ಪ್ರತಿಭಟನೆಯಿಂದ ಉದ್ವಿಗ್ನಗೊಂಡಿರುವ ಇರಾನ್​​ನಲ್ಲಿ ಸಿಲುಕಿದ ಭಾರತೀಯರ ಸ್ಥಳಾಂತರ ನಾಳೆಯಿಂದ ಶುರು

ಇರಾನ್ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಉದ್ವಿಗ್ನತೆ ಹೆಚ್ಚಾಗಿದೆ. ಹೀಗಾಗಿ, ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇರಾನ್​​ನಿಂದ ಮೊದಲ ಬ್ಯಾಚ್ ಭಾರತೀಯರನ್ನು ನಾಳೆಯೊಳಗೆ ವಿಮಾನದಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಇರಾನ್​​ನಲ್ಲಿರುವ ಭಾರತೀಯರಿಗೆ ಸಹಾಯವಾಣಿ ಬಿಡುಗಡೆ ಮಾಡಲಾಗಿದೆ.

ಪ್ರತಿಭಟನೆಯಿಂದ ಉದ್ವಿಗ್ನಗೊಂಡಿರುವ ಇರಾನ್​​ನಲ್ಲಿ ಸಿಲುಕಿದ ಭಾರತೀಯರ ಸ್ಥಳಾಂತರ ನಾಳೆಯಿಂದ ಶುರು
Iran Protest

Updated on: Jan 15, 2026 | 7:08 PM

ನವದೆಹಲಿ, ಜನವರಿ 15: ವ್ಯಾಪಕ ಪ್ರತಿಭಟನೆಗಳ ಮಧ್ಯೆ ಭಾರತವು ನಾಳೆಯಿಂದ ಇರಾನ್‌ನಲ್ಲಿ (Iran Protest) ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಲಿದೆ. ಪ್ರತಿಭಟನೆಯಿಂದ ಇರಾನ್​​ನಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಈ ಕ್ರಮ ತೆಗೆದುಕೊಂಡಿದೆ. ಮೂಲಗಳ ಪ್ರಕಾರ, ಸ್ಥಳಾಂತರಿಸುವವರ ಮೊದಲ ಬ್ಯಾಚ್ ಅನ್ನು ನಾಳೆ ಮುಂಜಾನೆಯೇ ವಿಮಾನದಲ್ಲಿ ಕಳುಹಿಸುವ ಸಾಧ್ಯತೆಯಿದೆ.

ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿವಿಧ ಪ್ರದೇಶಗಳಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆದರೆ, ಹಲವಾರು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿರುವುದರಿಂದ ಮತ್ತು ಫೋನ್ ಲೈನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಈ ಪ್ರಕ್ರಿಯೆ ಕೊಂಚ ತಡವಾಗುತ್ತಿದೆ.

ಇದನ್ನೂ ಓದಿ: ಅನಿವಾರ್ಯವಲ್ಲದಿದ್ದರೆ ಇರಾನ್​​ಗೆ ಹೋಗಬೇಡಿ; ಸರ್ಕಾರದಿಂದ ಭಾರತೀಯರಿಗೆ ಸೂಚನೆ

ಇರಾನ್‌ನಾದ್ಯಂತ ವ್ಯಾಪಕ ಪ್ರತಿಭಟನೆಗಳ ನಡುವೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಳವಳಗಳು ಹೆಚ್ಚಾಗಿದೆ. ಇರಾನಿನ ರಿಯಾಲ್‌ನಲ್ಲಿ ಕಳೆದ ತಿಂಗಳ ಕೊನೆಯಲ್ಲಿ ಅಶಾಂತಿ ಪ್ರಾರಂಭವಾಯಿತು. ಅಂದಿನಿಂದ ಪ್ರತಿಭಟನೆ ಎಲ್ಲಾ 31 ಪ್ರಾಂತ್ಯಗಳಿಗೆ ಹರಡಿ, ರಾಜಕೀಯ ಬಿಕ್ಕಟ್ಟಾಗಿ ರೂಪ ತಳೆದಿದೆ. ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮೇಲೆ ನಡೆಸಲಾದ ನಿಗ್ರಹ ಕಾರ್ಯಾಚರಣೆಯಲ್ಲಿ 3,428 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಆದಷ್ಟು ಬೇಗ ದೇಶ ಬಿಟ್ಟು ಹೊರಡಿ; ಇರಾನ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ, ಸಹಾಯವಾಣಿ ಸಂಖ್ಯೆ ಬಿಡುಗಡೆ

ಅಂದಾಜಿನ ಪ್ರಕಾರ, ವಿದ್ಯಾರ್ಥಿಗಳು ಸೇರಿದಂತೆ 10,000ಕ್ಕೂ ಹೆಚ್ಚು ಭಾರತೀಯರು ಪ್ರಸ್ತುತ ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಭಾರತವು ಇರಾನ್ ದೇಶದಲ್ಲಿರುವ ಎಲ್ಲಾ ಪ್ರಜೆಗಳಿಗೆ ಲಭ್ಯವಿರುವ ಮಾರ್ಗಗಳ ಮೂಲಕ ತಕ್ಷಣ ಭಾರತಕ್ಕೆ ಹೊರಟುಬರಲು ಸೂಚನೆ ನೀಡಿತ್ತು. ಜೊತೆಗೆ ಸಹಾಯವಾಣಿಯನ್ನೂ ತೆರೆದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ