ಸೇನಾ ಕಾರ್ಯಾಚರಣೆಯ ಲೈವ್ ಕವರೇಜ್ ಬೇಡ: ಟಿವಿ ಚಾನೆಲ್​ಗಳಿಗೆ ರಕ್ಷಣಾ ಇಲಾಖೆ ಸೂಚನೆ

ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಸುದ್ದಿವಾಹಿನಿಗಳು ನೇರ ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಈ ಹಿಂದಿನ ಕಾರ್ಯಾಚರಣೆಗಳ ಸಂದರ್ಭದಲ್ಲಿ ಆದ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಸೇನೆಯ ಸಿಬ್ಬಂದಿಯ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಸೂಚನೆ ನೀಡಲಾಗಿದೆ.

ಸೇನಾ ಕಾರ್ಯಾಚರಣೆಯ ಲೈವ್ ಕವರೇಜ್ ಬೇಡ: ಟಿವಿ ಚಾನೆಲ್​ಗಳಿಗೆ ರಕ್ಷಣಾ ಇಲಾಖೆ ಸೂಚನೆ
ಸಾಂದರ್ಭಿಕ ಚಿತ್ರ

Updated on: May 09, 2025 | 1:03 PM

ನವದೆಹಲಿ, ಮೇ 9: ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆಯ ನಂತರ ಭಾರತ ಮತ್ತು ಪಾಕಿಸ್ತಾನ ಸೇನಾ ಪಡೆಗಳ ನಡುವೆ ದಾಳಿ ಹಾಗೂ ಪ್ರತಿ ದಾಳಿ ಹೆಚ್ಚಾಗಿದೆ. ಈ ಬಗ್ಗೆ ಸುದ್ದಿವಾಹಿನಿಗಳಲ್ಲಿ ನಿರಂತರ ನೇರ ಪ್ರಸಾರ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸುವಂತೆ ರಕ್ಷಣಾ ಸಚಿವಾಲಯ (Defence Ministry) ಸೂಚನೆ ನೀಡಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಕಳುಹಿಸಿರುವ ರಕ್ಷಣಾ ಇಲಾಖೆ, ಭಾರತೀಯ ಸೇನೆಯ ಸಿಬ್ಬಂದಿಯ ಜೀವಕ್ಕೆ ಅಪಾಯ ಎದುರಾಗಬಹುದಾದ ಸಾಧ್ಯತೆ ಇರುವುದರಿಂದ ಈ ಸೂಚನೆ ನೀಡಲಾಗಿದೆ ಎಂದಿದೆ.

ಎಲ್ಲಾ ಮಾಧ್ಯಮ ವಾಹಿನಿಗಳು, ಡಿಜಿಟಲ್ ವೇದಿಕೆಗಳು ಮತ್ತು ಇತರರು ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಅಥವಾ ರಿಯಲ್ ಟೈಮ್ ರಿಪೋರ್ಟ್ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಅಂತಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ಕಾರ್ಯಾಚರಣೆಯ ಪರಿಣಾಮಕಾರಿತ್ವಕ್ಕೆ ಅಪಾಯ ಉಂಟುಮಾಡಬಹುದು ಮತ್ತು ಸೇನಾ ಸಿಬ್ಬಂದಿ ಜೀವಗಳಿಗೆ ಅಪಾಯವನ್ನು ಉಂಟುಮಾಡಬಹುದು ಎಂದು ರಕ್ಷಣಾ ಇಲಾಖೆ ಹೇಳಿದೆ.

ಇದನ್ನೂ ಓದಿ
ಬೆಂಗಳೂರು ಹೆಚ್​ಎಎಲ್​ನಲ್ಲಿ ಹೈ ಅಲರ್ಟ್, ಸಿಬ್ಬಂದಿ ರಜೆ ರದ್ದು
ಮತ್ತೆ ಪಾಕಿಸ್ತಾನದೊಳಗೆ ನುಗ್ಗಿದ ಭಾರತ; ಇಸ್ಲಮಾಬಾದ್, ಲಾಹೋರ್ ಮೇಲೆ ದಾಳಿ
ಚೀನಾ ಜೆಟ್‌ ಬಳಸಿದ್ದೇವೆಂಬ ಪಾಕ್ ಹೇಳಿಕೆಗೆ ಬೀಜಿಂಗ್ ಪ್ರತಿಕ್ರಿಯೆ
ದಾಳಿಗೆ ಯತ್ನ: ಪಾಕ್​​​ ಫೈಟರ್​ ಜೆಟ್ ಧ್ವಂಸಗೊಳಿಸಿದ​ ಭಾರತೀಯ ಸೇನಾಪಡೆ

ರಕ್ಷಣಾ ಇಲಾಖೆ ಟ್ವೀಟ್


ಕಾರ್ಗಿಲ್ ಯುದ್ಧ, 26/11 ದಾಳಿಗಳು ಮತ್ತು ಕಂದಹಾರ್ ಅಪಹರಣದಂತಹ ಹಿಂದಿನ ಘಟನೆಗಳು ನೇರ ಪ್ರಸಾರದ ಅಪಾಯಗಳನ್ನು ಮನವರಿಕೆ ಮಾಡಿಕೊಟ್ಟಿವೆ. ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ತಿದ್ದುಪಡಿ) ನಿಯಮಗಳು, 2021 ರ ಷರತ್ತು 6(1)(p) ಪ್ರಕಾರ, ಭಯೋತ್ಪಾದನಾ-ನಿಗ್ರಹ ಕಾರ್ಯಾಚರಣೆಗಳ ಸಮಯದಲ್ಲಿ ಗೊತ್ತುಪಡಿಸಿದ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಲು ಅನುಮತಿಸಲಾಗಿದೆ. ಎಲ್ಲಾ ಮಾಧ್ಯಮಗಳು ರಾಷ್ಟ್ರದ ಸೇವೆ ಸಂಬಂಧಿತ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯುವ ಮೂಲಕ ಕವರೇಜ್‌ನಲ್ಲಿ ಜಾಗರೂಕತೆ, ಸೂಕ್ಷ್ಮತೆ ಮತ್ತು ಜವಾಬ್ದಾರಿಯನ್ನು ಕಾಪಾಡಬೇಕು ಎಂದು ಆಗ್ರಹಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ