‘ಸಹಾಯಕ್ಕೆ ಭಾರತ ಸಿದ್ಧ’; ಬಾಂಗ್ಲಾದೇಶದ ವಾಯುಪಡೆಯ ವಿಮಾನ ದುರಂತಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ಬಾಂಗ್ಲಾದೇಶದಲ್ಲಿ ವಾಯುಪಡೆಯ ಜೆಟ್ ಪತನವಾಗಿ 20 ಜನರು ಮೃತಪಟ್ಟಿದ್ದಾರೆ. ಢಾಕಾದಲ್ಲಿ ಇಂದು ಮುಂಜಾನೆ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ಹಲವಾರು ಯುವ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜೀವಹಾನಿಯಿಂದ ತೀವ್ರ ಆಘಾತ ಮತ್ತು ದುಃಖಿತನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್​ನಲ್ಲಿನ ಪೋಸ್ಟ್​ನಲ್ಲಿ ಹೇಳಿದ್ದಾರೆ. ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

‘ಸಹಾಯಕ್ಕೆ ಭಾರತ ಸಿದ್ಧ’; ಬಾಂಗ್ಲಾದೇಶದ ವಾಯುಪಡೆಯ ವಿಮಾನ ದುರಂತಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ
Modi

Updated on: Jul 21, 2025 | 10:44 PM

ಢಾಕಾ; ಜುಲೈ 21: ಬಾಂಗ್ಲಾದೇಶದ (Bangladesh) ಢಾಕಾದಲ್ಲಿರುವ ಶಾಲಾ ಆವರಣಕ್ಕೆ ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. “ಢಾಕಾದಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ಹಲವಾರು ಯುವ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜೀವಹಾನಿಯಿಂದ ತೀವ್ರ ಆಘಾತ ಮತ್ತು ದುಃಖಿತನಾಗಿದ್ದೇನೆ. ಮೃತರ ಕುಟುಂಬಗಳಿಗೆ ನಮ್ಮ ಹೃದಯಗಳು ಸಂತಾಪ ಸೂಚಿಸುತ್ತವೆ. ಗಾಯಗೊಂಡವರ ತ್ವರಿತ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ. ಭಾರತವು ಬಾಂಗ್ಲಾದೇಶದೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶಕ್ಕೆ ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಕ್ಸ್​ನಲ್ಲಿ ಬರೆದಿದ್ದಾರೆ.

ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವು ಢಾಕಾದ ಉತ್ತರ ಪ್ರದೇಶದ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿಗೆ ಅಪ್ಪಳಿಸಿದ ನಂತರ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ, 171ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 83ಕ್ಕೂ ಹೆಚ್ಚು ಜನ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಬಾಂಗ್ಲಾದೇಶ ವಾಯುಪಡೆಯ F-7 BGI ವಿಮಾನವು ಸೋಮವಾರ ಢಾಕಾದ ಉತ್ತರ ನೆರೆಹೊರೆಯಲ್ಲಿರುವ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿನ ಆವರಣಕ್ಕೆ ಅಪ್ಪಳಿಸಿತು. ಅಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯುತ್ತಿದ್ದರು ಎಂದು ಮಿಲಿಟರಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಪಘಾತದ ನಂತರ ರಾಷ್ಟ್ರೀಯ ಬರ್ನ್ ಮತ್ತು ಪ್ಲಾಸ್ಟಿಕ್ ಸರ್ಜರಿ ಸಂಸ್ಥೆಯಲ್ಲಿ ತುರ್ತು ಹಾಟ್‌ಲೈನ್ ಅನ್ನು ಸಕ್ರಿಯಗೊಳಿಸಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಪೊಲೀಸರ ಜೊತೆ ಶೇಖ್ ಹಸೀನಾ ಬೆಂಬಲಿಗರ ಘರ್ಷಣೆ; 4 ಸಾವು, 14 ಜನರ ಬಂಧನ

ಮೊಹಮ್ಮದ್ ಯೂನಸ್ ಪ್ರತಿಕ್ರಿಯೆ:

ಈ ಘಟನೆಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಸಂತಾಪ ಸೂಚಿಸಿದ್ದಾರೆ. ವಾಯುಪಡೆ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಇದು ಭರಿಸಲಾಗದ ನಷ್ಟವಾಗಿದೆ ಎಂದು ಯೂನಸ್ ಹೇಳಿದ್ದಾರೆ. “ರಾಜಧಾನಿಯ ಡಯಾಬರಿ ಪ್ರದೇಶದ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ಇಂದು ಬಾಂಗ್ಲಾದೇಶ ವಾಯುಪಡೆಯ F-7 BGI ತರಬೇತಿ ವಿಮಾನ ಅಪಘಾತಕ್ಕೀಡಾದ ದುರಂತ ಘಟನೆಯ ಬಗ್ಗೆ ನಾನು ತೀವ್ರ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸುತ್ತೇನೆ. ಇದರಿಂದಾಗಿ ಸಾವುನೋವುಗಳು ಸಂಭವಿಸಿವೆ” ಎಂದು ಯೂನಸ್ ಹೇಳಿದ್ದಾರೆ.


“ಈ ಅಪಘಾತದಲ್ಲಿ ವಾಯುಪಡೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿನ ಸಿಬ್ಬಂದಿ ಮತ್ತು ಇತರರು ಅನುಭವಿಸಿದ ನಷ್ಟವನ್ನು ಭರಿಸಲಾಗದು. ಇದು ರಾಷ್ಟ್ರಕ್ಕೆ ತೀವ್ರ ದುಃಖದ ಕ್ಷಣವಾಗಿದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ