನಾ: ನನಗಿರುವುದು ಒಂದೇ ಒಂದು ಕೆಲಸ. ಅದು ದೇಶಭಕ್ತಿ. ನಾನು ಪ್ರತಿದಿನ ಅದನ್ನೇ ಮಾಡುತ್ತಿದ್ದೇನೆ.ನಾನು ಆ ಕೆಲಸವನ್ನು ಮುಂದುವರಿಸುತ್ತೇನೆ. ನಿಮ್ಮ ಯೋಜನೆ ಸಫಲವಾಗಲು ಬಿಡಲ್ಲ, ಖಾಲಿಸ್ತಾನಿ.

ದಿಲ್ಜಿತ್: ನೀವು ಅರ್ಥವಿಲ್ಲದೆ ಮಾತನಾಡುತ್ತಿದ್ದೀರಿ, ದೇವರಂತೆ ಆಡ್ಬೇಡಿ. ನನ್ನನ್ನು ಸಫಲವಾಗಲು ಬಿಡಲ್ಲ ಅಂತಿದ್ದೀರಾ. ನೀವ್ಯಾರು? ನೀವು ಪ್ರತಿ ಬಾರಿ ಮೂಗು ತೂರಿಸಿಕೊಂಡು ಬರುತ್ತಿದ್ದೀರಿ, ಆಚೆ ಹೋಗ್ರೀ.. ನಿಮ್ಮ ಬಗ್ಗೆ ಯಾರೂ ಮಾತಾಡ್ತಿಲ್ಲ.
ಈ ದೇಶ ನಿಮ್ಮದು ಮಾತ್ರ ಅಲ್ಲ. ನಿಮಗೇನಾಗಿದೇ? ನೀವು ಯಾವ ಭ್ರಮೆಯಲ್ಲಿ ಬದುಕುತ್ತಿದ್ದೀರಿ? ಈ ದೇಶ ನಮ್ಮೆಲ್ಲರದ್ದು. ಗಮನಿಸಿ, ಭಾರತ ನಮಗೂ ಸೇರಿದ್ದು

ಕಂಗನಾ: ಭಾರತ ಭಾರತೀಯರಿಗೆ ಸೇರಿದ್ದು, ಖಾಲಿಸ್ತಾನಿಗಳದದ್ದು ಅಲ್ಲ. ನೀವು ಖಾಲಿಸ್ತಾನಿ ಅಲ್ಲ ಅಂತ ಹೇಳಿ. ಪ್ರತಿಭಟನೆಯಲ್ಲಿ ಖಾಲಿಸ್ತಾನಿಗಳು ಭಾಗವಹಿಸಿರುವುದನ್ನು ಖಂಡಿಸುತ್ತೀನಿ ಎಂದು ಹೇಳಿ, ನೀವು ಹೀಗೆ ಹೇಳಿದರೆ ನಾನು ಕ್ಷಮೆ ಕೇಳುವೆ. ನಿಮ್ಮನ್ನು ನಿಜವಾದ ದೇಶಭಕ್ತ ಎಂದೂ ಪರಿಗಣಿಸುವೆ. ದಯವಿಟ್ಟು ಹೇಳಿ, ನಾನು ಕಾಯುತ್ತಿರುವೆ.

ದಿಲ್ಜಿತ್: ನಾವು ಭಾರತದೊಂದಿಗೆ ಇದ್ದೇವೆ. ಯಾರಾದರೂ ತಪ್ಪು ಹೇಳಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಅದು ಅವರ ಕೆಲಸ. ನಮ್ಮದು ಅಥವಾ ನಿಮ್ಮದಲ್ಲ.

ಕಂಗನಾ: ನೀವು ಖಾಲಿಸ್ತಾನಿ ಅಲ್ಲ ಎಂಬುದನ್ನು ಯಾವತ್ತೂ ಒಪ್ಪಿಕೊಳ್ಳಲ್ಲ ಎಂದು ನನಗೆ ಗೊತ್ತಿತ್ತು. ನೀವು ಕುರಿಯ ಚರ್ಮ ಧರಿಸಿರುವ ತೋಳ ..ಜೈ ಹಿಂದ್

ದಿಲ್ಜಿತ್: ನಾನು ಇಡೀ ದಿನ ಈಕೆ ಜತೆ ಜಗಳ ಮಾಡಿಕೊಂಡಿರಲಿ ಎಂದು ಈಕೆ ಬಯಸುತ್ತಾಳೆ. ನಾವು ಭಾರತೀಯರೇ. ನೀವೊಬ್ಬಳೇ ಅಲ್ಲ. ಆಕೆಯ ಪ್ರಶ್ನೆಗೆ ಆಕೆಯೇ ಉತ್ತರಿಸಿ ಖುಷಿ ಪಡುತ್ತಾಳೆ. ನಾನೊಬ್ಬಳೇ ದೇಶಭಕ್ತೆ ಎಂದು ಸರ್ಟಿಫಿಕೇಟ್ ಹಿಡಿದು ತಿರುಗುತ್ತಿದ್ದಾಳೆ. ತೋಳದಂಥವಳು.

ಕಂಗನಾ: ನಿಮ್ಮ ಕೆನಡಾ ಗ್ಯಾಂಗ್ ಗೆ ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಮಿದುಳಿನಲ್ಲಿರುವ ಖಾಲಿ ಜಾಗದಲ್ಲಿ ಮಾತ್ರ ಖಾಲಿಸ್ತಾನವಿರುತ್ತದೆ. ನೀವು ಎಷ್ಟೇ ದಂಗೆ, ಪ್ರತಿಭಟನೆ ಮಾಡಿದರೂ ನಾವು ಈ ದೇಶವನ್ನು ವಿಭಜನೆ ಮಾಡಲು ಬಿಡಲ್ಲ.

ದಿಲ್ಜಿತ್:   ಇನ್ನು ಮುಂದೆ ನಾನು ನಿಮ್ಮೊಂದಿಗೆ ಚರ್ಚೆ ಮಾಡಲು ಬರುವುದಿಲ್ಲ. ನನಗೆ ನೂರು ಕೆಲಸ ಮಾಡಲಿದೆ. ನಿಮ್ಮ ಟ್ವೀಟ್​ಗಳಿಗೆ ಅರ್ಥವಿಲ್ಲ. ನಿಮ್ಮ ಟ್ವೀಟ್ ಬಗ್ಗೆ ನಾನು ಯಾಕೆ ತಲೆಕೆಡಿಸಿಕೊಳ್ಳಲಿ. ನಿಮಗೆ ನಾನು ಯಾಕೆ ಉತ್ತರಿಸಬೇಕು? ನೀವು ನನ್ನ ಶಿಕ್ಷಕಿ ಅಲ್ಲ.

ಕಂಗನಾ: ಸರಿ, ಹಾಗಾದರೆ ನೀನು ಖಾಲಿಸ್ತಾನಿ ಅಲ್ಲ ಎಂದು ಹೇಳಿಬಿಡು. ಯಾಕೆ ಇಷ್ಟು ಸುತ್ತಿ ಬಳಸಿ ಮಾತನಾಡುತ್ತಿದ್ದೀ? ಸರಳವಾಗಿ ಹೇಳಿ ಬಿಡು. ಯಾಕೆ ಹೇಳಲ್ಲ? ಈ ಚರ್ಚೆಯೂ ಮುಗಿಯಬಹುದು. ನನ್ನ ಸಂದೇಹವೂ ದೂರವಾಗಬಹುದು. ದಯವಿಟ್ಟು ಹೇಳಿ.

ಪ್ರತಿಭಟನೆ ನಿರತ ರೈತರಿಗೆ ಬೆಂಬಲ ಸೂಚಿಸಿದ ಪಾಪ್ ತಾರೆ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥುನ್​ಬರ್ಗ್

ನಟ, ಗಾಯಕ ದಿಲ್ಜಿತ್​ ದೋಸಾಂಜ್​ ಹಾಸ್ಯಪ್ರಜ್ಞೆ ಅಭಿಮಾನಿಗಳು ಫಿದಾ: ಇಲ್ಲಿವೆ ಅವರ ಫನ್ನಿ ಪೋಸ್ಟ್​ಗಳು

Delhi Chalo | ಕಂಗನಾ-ದಿಲ್ಜಿತ್ ಟ್ವೀಟ್ ಸಮರ ನಿಲ್ಲಲಿಲ್ಲ