ದೆಹಲಿ: ಅಮೆರಿಕದಿಂದ ಎಂಕೆ 54 ಟಾರ್ಪೆಡೊಗಳನ್ನು ಖರೀದಿಸಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲು ರಕ್ಷಣಾ ಇಲಾಖೆಯು ₹ 423 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಸಬ್ಮರೀನ್ ನಾಶಕ ಯುದ್ಧ ಸಾಮರ್ಥ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಈ ಟಾರ್ಪೆಡೊಗಳು ನೆರವಾಗಲಿವೆ. ನೌಕಾಪಡೆಯ ಪಿ-81 ಸಾಗರ ಸರ್ವೇಕ್ಷಣಾ ವಿಮಾನಗಳಿಗೆ ಈ ಟಾರ್ಪೆಡೊಗಳನ್ನು ಅಳವಡಿಸಲಾಗುವುದು. ಕಳೆದ ಗುರುವಾರವೇ ಅಮೆರಿಕ ಸರ್ಕಾರದೊಂದಿಗೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಶಸ್ತ್ರದ ಉಪಯೋಗ ಮತ್ತು ಭಾರತೀಯ ನೌಕಾಪಡೆಗೆ ಇದರಿಂದ ಏನು ಅನುಕೂಲ ಎಂಬ ವಿವರ ಇಲ್ಲಿದೆ.
12.75 ಇಂಚಿನ (324 ಎಂಎಂ) ಈ ಹಗುರ ಟಾರ್ಪೆಡೊಗಳನ್ನು ಅಮೆರಿಕ ನೌಕಾಪಡೆಯು ಈಗಾಗಲೇ ಬಳಸುತ್ತಿದ್ದು, ಸಬ್ಮರೀನ್ಗಳ ದಾಳಿಯ ಸಂದರ್ಭದಲ್ಲಿ ಇವು ಅತ್ಯಂತ ಪರಿಣಾಮಕಾರಿ ಎನ್ನಲಾಗಿದೆ. ಎಂಕೆ 54 ಟಾರ್ಪೆಡೊಗಳು ಆಳ ಸಮುದ್ರದ ಕಾರ್ಯಾಚರಣೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು. ವೈರಿ ದೇಶದ ನೌಕಾಪಡೆಗಳ ರಕ್ಷಣಾ ವ್ಯವಸ್ಥೆ ಸಕ್ರಿಯವಾಗಿದ್ದಾಗಲೂ ಸಾಗದಾಳದ ಗುರಿಗಳನ್ನು ಗುರುತಿಸಿ, ವಿಂಗಡಿಸಿ, ಬೆನ್ನತ್ತಿ ನಾಶಪಡಿಸಬಲ್ಲದು. 608 ಪೌಂಡ್ (275 ಕೆಜಿ) ತೂಕದ ಈ ಟಾರ್ಪೆಡೊ 96.8 ಪೌಂಡ್ (44 ಕೆಜಿ) ತೂಕದ ಸಿಡಿತಲೆಯನ್ನು ಗುರಿಯತ್ತ ಮುಟ್ಟಿಸಬಲ್ಲದು.
ಸಬ್ಮರೀನ್ ನಾಶಕದ ವಿಮಾನ ಮತ್ತು ಹೆಲಿಕಾಪ್ಟರ್ಗಳಿಂದಲೂ ಈ ಟಾರ್ಪೆಡೊ ಉಡಾವಣೆಗೆ ಅವಕಾಶವಿದೆ. ಆಗ ಇದು ಮುಖ್ಯವಾಗಿ ದಾಳಿಯ ಉದ್ದೇಶಕ್ಕೆ ಬಳಕೆಯಾಗಲಿದೆ. ಇದೇ ಟಾರ್ಪೆಡೊಗಳನ್ನು ಯುದ್ಧನೌಕೆಗಳಿಂದ ಉಡಾಯಿಸಿದಾಗ ರಕ್ಷಣಾ ಉದ್ದೇಶಕ್ಕೆ ಬಳಕೆಯಾಗಲಿದೆ. ಅತ್ಯಂತ ವೇಗವಾಗಿ ಚಲಿಸಬಲ್ಲ, ಆಳಕ್ಕಿಳಿಯಬಲ್ಲ ಅಣುಶಕ್ತಿ ಚಾಲಿತ ಸಬ್ಮರೀನ್ಗಳು ಹಾಗೂ ನಿಧಾನಗತಿಯಲ್ಲಿ ಸಾಗುವ ಆದರೆ ನಿಶ್ಯಬ್ದವಾಗಿ ಸಂಚರಿಸುವ ಡೀಸೆಲ್-ಎಲೆಕ್ಟ್ರಿಕ್ ಚಾಲಿತ ಸಬ್ಮರೀನ್ಗಳಿಂದ ರಕ್ಷಣೆಗೂ ಈ ಟಾರ್ಪೆಡೊಗಳು ಪರಿಣಾಮಕಾರಿ ಎಂದು ಹೇಳಲಾಗಿದೆ. ಪ್ರಸ್ತುತ ಅಮೆರಿಕ ಮತ್ತು ಆಸ್ಟ್ರೇಲಿಯಾ ನೌಕಾಪಡೆಗಳು ಎಂಕೆ 54 ಟಾರ್ಪೆಡೊಗಳನ್ನು ಬಳಸುತ್ತಿವೆ.
ಚೀನಾ ಶಕ್ತಿ ಗಮನದಲ್ಲಿಟ್ಟುಕೊಂಡು ಖರೀದಿ
ಸಬ್ಮರೀನ್ ನಾಶಕ ಟಾರ್ಪೆಡೊಗಳನ್ನು ಖರೀದಿಸಲು ಮುಂದಾಗಿರುವ ಭಾರತ ಸರ್ಕಾರದ ಕ್ರಮದ ಹಿಂದೆ ಚೀನಾದಿಂದ ಒದಗಿ ಬರುತ್ತಿರುವ ಭದ್ರತೆಯ ಆತಂಕ ಎದ್ದು ಕಾಣುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಹಲವು ಬಾರಿ ತನ್ನ ಶಕ್ತಿಯನ್ನು ತೋರಿಸಿದ್ದು, ಭಾರತದ ಭದ್ರತೆಗೆ ಇದರಿಂದ ಆತಂಕವಿದೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಚೀನಾ ಸಮುದ್ರ, ಪೂರ್ವ ಚೀನಾ ಸಮುದ್ರ, ತೈವಾನ್ ಕೊಲ್ಲಿಯಲ್ಲಿ ಚೀನಾ ನೌಕಾಪಡೆಯ ಚಟುವಟಿಕೆಗಳನ್ನು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ತನ್ನೊಂದಿಗೆ ಸ್ನೇಹದಿಂದ ಇರುವ ದೇಶಗಳಿಗೆ ಶಕ್ತಿ ತುಂಬಲು ಅಮೆರಿಕ ಮುಂದಾಗಿದ್ದು, ಈ ಪ್ರಯತ್ನದ ಭಾಗವಾಗಿಯೇ ಟಾರ್ಪೆಡೊಗಳನ್ನು ಭಾರತಕ್ಕೆ ಮಾರಲು ಮುಂದಾಗಿ ಎಂದು ಹೇಳಲಾಗುತ್ತಿದೆ.
ಭಾರತಕ್ಕೆ ಟಾರ್ಪೆಡೊಗಳನ್ನು ಮಾರುವ ಮೂಲಕ ಚೀನಾಕ್ಕೆ ಎಚ್ಚರಿಕೆ ನೀಡಲು ಅಮೆರಿಕ ಮುಂದಾಗಿದೆ ಎಂದೂ ಕೆಲವರು ವಿಶ್ಲೇಷಿಸಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ನೌಕಾಪಡೆಯ ಬಳಕೆಯಲ್ಲಿರುವ ಟಾರ್ಪೆಡೊಗಳನ್ನು ಭಾರತಕ್ಕೂ ನೀಡುವ ಮೂಲಕ ಚೀನಾಕ್ಕೆ ಅಮೆರಿಕ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಯುದ್ಧನೌಕೆ ರಣವಿಜಯ್ನಲ್ಲಿ ಬೆಂಕಿ; ನೌಕಾಪಡೆಯ ನಾಲ್ವರು ಸಿಬ್ಬಂದಿಗೆ ಗಾಯ
ಇದನ್ನೂ ಓದಿ: ರಕ್ಷಣಾ ಕ್ಷೇತ್ರಕ್ಕೆ ಹೊಸ ಬಲ ತುಂಬಿದ ಐಎನ್ಎಸ್ ವಿಕ್ರಾಂತ್: ಸ್ವಾವಲಂಬನೆಯತ್ತ ನೌಕಾಪಡೆ ದಿಟ್ಟ ಹೆಜ್ಜೆ