ರೈಲ್ವೆ ಕೌಂಟರ್ನಲ್ಲೂ ಟಿಕೆಟ್ ಜೊತೆಗೆ ಇನ್ಷೂರೆನ್ಸ್ ಆಯ್ಕೆ ಲಭ್ಯ; ಆದರೆ, ಹಣ ಪಾವತಿ ನಿಯಮದಲ್ಲಿ ಬದಲಾವಣೆ ಇದೆ, ಗಮನಿಸಿ
2026ರ ಅಕ್ಟೋಬರ್ 27ರಿಂದ ರೈಲ್ವೆ ಟ್ರಾವೆಲ್ ಇನ್ಷೂರೆನ್ಸ್ ಬೇಕೆನ್ನುವವರು ಟಿಕೆಟ್ ಖರೀದಿಗೆ ಡಿಜಿಟಲ್ ಪೇಮೆಂಟ್ ಮಾಡುವುದು ಕಡ್ಡಾಯವಾಗಿದೆ. ಆನ್ಲೈನ್ನಲ್ಲಿ ಟಿಕೆಟ್ ಬುಕಿಂಗ್ ಮಾಡುವಾಗ ಟ್ರಾವಲ್ ಇನ್ಷೂರೆನ್ಸ್ ಆಯ್ಕೆ ಮೊದಲಿಂದಲೂ ಇದೆ. ಕೌಂಟರ್ನಲ್ಲಿ ಬುಕ್ ಮಾಡುವ ಟಿಕೆಟ್ಗೆ ಈ ಆಯ್ಕೆ ಇರಲಿಲ್ಲ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಆಯ್ಕೆ ಸಿಗುತ್ತಿದೆ. ಆದರೆ, ಇನ್ಷೂರೆನ್ಸ್ ಇಲ್ಲದೆ ಟಿಕೆಟ್ ಮಾತ್ರವೇ ಬೇಕೆನ್ನುವವರು ಕ್ಯಾಷ್ ಪಾವತಿಸಬಹುದು.

ನವದೆಹಲಿ, ಅಕ್ಟೋಬರ್ 27: ಆನ್ಲೈನ್ನಲ್ಲಿ ರೈಲ್ವೆ ಟಿಕೆಟ್ ಖರೀದಿಸಿದರೆ ಅದರ ಜೊತೆಗೆ ಟ್ರಾವೆಲ್ ಇನ್ಷೂರೆನ್ಸ್ ಕೂಡ ಸೇರಿರುತ್ತದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರೈಲ್ವೆ ನಿಲ್ದಾಣದ ಕೌಂಟರ್ಗಳಲ್ಲಿ ಖರೀದಿಸುವ ಟಿಕೆಟ್ಗೂ ಇನ್ಷೂರೆನ್ಸ್ ಆಯ್ಕೆಯನ್ನು ಈಗ ಒದಗಿಸಲಾಗಿದೆ. ಇದು ಇವತ್ತಿನಿಂದಲೇ (ಅ. 27) ಜಾರಿಗೆ ಬರುತ್ತಿದೆ. ಆದರೆ, ಕೌಂಟರ್ನಲ್ಲಿ ಟಿಕೆಟ್ ಖರೀದಿಸುವ ಮುನ್ನ ಒಂದು ನಿಯಮ ಬದಲಾವಣೆಯನ್ನು ಪ್ರಯಾಣಿಕರು ಗಮನಿಸಬೇಕು.
ಕೌಂಟರ್ಗಳಲ್ಲಿ ಖರೀದಿಸುವ ಟಿಕೆಟ್ ಜೊತೆಗೆ ಟ್ರಾವಲ್ ಇನ್ಷೂರೆನ್ಸ್ ಬೇಕೆಂದರೆ ಕ್ಯಾಷ್ನಿಂದ ಹಣ ಪಾವತಿಗೆ ಅವಕಾಶ ಇರುವುದಿಲ್ಲ. ಡಿಜಿಟಲ್ ಪೇಮೆಂಟ್ಗೆ ಮಾತ್ರ ಅವಕಾಶ ಇರುತ್ತದೆ. ಇನ್ಷೂರೆನ್ಸ್ ಬೇಡವೆಂದರೆ ಕ್ಯಾಷ್ನಲ್ಲಿ ಟಿಕೆಟ್ ಖರೀದಿಸಬಹುದು.
ಇದನ್ನೂ ಓದಿ: ಷೇರುಗಳ ಮೇಲಿನ ಎಲ್ಟಿಸಿಜಿ ತೆರಿಗೆ ದರ ಪರಿಷ್ಕರಣೆಗೆ ಕೇಂದ್ರ ಆಲೋಚನೆ; ಬಜೆಟ್ನೊಳಗೆ ನಿರ್ಧಾರ ಸಾಧ್ಯತೆ
ಟ್ರಾವೆಲ್ ಇನ್ಷೂರೆನ್ಸ್ ಹಣ ಎಷ್ಟು?
ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಜೊತೆಗೆ ಸಿಗುವ ಟ್ರಾವೆಲ್ ಇನ್ಷೂರೆನ್ಸ್ನ ಪ್ರೀಮಿಯಮ್ ಹಣ 45 ಪೈಸೆ ಮಾತ್ರವೇ ಇರುತ್ತದೆ. ಕಾಯ್ದಿರಿಸಿದ ಟಿಕೆಟ್ಗಳಿಗೆ ಈ ಇನ್ಷೂರೆನ್ಸ್ ಆಯ್ಕೆ ಇರುತ್ತದೆ. ಟಿಕೆಟ್ ಜೊತೆಗೆ ಇನ್ಷೂರೆನ್ಸ್ ಸೇರಿಸಿ ಖರೀದಿಸಿದರೆ ನಾಮಿನಿಯನ್ನು ಹೆಸರಿಸಬಹುದು.
ಇನ್ಷೂರೆನ್ಸ್ ಕವರೇಜ್ ಎಷ್ಟಿರುತ್ತದೆ?
ಈ ಇನ್ಷೂರೆನ್ಸ್ನಲ್ಲಿ 10 ಲಕ್ಷ ರೂವರೆಗೆ ಕವರೇಜ್ ಇರುತ್ತದೆ. ಪ್ರಯಾಣ ಮಾಡುವಾಗ ಸಾವಾದರೆ ನಾಮಿನಿಗೆ 10 ಲಕ್ಷ ರೂ ಸಿಗುತ್ತದೆ. ಪೂರ್ಣ ಅಂಗವೈಕಲ್ಯವಾದರೂ 10 ಲಕ್ಷ ರೂ ಸಿಗುತ್ತದೆ. ಭಾಗಶಃ ಅಂಗವೈಕಲ್ಯವಾದರೆ 7.5 ಲಕ್ಷ ರೂ ಪರಿಹಾರ ಸಿಗುತ್ತದೆ.
ಗಾಯಗೊಂಡು ಆಸ್ಪತ್ರೆ ಸೇರಿದರೆ 2 ಲಕ್ಷ ರೂವರೆಗಿನ ವೆಚ್ಚವನ್ನು ಇನ್ಷೂರೆನ್ಸ್ ಕಂಪನಿ ಭರಿಸುತ್ತದೆ. ಈ ಟ್ರಾವೆಲ್ ಇನ್ಷೂರೆನ್ಸ್ಗಾಗಿ ರೈಲ್ವೆ ಇಲಾಖೆಯು ಬೇರೆ ಬೇರೆ ಇನ್ಷೂರೆನ್ಸ್ ಕಂಪನಿಗಳ ಜೊತೆ ಸಹಯೋಗ ಮಾಡಿಕೊಂಡಿದೆ.
ಇದನ್ನೂ ಓದಿ: ಇ100 ಇಂಧನ ಚಾಲಿತ ವಾಹನಗಳಿಗೆ ಗ್ರೀನ್ ಸಿಗ್ನಲ್; ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ಸರ್ಕಾರದ ತಿದ್ದುಪಡಿ
ಟ್ರಾವೆಲ್ ಇನ್ಷೂರೆನ್ಸ್ ಜೊತೆ ಟಿಕೆಟ್ ಅನ್ನು ಕ್ಯಾಷ್ನಲ್ಲಿ ಕೊಳ್ಳಲು ಯಾಕೆ ಅವಕಾಶವಿಲ್ಲ?
ಇನ್ಷೂರೆನ್ಸ್ ಪ್ರೀಮಿಯಮ್ ಹಣ ಪೈಸೆ ಲೆಕ್ಕದಲ್ಲಿ ಇರುತ್ತದೆ. ಕೌಂಟರ್ನಲ್ಲಿ ಇದಕ್ಕೆ ಹಣ ಪಾವತಿಸುವಾಗ ಚಿಲ್ಲರೆ ಸಮಸ್ಯೆಯಾಗುತ್ತದೆ. ಇದನ್ನು ತಪ್ಪಿಸಲು ಸಂಪೂರ್ಣ ಡಿಜಿಟಲ್ ಪೇಮೆಂಟ್ ನಿಯಮ ಮಾಡಲಾಗಿದೆ. ಟ್ರಾವೆಲ್ ಇನ್ಷೂರೆನ್ಸ್ ಬೇಡವೆಂದರೆ ಕೌಂಟರ್ನಲ್ಲಿ ಕ್ಯಾಷ್ ಕೊಟ್ಟೇ ಟಿಕೆಟ್ ಖರೀದಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




