ರೈಲ್ವೆ ಇಲಾಖೆಯಿಂದ ಶೀಘ್ರದಲ್ಲೇ ಮನೆ ಬಾಗಿಲಿಗೆ ಪಾರ್ಸೆಲ್ ಸೇವೆ ಆರಂಭ; ಬುಕಿಂಗ್, ಶುಲ್ಕದ ವಿವರ ಇಲ್ಲಿದೆ

ಭಾರತೀಯ ರೈಲ್ವೆ ಇಲಾಖೆಯು ಸರಕು ಸಾಗಣೆ ಹಾಗೂ ಪಾರ್ಸೆಲ್ ಸೇವೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ‘ರೇಲ್ ಪಾರ್ಸೆಲ್ ಆ್ಯಪ್ ಘರ್ ಸೆ ಘರ್ ತಕ್’ (ಮನೆ ಬಾಗಿಲಿಗೆ ಪಾರ್ಸೆಲ್ ಸೌಲಭ್ಯ) ಎಂಬ ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್ ಪರಿಚಯಿಸಲು ಸಜ್ಜಾಗುತ್ತಿದೆ. ಆಂಡ್ರಾಯ್ಡ್, ಐಒಎಸ್ ಹಾಗೂ ವೆಬ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆ್ಯಪ್ ಮೂಲಕ ಗ್ರಾಹಕರು ರೈಲ್ವೆ ನಿಲ್ದಾಣಗಳಿಗೆ ಅಲೆಯದೆ, ಮನೆ ಬಾಗಿಲಿನಿಂದಲೇ ಪಾರ್ಸೆಲ್ ಬುಕಿಂಗ್, ಡೋರ್‌ಸ್ಟೆಪ್ ಪಿಕ್‌ಅಪ್ ಮತ್ತು ಡೆಲಿವರಿ ಹಾಗೂ ಡಿಜಿಟಲ್ ಪಾವತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ರೈಲ್ವೆ ಇಲಾಖೆಯಿಂದ ಶೀಘ್ರದಲ್ಲೇ ಮನೆ ಬಾಗಿಲಿಗೆ ಪಾರ್ಸೆಲ್ ಸೇವೆ ಆರಂಭ; ಬುಕಿಂಗ್, ಶುಲ್ಕದ ವಿವರ ಇಲ್ಲಿದೆ
ರೈಲು
Image Credit source: PTI

Updated on: Nov 10, 2026 | 11:55 AM

ಬೆಂಗಳೂರು, ನವೆಂಬರ್ 10: ಸರಕು ಸಾಗಣೆ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಿಸಲು ಹಾಗೂ ಖಾಸಗಿ ಕೊರಿಯರ್ ಕಂಪನಿಗಳಿಗೆ ಪೈಪೋಟಿ ನೀಡಲು ಭಾರತೀಯ ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರು ಸೇರಿದಂತೆ ದೇಶದ 8 ಪ್ರಮುಖ ನಗರಗಳಲ್ಲಿ ಗ್ರಾಹಕರ ಮನೆ ಬಾಗಿಲಿನಿಂದಲೇ ಪಾರ್ಸೆಲ್ ಸ್ವೀಕರಿಸಿ, ತಲುಪಿಸಬೇಕಾದ ವಿಳಾಸಕ್ಕೆ ನೇರವಾಗಿ ತಲುಪಿಸುವ ‘ಡೋರ್-ಟು-ಡೋರ್’ ಪಾರ್ಸೆಲ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.

ಪ್ರಾಯೋಗಿಕ ಹಾಗೂ ಆರಂಭಿಕ ಹಂತದಲ್ಲಿ ಈ ಸೇವೆಯು ದೇಶದ ಪ್ರಮುಖ 8 ನಗರಗಳಲ್ಲಿ ಮಾತ್ರ ಲಭ್ಯವಿರಲಿದೆ. ಅವುಗಳೆಂದರೆ, ದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ, ಅಹಮದಾಬಾದ್, ಹೈದರಾಬಾದ್, ಬೆಂಗಳೂರು, ಪುಣೆ. ಭಾರತೀಯ ಅಂಚೆ ಇಲಾಖೆ ಜೊತೆಗೂಡಿ ಈ ಜಂಟಿ ಸೇವೆಯನ್ನು ರೈಲ್ವೆ ಸಚಿವಾಲಯ ಜಾರಿಗೊಳಿಸುತ್ತಿದ್ದು, ಸಣ್ಣ ಉದ್ಯಮಿಗಳು, ವರ್ತಕರು ಮತ್ತು ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಸುರಕ್ಷಿತ ರವಾನೆಗೆ ಇದು ಅನುಕೂಲವಾಗಲಿದೆ.

Loading...

ಬುಕಿಂಗ್ ಪ್ರಕ್ರಿಯೆ ಹೇಗೆ?:

ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಅಥವಾ ವೆಬ್‌ಸೈಟ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಪಾರ್ಸೆಲ್ ಕಳುಹಿಸಬೇಕಾದ ವಿವರಗಳನ್ನು ಭರ್ತಿ ಮಾಡಿ ಬುಕ್ ಮಾಡಬಹುದು. ಬುಕಿಂಗ್ ದೃಢಗೊಂಡ ನಂತರ ಭಾರತೀಯ ಅಂಚೆ ಇಲಾಖೆಯ ಸಿಬ್ಬಂದಿ ಗ್ರಾಹಕರ ಮನೆ ಅಥವಾ ಕಚೇರಿಗೆ ಆಗಮಿಸಿ ಪಾರ್ಸೆಲ್ ತೂಕ ಮಾಡಿ, ಕ್ಯೂಆರ್ ಕೋಡ್ ಮತ್ತು ಟ್ರ್ಯಾಕಿಂಗ್ ಐಡಿ ನೀಡಿ ಸ್ವೀಕರಿಸುತ್ತಾರೆ.

ಇದನ್ನೂ ಓದಿ: ರೈಲ್ವೆ ಕೌಂಟರ್​ನಲ್ಲೂ ಟಿಕೆಟ್ ಜೊತೆಗೆ ಇನ್ಷೂರೆನ್ಸ್ ಆಯ್ಕೆ ಲಭ್ಯ; ಆದರೆ, ಹಣ ಪಾವತಿ ನಿಯಮದಲ್ಲಿ ಬದಲಾವಣೆ ಇದೆ, ಗಮನಿಸಿ

ಪಾರ್ಸೆಲ್ ರೈಲಿನಲ್ಲಿ ಸಾಗುವಾಗ ಮತ್ತು ವಿಳಾಸವನ್ನು ತಲುಪುವವರೆಗೆ ಲೈವ್ ಟ್ರ್ಯಾಕಿಂಗ್ ಸೌಲಭ್ಯ ಲಭ್ಯವಿರುತ್ತದೆ.

ಬಜೆಟ್ ಸ್ನೇಹಿ ದರ:

ಖಾಸಗಿ ಕೊರಿಯರ್ ಸಂಸ್ಥೆಗಳಿಗೆ ಹೋಲಿಸಿದರೆ ರೈಲ್ವೆಯ ಈ ಸೇವೆಯು ಅತ್ಯಂತ ಕೈಗೆಟುಕುವ ದರದಲ್ಲಿ ಲಭ್ಯವಿರಲಿದೆ. ಪಾರ್ಸೆಲ್‌ನ ತೂಕ, ಗಾತ್ರ ಮತ್ತು ಸಾಗಿಸಬೇಕಾದ ದೂರವನ್ನು ಆಧರಿಸಿ ಒಟ್ಟು ಶುಲ್ಕವನ್ನು ಲೆಕ್ಕಹಾಕಲಾಗುತ್ತದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಮಹತ್ವದ ನಿಯಮ: ಪ್ರಯಾಣಿಕರೇ ಎಚ್ಚರ.. ಈ ತಪ್ಪು ಮಾಡಿದ್ರೆ 5,000 ದಂಡ, ಜೈಲು ಶಿಕ್ಷೆ ಖಂಡಿತ

ಅಂಚೆ ಸಿಬ್ಬಂದಿ ಪಾರ್ಸೆಲ್ ಸ್ವೀಕರಿಸುವ ಮುನ್ನವೇ ಬುಕಿಂಗ್ ರದ್ದುಗೊಳಿಸಿದರೆ, ಸೇವಾ ಶುಲ್ಕದ ಸಣ್ಣ ಮೊತ್ತವನ್ನು ಹೊರತುಪಡಿಸಿ ಬಾಕಿ ಹಣ ಮರುಪಾವತಿಯಾಗಲಿದೆ. ಸಾಗಣೆ ವೇಳೆಯಲ್ಲಿ ಪಾರ್ಸೆಲ್ ಕಳೆದುಹೋದರೆ ಅಥವಾ ತೀವ್ರ ಹಾನಿಗೊಳಗಾದರೆ, ರೈಲ್ವೆ ನಿಯಮಾವಳಿಗಳ ಪ್ರಕಾರ ಗ್ರಾಹಕರಿಗೆ ನಿಗದಿತ ನಷ್ಟ ಪರಿಹಾರ ಮೊತ್ತವನ್ನು ಅಕೌಂಟ್‌ಗೆ ಮರುಪಾವತಿಸಲಾಗುತ್ತದೆ. ತಪ್ಪಾದ ವಿಳಾಸ ಅಥವಾ ಸ್ವೀಕರಿಸುವವರು ಸಿಗದೆ ಪಾರ್ಸೆಲ್ ವಾಪಸ್ ಬಂದರೆ, ಮರು-ಡೆಲಿವರಿಗೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us