ಅಸಂಖ್ಯಾತ ಸಂಗೀತ ಪ್ರೇಮಿಗಳ ಮನದಲ್ಲಿ ಚಿರಸ್ಥಾಯಿಯಾಗಿರುವ ಸುಮಧುರ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ವಿಧಿವಶರಾಗಿದ್ದಾರೆ. ಸುಮಾರು 2 ತಿಂಗಳಿಂದ ಕೊರೊನಾ ಮಹಾಮಾರಿಯಿಂದ ಅನಾರೋಗ್ಯಪೀಡಿತರಾಗಿದ್ದ ದೈವದತ್ತ ಗಾಯಕ ಎಸ್ಪಿ ಬಾಲು ಅವರ ಆರೋಗ್ಯ ನಿನ್ನೆಯಿಂದ ವಿಪರೀತ ಹದಗೆಟ್ಟಿತ್ತು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಬಾಲು ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಎಸ್ಪಿಬಿ ಪುತ್ರ ಚರಣ್ ಜೊತೆ ಚರ್ಚೆ ನಡೆಸಿದ ಎಂಜಿಎಂ ಆಸ್ಪತ್ರೆಯ ವೈದ್ಯರು ಇಂದು ಮಧ್ಯಾಹ್ನ 1.10 ಗಂಟೆಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ, ಬಾಲಸುಬ್ರಮಣ್ಯಂ ಸಾವಿನ ಸುದ್ದಿಯನ್ನು ಪ್ರಕಟಿಸಿದರು. SPB ಅವರು ಪತ್ನಿ ಸಾವಿತ್ರಿ, ಪುತ್ರ ಚರಣ್ ಮತ್ತು ಪುತ್ರಿ ಪಲ್ಲವಿ ಅವರನ್ನು ಅಗಲಿದ್ದಾರೆ. ಜೊತೆಗೆ ಅಪಾರ ಬಂಧುಬಳಗ, ಅಸಂಖ್ಯಾತ ಅಭಿಮಾನಿಗಳನ್ನು ಬಿಟ್ಟು ಇಹಲೋಕದಿಂದ ತೆರಳಿದ್ದಾರೆ.
ಅರ್ಧ ಶತಮಾನದ ಗಾನ ಲೋಕದ ಅದ್ಭುತ ಪ್ರತಿಭೆ:
ಅಪಾರ ವಿದ್ವತ್ತಿನ ಸಂಗೀತಗಾರ, ಹಿನ್ನೆಲೆ ಗಾಯಕ, ನಟ, ಡಬ್ಬಿಂಗ್ ಕಲಾವಿದ, ಸಿನಿ ನಿರ್ಮಾಪಕ ಎಸ್ ಪಿ ಬಾಲಸುಬ್ರಮಣ್ಯಂ ತೆಲುಗು, ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು.
ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿಬಿ 51 ದಿನಗಳ ಜೀವನದ ಹೋರಾಟವನ್ನು ಕೊನೆಗೊಳಿಸಿದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ 1966ರ ಡಿ. 15ರಂದು ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದರು. ತೆಲುಗಿನ ಮರ್ಯಾದ ರಾಮನ್ನ ಚಿತ್ರಕ್ಕೆ ಹಿನ್ನೆಲೆ ಗಾಯನ ನೀಡಿದರು. ಸುಮಾರು 40 ಸಾವಿರ ಹಾಡುಗಳಿಗೆ ಧ್ವನಿಯಾಗಿರುವ SPB, 6 ರಾಷ್ಟ್ರೀಯ ಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು.
Published On - 1:23 pm, Fri, 25 September 20