‘ಕುಂಭಮೇಳಕ್ಕೆ ಬರುವವರು ಕೊವಿಡ್​-19 ನೆಗೆಟಿವ್​ ರಿಪೋರ್ಟ್​ ತರುವ ಅಗತ್ಯವಿಲ್ಲ’ -ಉತ್ತರಾಖಂಡ ನೂತನ ಸಿಎಂ ತಿರತ್​ ಸಿಂಗ್​ ರಾವತ್​

ನೀವು ಮುಖ್ಯಮಂತ್ರಿಯಾಗುವ ಬಗ್ಗೆ ನಿಮಗೆ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ ರಾವತ್, ಇಲ್ಲ ಖಂಡಿತವಾಗಿಯೂ ಗೊತ್ತಿರಲಿಲ್ಲ. ಕೇಂದ್ರ ಮಂತ್ರಿಗಳು ಡೆಹ್ರಾಡೂನ್​ನಲ್ಲಿ ಸಭೆ ಕರೆದಿದ್ದರು. ನಾನೂ ಎಲ್ಲರಂತೆ ಅಲ್ಲಿಗೆ ಹೋಗಿದ್ದೆ. ಆದರೆ ನನಗೆ ಇಷ್ಟು ದೊಡ್ಡ ಜವಾಬ್ದಾರಿ ಕೊಟ್ಟರು ಎಂದು ಹೇಳಿದರು.

‘ಕುಂಭಮೇಳಕ್ಕೆ ಬರುವವರು ಕೊವಿಡ್​-19 ನೆಗೆಟಿವ್​ ರಿಪೋರ್ಟ್​ ತರುವ ಅಗತ್ಯವಿಲ್ಲ’ -ಉತ್ತರಾಖಂಡ ನೂತನ ಸಿಎಂ ತಿರತ್​ ಸಿಂಗ್​ ರಾವತ್​
ತಿರತ್​ ಸಿಂಗ್​ ರಾವತ್​
Follow us
Lakshmi Hegde
|

Updated on: Mar 14, 2021 | 6:35 PM

ಡೆಹ್ರಾಡೂನ್: ಏಪ್ರಿಲ್​ 1ರಿಂದ 30ರವರೆಗೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳಕ್ಕೆ ಹೋಗುವವರಿಗೆ ಉತ್ತರಖಾಂಡ ನೂತನ ಮುಖ್ಯಮಂತ್ರಿ ತಿರತ್​ ಸಿಂಗ್​ ರಾವತ್​ ಒಂದು ಸಮಾಧಾನಕರ ಸುದ್ದಿ ನೀಡಿದ್ದಾರೆ. ಕುಂಭಮೇಳಕ್ಕೆ ಬರುವವರಿಗೆ ಕೊವಿಡ್​ 19 ಆರ್​ಟಿಪಿಸಿಆರ್​ ಟೆಸ್ಟ್​ ರಿಪೋರ್ಟ್ ಬೇಕಿಲ್ಲ ಎಂದು ಹೇಳಿದ್ದಾರೆ. ಈಗಂತೂ ದೇಶದಲ್ಲಿ ಕೊವಿಡ್​ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ಪ್ರಮುಖ ಯಾತ್ರೆ ಇರಲಿ, ಕೊವಿಡ್​ 19 ನೆಗೆಟಿವ್​ ರಿಪೋರ್ಟ್ ತನ್ನಿ ಎಂದು ಸಂಬಂಧಪಟ್ಟ ಆಡಳಿತಗಳು ಹೇಳುತ್ತಿವೆ. ಹೀಗಿರುವಾಗ ಕುಂಭಮೇಳಕ್ಕೆ ಬರುವವರು ಕೊವಿಡ್​ 19 ನೆಗೆಟಿವ್​ ವರದಿ ತರುವುದು ಬೇಡ ಎಂದು ಸಿಎಂ ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ.

ಕುಂಭಮೇಳದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಕೊವಿಡ್​ 19 ಕಾರಣಕ್ಕೆ ಅದನ್ನು ರದ್ದುಮಾಡಲು ಸಾಧ್ಯವಿಲ್ಲ ಎಂದು ಹಿಂದಿನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್​ ಕೂಡ ಹೇಳಿದ್ದರು. ಆದರೆ ಕುಂಭಮೇಳ ಸಂಬಂಧ ಎಸ್​ಒಪಿ ಹೊರಡಿಸಿದ್ದ ಅವರು, ಇಲ್ಲಿಗೆ ಬರುವವರಿಗೆ ಆರ್​ಟಿ-ಪಿಸಿಆರ್​ ಟೆಸ್ಟ್​ ವರದಿ ಕಡ್ಡಾಯ ಎಂದೂ ಹೇಳಿದ್ದರು. ಆದರೆ ಈಗಿನ ಸಿಎಂ ತಿರತ್​ ಸಿಂಗ್​, ನೆಗೆಟಿವ್​ ವರದಿ ಅಗತ್ಯವಿಲ್ಲ ಎಂದಿದ್ದಾರೆ. ಕೊವಿಡ್​-19 ಟೆಸ್ಟ್ ವರದಿ ಅಗತ್ಯತೆ ಕಾಣುತ್ತಿಲ್ಲ. ಕುಂಭಮೇಳಕ್ಕೆ ಆಗಮಿಸಲು ಸಿದ್ಧರಾಗಿರುವ ಜನರಲ್ಲಿನ ಆತಂಕ ದೂರ ಮಾಡಬೇಕಾಗಿದೆ. ಹಾಗಾಗಿ ನೆಗೆಟಿವ್​ ರಿಪೋರ್ಟ್​ ಬೇಕಿಲ್ಲ ಎಂದು ಸಿಎಂ ತಿಳಿಸಿದ್ದಾರೆ. ಇದು ತಿರತ್​ ಸಿಂಗ್​ ರಾವತ್​ ಅವರು ಮುಖ್ಯಮಂತ್ರಿಯಾದ ಮೇಲೆ ಮಾಧ್ಯಮವೊಂದಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ ನೀಡಿದ ಹೇಳಿಕೆಯಾಗಿದೆ.

ಕುಂಭಮೇಳ ಎಂಬುದು 12ವರ್ಷಕ್ಕೊಮ್ಮೆ ಬರುವ ಆಚರಣೆಯಾಗಿದೆ. ಜನರಿಗೆ ಈ ಅವಕಾಶ ತಪ್ಪುವಂತೆ ಮಾಡಬಾರದು. ಕುಂಭಮೇಳಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಅವರಿಗೆಲ್ಲ ಆರ್​ಟಿ ಪಿಸಿಆರ್ ಟೆಸ್ಟ್ ಮಾಡುವುದು, ರಿಪೋರ್ಟ್ ಕೊಡುವುದು ಸುಲಭವೂ ಅಲ್ಲ. ನಮಗೆ ಸಂತರು, ಭಕ್ತರ ಸಂತೋಷವೇ ಮುಖ್ಯ. ಕುಂಭಮೇಳ ನಡೆಯುವ ಸ್ಥಳದಲ್ಲಿ ಕೊವಿಡ್​-19 ನಿಯಮಗಳ ಪಾಲನೆ ಬಗ್ಗೆ ನಾವು ಖಂಡಿತ ನಿಗಾ ವಹಿಸುತ್ತೇವೆ ಎಂದೂ ಸಿಎಂ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗುವ ಸುಳಿವು ಇರಲಿಲ್ಲ ನೀವು ಮುಖ್ಯಮಂತ್ರಿಯಾಗುವ ಬಗ್ಗೆ ನಿಮಗೆ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ ರಾವತ್, ಇಲ್ಲ ಖಂಡಿತವಾಗಿಯೂ ಗೊತ್ತಿರಲಿಲ್ಲ. ಕೇಂದ್ರ ಮಂತ್ರಿಗಳು ಡೆಹ್ರಾಡೂನ್​ನಲ್ಲಿ ಸಭೆ ಕರೆದಿದ್ದರು. ನಾನೂ ಎಲ್ಲರಂತೆ ಅಲ್ಲಿಗೆ ಹೋಗಿದ್ದೆ. ಆದರೆ ನನಗೆ ಇಷ್ಟು ದೊಡ್ಡ ಜವಾಬ್ದಾರಿ ಕೊಟ್ಟರು. ಅವರಿಗೆ ಕೃತಜ್ಞತೆಗಳು. ನಾನು ರಾಜ್ಯದಲ್ಲಿ ಶಿಕ್ಷಣ, ಪ್ರವಾಸೋದ್ಯಮ, ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Uttarakhand CM: ಉತ್ತರಾಖಂಡ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯನ್ನು ಘೋಷಿಸಿದ ಬಿಜೆಪಿ; ತಿರತ್​ ಸಿಂಗ್ ರಾವತ್​ಗೆ ಸಿಎಂ ಪಟ್ಟ

ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಿರತ್ ಸಿಂಗ್ ರಾವತ್