
ದೇಶದಲ್ಲಿ ಮತ್ತೊಮ್ಮೆ ಲಾಕ್ಡೌನ್ (Lockdown) ಜಾರಿಮಾಡುವ ಪರಿಸ್ಥಿತಿ ಎದುರಾಗುತ್ತಿದೆಯಾ? ದಿನದಿನವೂ ಏರುತ್ತಿರುವ ಕೊವಿಡ್ (Covid 19) ಸೋಂಕಿತರ ಸಂಖ್ಯೆಯನ್ನು ಗಮನಿಸಿದಾಗ ಹೀಗೊಂದು ಆತಂಕ ನಿಶ್ಚಿತವಾಗಿ ಮೂಡುತ್ತದೆ. ಕಳೆದ 24ಗಂಟೆಯಲ್ಲಿ 26,291 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. 2020ರ ಡಿಸೆಂಬರ್ 20ರಂದು 26,624 ಕೊರೊನಾ ಸೋಂಕಿನ ಕೇಸ್ಗಳು ದಾಖಲಾಗಿದ್ದವು. ಅದಾದ ಬಳಿಕ ಮೊನ್ನೆ ಮಾರ್ಚ್ 13ರಂದು 24 ಸಾವಿರ ಗಡಿದಾಟಿತ್ತು. ನಿನ್ನೆಯೂ ಸಹ 25,320 ಕೇಸ್ ದಾಖಲಾಗಿತ್ತು. ನಿನ್ನೆಗಿಂತಲೂ ಇಂದು ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಫೆಬ್ರುವರಿ ಕೊನೇ ವಾರದಿಂದಲೂ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 1,13,85,339ಕ್ಕೆ ತಲುಪಿದೆ. ಅದರಲ್ಲಿ 2,19,262 ಸಕ್ರಿಯ ಪ್ರಕರಣಗಳಾಗಿವೆ. ಹಾಗೇ 24 ಗಂಟೆಯಲ್ಲಿ 118 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,58,725. ನಿನ್ನೆ ಒಂದೇ ದಿನ 161 ಜನರು ಕೊವಿಡ್ನಿಂದ ಸಾವನ್ನಪ್ಪಿದ್ದರು. ಇನ್ನು ಒಂದೇ ದಿನದಲ್ಲಿ 17,445 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ, ಒಟ್ಟಾರೆ ಚೇತರಿಕೆ ಕಂಡವರ ಸಂಖ್ಯೆ 1,10,07,352ರಷ್ಟಾಗಿದೆ.
ಭರದಿಂದ ಸಾಗುತ್ತಿದೆ ವ್ಯಾಕ್ಸಿನೇಶನ್
ದೇಶದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಭರದಿಂದ ಸಾಗುತ್ತಿದೆ. ಜ.16ರಿಂದ ಮೊದಲ ಹಂತದಲ್ಲಿ, ಕೊವಿಡ್ -19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಅದಾದ ಬಳಿಕೆ 2ನೇ ಹಂತದ ಲಸಿಕೆ ವಿತರಣೆ ಫೆ.2ರಿಂದ ಶುರುವಾಗಿದೆ. ಸದ್ಯ 60ವರ್ಷ ಮೇಲ್ಪಟ್ಟವರಿಗೆ, 45 ವರ್ಷ ಮೇಲ್ಪಟ್ಟು, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 2,99,08,038 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಹಾಗೇ ಇನ್ನೊಂದು ಕಡೆ ಕೊವಿಡ್-19 ಟೆಸ್ಟ್ ಕೂಡ ವೇಗವಾಗಿ ನಡೆಯುತ್ತಿದೆ. ಇಂದಿನವರೆಗೆ ಒಟ್ಟು 22,74,07,413 ಮಾದರಿಗಳನ್ನು ತಪಾಸಣೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾತಂಕ: ನಿನ್ನೆಗಿಂತಲೂ ಇಂದು ಹೆಚ್ಚು ಕೇಸ್ಗಳು ದಾಖಲು..ಸಾವಿನ ಸಂಖ್ಯೆಯಲ್ಲೂ ಏರಿಕೆ
Published On - 11:15 am, Mon, 15 March 21