AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಇಲಾಖೆಯಿಂದ ಮಹತ್ವದ ನಿಯಮ: ಪ್ರಯಾಣಿಕರೇ ಎಚ್ಚರ.. ಈ ತಪ್ಪು ಮಾಡಿದ್ರೆ 5,000 ದಂಡ, ಜೈಲು ಶಿಕ್ಷೆ ಖಂಡಿತ

ಭಾರತೀಯ ರೈಲ್ವೆ ರೈಲು ಪ್ರಯಾಣದಲ್ಲಿ ಮೊಬೈಲ್ ಫೋನ್ ಸ್ಪೀಕರ್ ಬಳಕೆ ಮತ್ತು ಜೋರಾಗಿ ಮಾತನಾಡುವಿಕೆ ಕುರಿತು ಕಠಿಣ ನಿಯಮ ಜಾರಿಗೊಳಿಸಿದೆ. ಸಹಪ್ರಯಾಣಿಕರ ಅನಾನುಕೂಲತೆ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ಅಥವಾ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ (ಸೆಕ್ಷನ್ 145(2)(ಎ)). ಶಾಂತಿಯುತ ಪ್ರಯಾಣಕ್ಕಾಗಿ ಇಯರ್‌ಫೋನ್ ಬಳಸಿ, ಸಾರ್ವಜನಿಕ ಶಿಷ್ಟಾಚಾರ ಪಾಲಿಸಿ.

ರೈಲ್ವೆ ಇಲಾಖೆಯಿಂದ ಮಹತ್ವದ ನಿಯಮ: ಪ್ರಯಾಣಿಕರೇ ಎಚ್ಚರ.. ಈ ತಪ್ಪು ಮಾಡಿದ್ರೆ 5,000 ದಂಡ, ಜೈಲು ಶಿಕ್ಷೆ ಖಂಡಿತ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 19, 2026 | 12:57 PM

Share

ಬೆಂಗಳೂರು, ಅ.19 : ಈ ಹಿಂದೆ ನಮ್ಮ ಮೆಟ್ರೋದಲ್ಲಿ ಮಾತ್ರ  ಜೋರಾಗಿ ಮಾತನಾಡಿದ್ರೆ, ಮೊಬೈಲ್​​ನಲ್ಲಿ ಹಾಡು ಇಟ್ಟರೆ ದಂಡವನ್ನು ವಿಧಿಸುವ ನಿಯಮವನ್ನು ಮಾಡಲಾಗಿತ್ತು . ಇದೀಗ ಇನ್ಮುಂದೆ  ರೈಲು ಪ್ರಯಾಣದ ವೇಳೆ ಮೊಬೈಲ್ ಫೋನ್‌ನಲ್ಲಿ ಇಯರ್‌ಫೋನ್‌ ಬಳಸದೆ ಲೌಡ್‌ಸ್ಪೀಕರ್ ಮೋಡ್‌ನಲ್ಲಿ ಹಾಡುಗಳನ್ನು ಕೇಳುವುದು, ವಿಡಿಯೋ ಅಥವಾ ರೀಲ್ಸ್ ನೋಡುವುದು ಹಾಗೂ ಜೋರಾಗಿ ಮಾತನಾಡುವುದು ನಿಮಗೆ ಸಂಕಷ್ಟ ತರಲಿದೆ. ಇಂತಹ ವರ್ತನೆಯಿಂದ ಇತರ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ತಡೆಯಲು ಭಾರತೀಯ ರೈಲ್ವೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ್ದು, ತಪ್ಪಿದಲ್ಲಿ ದಂಡ ಹಾಗೂ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಜನ್ ವಿಶ್ವಾಸ್ (ತಿದ್ದುಪಡಿ) ಕಾಯ್ದೆಯ ಪ್ರಕಾರ ರೈಲ್ವೆ ಕಾಯ್ದೆಯ ಸೆಕ್ಷನ್ 145 (2) (ಎ) ಅಡಿಯಲ್ಲಿ, ಸಾರ್ವಜನಿಕ ಸ್ಥಳ ಅಥವಾ ರೈಲುಗಳಲ್ಲಿ ಮೊಬೈಲ್ ಫೋನ್‌ಗಳನ್ನು ಸ್ಪೀಕರ್ ಮೋಡ್‌ನಲ್ಲಿ ಬಳಸುವ ಮೂಲಕ ಅಥವಾ ಜೋರಾಗಿ ಮಾತನಾಡುವ ಮೂಲಕ ಇತರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈಲ್ವೆ ಅಧಿಕಾರಿಯ ಎಚ್ಚರಿಕೆಯ ನಂತರವೂ ನಿಯಮ ಉಲ್ಲಂಘನೆ ಮುಂದುವರಿಸಿದರೆ, 6 ತಿಂಗಳ ಸರಳ ಜೈಲು ಶಿಕ್ಷೆ ಮತ್ತು/ಅಥವಾ 5,000 ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.

ದಕ್ಷಿಣ ರೈಲ್ವೆ ಸೇರಿದಂತೆ ವಿವಿಧ ವಲಯಗಳು ಈ ಕುರಿತು ಜಾಗೃತಿ ಮೂಡಿಸಲು ಸೂಚನೆ ನೀಡಿವೆ. ಅಲ್ಲದೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಟಿಕೆಟ್ ಪರೀಕ್ಷಕರಿಗೆ ಹಾಗೂ ರೈಲ್ವೆ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ. ಎಸಿ ಕೋಚ್‌ಗಳು ಹಾಗೂ ಮೌತವಾದ ವಾತಾವರಣದಲ್ಲಿ ಪ್ರಯಾಣಿಸುವಾಗ ಕೆಲವರು ಮೊಬೈಲ್‌ನಲ್ಲಿ ಸಿನಿಮಾ, ಧಾರಾವಾಹಿ ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್‌ಗಳನ್ನು ಹೈ ವಾಲೂಮ್‌ನಲ್ಲಿ ಇಟ್ಟುಕೊಂಡು ಇಡೀ ಬೋಗಿಗೆ ಕಿರಿಕಿರಿ ಉಂಟುಮಾಡುತ್ತಾರೆ ಎಂಬ ದೂರುಗಳು ನಿರಂತರವಾಗಿ ಕೇಳಿಬಂದಿದ್ದವು.

ಇದನ್ನೂ ಓದಿ: ತಿರುಪತಿಗೆ ತೆರಳುವ ಭಕ್ತರಿಗೆ ಗುಡ್‌ನ್ಯೂಸ್: ಬೆಂಗಳೂರು, ಪ್ರಯಾಗ್‌ರಾಜ್ ವಿಶೇಷ ರೈಲುಗಳಲ್ಲಿ ಸಾವಿರಾರು ಬರ್ತ್‌ ಖಾಲಿ, ಸುಲಭವಾಗಿ ಟಿಕೆಟ್ ಪಡೆಯಿರಿ

ಪ್ರಯಾಣಿಕರು ಸಾರ್ವಜನಿಕ ಶಿಷ್ಟಾಚಾರವನ್ನು ಪಾಲಿಸಬೇಕು. ಆಡಿಯೋ ಕೇಳಲು ಕಡ್ಡಾಯವಾಗಿ ಇಯರ್‌ಫೋನ್‌ಗಳನ್ನು ಬಳಸುವುದು, ಕರೆಗಳನ್ನು ಸಂಕ್ಷಿಪ್ತವಾಗಿ ಮತ್ತು ಮಿತವಾದ ಧ್ವನಿಯಲ್ಲಿ ಮಾತನಾಡುವಂತೆ ರೈಲ್ವೆ ಇಲಾಖೆ ಕೋರಿದೆ. ಒಂದು ವೇಳೆ ಪಕ್ಕದ ಪ್ರಯಾಣಿಕರಿಂದ ನಿರಂತರವಾಗಿ ತೊಂದರೆಯುಂಟಾದಲ್ಲಿ, ಪ್ರಯಾಣಿಕರು ತಕ್ಷಣವೇ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಬಹುದು ಅಥವಾ ‘ರೈಲ್ಮದದ್’ ಪೋರ್ಟಲ್ ಮೂಲಕ ದೂರು ದಾಖಲಿಸಬಹುದಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More