ದೆಹಲಿ: ದೇಶದಲ್ಲಿ ಕೊವಿಡ್ 19 ಎರಡನೇ ಅಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನೇದಿನೆ ದಾಖಲಾಗುವ ಹೊಸ ಸೋಂಕಿತರ ಸಂಖ್ಯೆ, ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಕೂಡ 4 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿನ ಕೇಸ್ ದಾಖಲಾಗಿದ್ದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಯಲ್ಲಿ 4,03,738 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬರೋಬ್ಬರಿ 4,092 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯ 2,22,96,414 ಆಗಿದ್ದು, ಅದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37,36,648ಕ್ಕೆ ಏರಿಕೆಯಾಗಿದೆ. ಹಾಗೇ ಸಾವಿನ ಸಂಖ್ಯೆ 2,42,362ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 3,86,444 ಮಂದಿ ಸೋಂಕಿನಿಂದ ಚೇತರಿಸಿಕೊಂಡು, ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 1,83,17,404ಕ್ಕೆ ತಲುಪಿದೆ. ಮೇ 8ರವರೆಗೆ ಒಟ್ಟು 30,22,75,471 ಜನರಿಗೆ ಕೊರೊನಾ ತಪಾಸಣೆ ಮಾಡಲಾಗಿದೆ ಎಂದು ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾಹಿತಿ ನೀಡಿದೆ.
ದೇಶದಲ್ಲಿ ಸದ್ಯ ಕೊರೊನಾ ಪ್ರಸರಣದ ಮತ್ತು ಮರಣದ ವೇಗ ಹೆಚ್ಚುತ್ತಿದೆ. ಚೇತರಿಕೆ ಪ್ರಮಾಣ ಕುಸಿತ ಕಂಡಿದೆ. ದೇಶದಲ್ಲಿ ಮೊದಲು ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದ್ದು 2020ರ ಆಗಸ್ಟ್ 7ರಂದು. ಕಳೆದ ಅಲೆಯಲ್ಲಿ ಒಂದು ದಿನದಲ್ಲಿ ಸಾಯುವವರ ಸಂಖ್ಯೆ ಮತ್ತು ಪತ್ತೆಯಾಗುವ ಸೋಂಕಿತರ ಸಂಖ್ಯೆ ತುಂಬ ಕಡಿಮೆ ಇತ್ತು. ಆದರೆ ಈ ಬಾರಿ ಅತ್ಯಂತ ವೇಗವಾಗಿ ಹರಡುತ್ತಿರುವುದು ಆತಂಕ ಮೂಡಿಸಿದೆ.
ಅದರಲ್ಲೂ ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಉತ್ತರಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ತೀವ್ರವಾಗಿದೆ. ಉಲ್ಬಣ ಆಗುತ್ತಿರುವ ಕೊರೊನಾ ಒಂದೆಡೆ ತಲೆನೋವು ತರುತ್ತಿದ್ದರೆ, ಇನ್ನೊಂದೆಡೆ ದೇಶದ ಅನೇಕ ಕಡೆ ಆಕ್ಸಿಜನ್, ಬೆಡ್, ವೆಂಟಿಲೇಟರ್ಗಳ ಅಭಾವ ಕಾಡುತ್ತಿದೆ. ಲಸಿಕೆ ಕೊರತೆಯಿಂದಾಗಿ ಮೇ 1ರಿಂದ ಶುರುವಾಗಬೇಕಿದ್ದ ಮೂರನೇ ಹಂತದ ಲಸಿಕೆ ಅಭಿಯಾನ ಕೂಡ ಎಲ್ಲ ರಾಜ್ಯಗಳಲ್ಲಿ ಪ್ರಾರಂಭವಾಗಿಲ್ಲ. ಇದುವರೆಗೆ ದೇಶಾದ್ಯಂತ 16,94,39,663 ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ‘ಕೊರೊನಾ ಲಸಿಕೆಯ 2ಡೋಸ್ ತೆಗೆದುಕೊಂಡಿದ್ದೇನೆ..ಖಂಡಿತ ಬದುಕುತ್ತೇನೆ..’-ಖ್ಯಾತ ಸರ್ಜನ್ ಆಡಿದ್ದ ಕೊನೇ ಮಾತುಗಳು
ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಬೀದರ್ ಜಿಲ್ಲಾಸ್ಪತ್ರೆಯ ವೈದ್ಯರು