ಕೃಷಿ ಕಾಯ್ದೆ (Farm Laws) ತಿದ್ದುಪಡಿ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿರುವ ವಿದೇಶಿ ಪಾಪ್ ಗಾಯಕಿ ರಿಹಾನ್ನಾ (Rihanna) ಅವರ ದೇಶ ಬಾರ್ಬಡೋಸ್ಗೆ (Barbados) ಭಾರತ ಕೊರೊನಾ ಲಸಿಕೆ (Corona Vaccine) ವಿತರಿಸಿರುವುದು ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದ ಆಂತರಿಕ ವಿಚಾರದ ಬಗ್ಗೆ ಮೂಗು ತೂರಿಸಿದರೆಂಬ ಕಾರಣಕ್ಕೆ ರಿಹಾನ್ನಾ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಅಲ್ಲದೇ, ಈ ಬಗ್ಗೆ ದೇಶದೊಳಗೂ ಪರ-ವಿರೋಧ ಚರ್ಚೆ ತಾರಕಕ್ಕೇರಿದ್ದು, ಬೇರೆ ಬೇರೆ ಆಯಾಮಗಳನ್ನೂ ಪಡೆದಿವೆ.
ಇಷ್ಟೆಲ್ಲಾ ಅಸಮಾಧಾನದ ನಡುವೆಯೂ ಭಾರತ ಬಾರ್ಬಡೋಸ್ ದೇಶಕ್ಕೆ ಕೊರೊನಾ ಲಸಿಕೆ ರಫ್ತು ಮಾಡುವ ಮೂಲಕ ಮಾನವೀಯತೆಯೇ ದೊಡ್ಡದು ಎಂದು ಸಾರಿದೆ. ಇದೇ ಭಾರತದ ಸೌಂದರ್ಯ ಎಂದು ಅನೇಕರು ಹಾಡಿ ಹೊಗಳುತ್ತಿದ್ದಾರೆ. ಇನ್ನೊಂದೆಡೆ ಬಾರ್ಬಡೋಸ್ ಪ್ರಧಾನ ಮಂತ್ರಿ ಮಿಯಾ ಅಮೋರ್ ಮೊಟ್ಲಿ ಕೂಡಾ ಭಾರತಕ್ಕೆ ಧನ್ಯವಾದ ತಿಳಿಸಿದ್ದು, ಕೊರೊನಾ ಲಸಿಕೆಯಂತಹ ಅತ್ಯಮೂಲ್ಯ ಉಡುಗೊರೆಗಾಗಿ ನಾವು ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.
ಆಕ್ಸ್ಫರ್ಡ್ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿ, ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತಯಾರಾದ ಕೊವಿಶೀಲ್ಡ್ ಕೊರೊನಾ ಲಸಿಕೆಯನ್ನು ಬಾರ್ಬಡೋಸ್ ದೇಶಕ್ಕೆ ಕಳುಹಿಸಿಕೊಟ್ಟಿದೆ. ಇತ್ತೀಚೆಗಷ್ಟೇ ಬಾರ್ಬಡೋಸ್ ಮೂಲದ ಹಾಡುಗಾರ್ತಿ ರಿಹಾನ್ನಾ ಭಾರತದ ಕೃಷಿ ಕಾಯ್ದೆ ತಿದ್ದುಪಡಿ ಬಗ್ಗೆ ಮಾತನಾಡಿದ್ದರೂ ಭಾರತ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಆಕೆಯ ದೇಶಕ್ಕೆ ಕೊರೊನಾ ಲಸಿಕೆ ಕಳುಹಿಸಿಕೊಟ್ಟಿರುವುದಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.
Fact Check | ಪಾಪ್ ತಾರೆ ರಿಹಾನ್ನಾ ಕೈಯಲ್ಲಿ ಪಾಕ್ ಧ್ವಜ; ಫೋಟೊಶಾಪ್ ಫೋಟೊ ವೈರಲ್
Published On - 12:01 pm, Sat, 6 February 21