ಒಂದೇ ದಿನ 2,68,833 ಕೊರೊನಾ ಪ್ರಕರಣಗಳು ಪತ್ತೆ; 6,401ಕ್ಕೇರಿದ ಒಮಿಕ್ರಾನ್ ಪ್ರಕರಣಗಳು

ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 2.60 ಲಕ್ಷ ಪ್ರಕರಣಗಳು ವರದಿಯಾಗಿವೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 6,401ಕ್ಕೆ ತಲುಪಿದೆ.

ಒಂದೇ ದಿನ 2,68,833 ಕೊರೊನಾ ಪ್ರಕರಣಗಳು ಪತ್ತೆ; 6,401ಕ್ಕೇರಿದ ಒಮಿಕ್ರಾನ್ ಪ್ರಕರಣಗಳು
ಸಾಂಕೇತಿಕ ಚಿತ್ರ

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,68,833 ಪ್ರಕರಣಗಳು ವರದಿಯಾಗಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಈ ಅಂಕಿಅಂಶಗಳನ್ನು ನೀಡಲಾಗಿದೆ. ಶುಕ್ರವಾರಕ್ಕಿಂತ 4,631 ಹೆಚ್ಚು ಪ್ರಕರಣಗಳು ದೇಶದಲ್ಲಿ ಕಂಡುಬಂದಿವೆ. ಈ ಮೂಲಕ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 14,17,820ಕ್ಕೆ ಏರಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.16.66 ಇದೆ. ಕಳೆದ 24 ಗಂಟೆಗಳಲ್ಲಿ 402 ಕೊವಿಡ್ ಸೋಂಕಿತರು ನಿಧನ ಹೊಂದಿದ್ದಾರೆ. ಈ ಮೂಲಕ ದೇಶದಲ್ಲಿ ಕೊವಿಡ್​​ನಿಂದ (Covid) ನಿಧನ ಹೊಂದಿದವರ ಸಂಖ್ಯೆ 8,85,752ಕ್ಕೆ ತಲುಪಿದೆ. ಕಳೆದ ಒಂದು ದಿನದ ಅವಧಿಯಲ್ಲಿ 1,22,684 ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಮಿಕ್ರಾನ್ (Omicron) ಪ್ರಕರಣಗಳಲ್ಲೂ ಏರಿಕೆಯಾಗಿದ್ದು, ದೇಶದಲ್ಲಿ ಇದುವರೆಗೆ ಒಟ್ಟು 6,401 ಪ್ರಕರಣಗಳು ದೃಢಪಟ್ಟಿವೆ.

ದೇಶದಲ್ಲಿ ಕಳೆದ ವರ್ಷ ಇದೇ ಸಮಯದಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿಯವರೆಗೆ ಒಟ್ಟು 156.02 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತನ್ನ ಮಾಹಿತಿಯಲ್ಲಿ ತಿಳಿಸಿದೆ. ದೇಶದಲ್ಲಿ ಇದುವರೆಗೆ ಸೋಂಕು ಪತ್ತೆಗೆ ಒಟ್ಟು 70.07 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 16,13,70 ಮಾದರಿ ಪರೀಕ್ಷಿಸಲಾಗಿದೆ.

ಕೊರೊನಾ ಹೆಚ್ಚಳ ಹಿನ್ನೆಲೆ; ಪಂಚ ರಾಜ್ಯ ಚುನಾವಣಾ ಪ್ರಚಾರದ ನಿರ್ಬಂಧ ವಿಸ್ತರಣೆ ಸಾಧ್ಯತೆ ಫೆಬ್ರವರಿ 10ರಿಂದ ಗೋವಾ, ಮಣಿಪುರ, ಉತ್ತರಪ್ರದೇಶ, ಉತ್ತರಾಖಂಡ್​, ಪಂಜಾಬ್​ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಪ್ರಚಾರ, ರ್ಯಾಲಿಗಳು, ರೋಡ್​ಶೋಗಳು, ಪ್ರಚಾರಸಭೆಗಳಿಗೆ ಚುನಾವಣಾ ಆಯೋಗ ಕೊರೊನಾ ಕಾರಣದಿಂದ ನಿರ್ಬಂಧ ಹೇರಿತ್ತು.  ಇದೀಗ ದೇಶದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ವಿಧಿಸಿದ್ದ ನಿರ್ಬಂಧದ ಅವಧಿಯನ್ನು ವಿಸ್ತರಿಸಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಚುನಾವಣಾ ಆಯೋಗದ ಮುಖ್ಯ ಆಯುಕ್ತರು, ಕೊರೊನಾ ಮಿತಿಮೀರುತ್ತಿರುವ ಕಾರಣ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಜನವರಿ 15ರವರೆಗೂ ಯಾವುದೇ ರೀತಿಯ ರ್ಯಾಲಿಗಳು, ಸಾರ್ವಜನಿಕ ಸಭೆಗಳನ್ನು ನಡೆಸುವಂತಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಇಂದು ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ:

ಕೊರೊನಾವೈರಸ್ ಗಾಳಿಗೆ ಬಂದ 5 ನಿಮಿಷದಲ್ಲೇ ತೀವ್ರ ಹಾನಿ ಮಾಡುತ್ತದೆ; ಅಧ್ಯಯನದಲ್ಲಿ ಬಯಲು

ಕೊವಿಡ್ 19 ರೋಗಿಗಳ ಚಿಕಿತ್ಸೆ ವಿಚಾರದಲ್ಲಿ ಮತ್ತೆ ಎಡವಬೇಡಿ; ಬ್ಲ್ಯಾಕ್ ಫಂಗಸ್​ ಭೀಕರತೆ ನೆನಪಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಆರೋಗ್ಯ ತಜ್ಞರು

Click on your DTH Provider to Add TV9 Kannada