ಯುದ್ಧದಲ್ಲಿ ಕೇರಳದ ವ್ಯಕ್ತಿ ಸಾವಿನ ಬಳಿಕ ರಷ್ಯಾದಿಂದ ಆದಷ್ಟು ಬೇಗ ಭಾರತೀಯರು ಹಿಂತಿರುಗಲು ಭಾರತ ಒತ್ತಾಯ

ರಷ್ಯಾದ ಯುದ್ಧದಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಆದಷ್ಟು ಬೇಗ ದೇಶಕ್ಕೆ ಹಿಂತಿರುಗಬೇಕೆಂದು ಭಾರತ ಒತ್ತಾಯಿಸಿದೆ. ರಷ್ಯಾದ ಮಿಲಿಟರಿ ಬೆಂಬಲ ಸೇವೆಗೆ ನೇಮಕಗೊಂಡ ಕೇರಳದ ಎಲೆಕ್ಟ್ರಿಷಿಯನ್ ಬಿನಿಲ್ ಟಿಬಿ ಇತ್ತೀಚೆಗೆ ಉಕ್ರೇನ್‌ನ ಯುದ್ಧ ವಲಯದಲ್ಲಿ ನಿಧನರಾಗಿದ್ದರು. ಮಾಸ್ಕೋದಲ್ಲಿರುವ ರಾಯಭಾರ ಕಚೇರಿಯು ಮೃತದೇಹಗಳನ್ನು ಸಾಗಿಸಲು ಮತ್ತು ಗಾಯಾಳುಗಳನ್ನು ಭಾರತಕ್ಕೆ ವಾಪಸ್ ಕಳುಹಿಸಲು ಪ್ರಯತ್ನಿಸುತ್ತಿದೆ.

ಯುದ್ಧದಲ್ಲಿ ಕೇರಳದ ವ್ಯಕ್ತಿ ಸಾವಿನ ಬಳಿಕ ರಷ್ಯಾದಿಂದ ಆದಷ್ಟು ಬೇಗ ಭಾರತೀಯರು ಹಿಂತಿರುಗಲು ಭಾರತ ಒತ್ತಾಯ
Randhir Jaiswal

Updated on: Jan 14, 2025 | 9:57 PM

ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ರಷ್ಯಾದ ಮಿಲಿಟರಿ ಬೆಂಬಲ ಸೇವೆಯಿಂದ ನೇಮಕಗೊಂಡಿದ್ದ ಕೇರಳದ ವ್ಯಕ್ತಿಯೊಬ್ಬರ ಸಾವನ್ನು ವಿದೇಶಾಂಗ ಸಚಿವಾಲಯ (ಎಂಇಎ) ಇಂದು ದೃಢಪಡಿಸಿದೆ. ಇದರ ನಡುವೆ ರಷ್ಯಾ ಸೇನೆಯಲ್ಲಿ ಉಳಿದಿರುವ ಭಾರತೀಯ ಪ್ರಜೆಗಳನ್ನು ಆದಷ್ಟು ಬೇಗ ಸ್ವದೇಶಕ್ಕೆ ಕಳುಹಿಸಬೇಕೆಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.

“ಈ ವಿಷಯವನ್ನು ಇಂದು ಮಾಸ್ಕೋದಲ್ಲಿರುವ ರಷ್ಯಾದ ಅಧಿಕಾರಿಗಳೊಂದಿಗೆ ಹಾಗೂ ನವದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿಯೊಂದಿಗೆ ಚರ್ಚಿಸಲಾಗಿದೆ. ರಷ್ಯಾ ಸೇನೆಯಲ್ಲಿನ ಉಳಿದ ಭಾರತೀಯ ಪ್ರಜೆಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂಬ ನಮ್ಮ ಬೇಡಿಕೆಯನ್ನು ನಾವು ಪುನರುಚ್ಚರಿಸಿದ್ದೇವೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಮಾಸ್ಕೋ ಬಾಂಬ್‌ ಸ್ಫೋಟದಲ್ಲಿ ರಷ್ಯಾದ ಪರಮಾಣು ರಕ್ಷಣಾ ಪಡೆ ಮುಖ್ಯಸ್ಥ ಸಾವು

“ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸಲು ನೇಮಕಗೊಂಡಿದ್ದ ಕೇರಳದ ಭಾರತೀಯ ಪ್ರಜೆಯ ದುರದೃಷ್ಟಕರ ಸಾವಿನ ಬಗ್ಗೆ ನಮಗೆ ತಿಳಿದುಬಂದಿದೆ. ಇದೇ ರೀತಿಯ ನೇಮಕಾತಿ ಪಡೆದಿದ್ದ ಕೇರಳದ ಮತ್ತೊಬ್ಬ ಭಾರತೀಯ ಪ್ರಜೆ ಗಾಯಗೊಂಡು ಮಾಸ್ಕೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಕ್ಕೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ” ಎಂದಿದ್ದಾರೆ.


ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಭಾರತೀಯ ಪ್ರಜೆಯೊಬ್ಬರು ಇತ್ತೀಚೆಗೆ ಸಾವನ್ನಪ್ಪಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದರು. ಮಾಸ್ಕೋದಲ್ಲಿರುವ ರಾಯಭಾರ ಕಚೇರಿಯು ಮೃತದೇಹಗಳನ್ನು ಸಾಗಿಸಲು ಮತ್ತು ಗಾಯಾಳುಗಳನ್ನು ಭಾರತಕ್ಕೆ ವಾಪಸ್ ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಭಾರತ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ

ಇಂದು ಭಾರತವು ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಗಳನ್ನು ಬೇಗನೆ ಬಿಡುಗಡೆ ಮಾಡಬೇಕೆಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿತು. ಭಾರತೀಯ ಪ್ರಜೆಯ ಸಾವಿಗೆ ಸಂತಾಪ ಸೂಚಿಸಿರುವ ವಿದೇಶಾಂಗ ಸಚಿವಾಲಯವು ಸೇನೆಯಲ್ಲಿರುವ ಇತರೆ ಭಾರತೀಯರನ್ನು ದೇಶಕ್ಕೆ ವಾಪಾಸ್ ಕಳುಹಿಸಬೇಕೆಂಬ ಬೇಡಿಕೆಯನ್ನು ಎತ್ತಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 pm, Tue, 14 January 25