ಕೊರೊನಾ (Corona) ಸೋಂಕು ಹರಡುವುದನ್ನು ತಡೆಯಲು ಫೇಸ್ ಮಾಸ್ಕ್ (Face Mask) ಅತೀ ಮುಖ್ಯವಾಗಿದೆ. ಆದರೆ ಯಾವ ರೀತಿ ಮಾಸ್ಕ್ ಧರಿಸಿದರೆ ಹೆಚ್ಚು ಸುರಕ್ಷಿತ ಎನ್ನುವುದನ್ನು ತಿಳಿದುಕೊಳ್ಳಬೇಕು. ತಜ್ಞರ ಪ್ರಕಾರ ಬಟ್ಟೆಯ ಮಾಸ್ಕ್ಗಳು ಹೆಚ್ಚು ಸುರಕ್ಷಿತವಲ್ಲ. ಹೀಗಾಗಿ ಇದೀಗ ಭಾರತೀಯ ವಿಜ್ಞಾನಿಗಳ ತಂಡ ತಾಮ್ರ ಆಧಾರಿತ ನ್ಯಾನೋಪಾರ್ಟಿಕಲ್ ಕೋಟೆಡ್ ಆ್ಯಂಟಿವೈರಲ್ ಫೇಸ್ ಮಾಸ್ಕ್ (Copper-based Nanoparticle-coated Antiviral Face Mask) ಅನ್ನು ಅಭಿವೃದ್ಧಿಪಡಿಸಿದೆ. ಇದು ಕೊರೊನಾ ವೈರಸ್ ಮಾತ್ರವಲ್ಲದೆ ಇದರ ವೈರಲ್ಗಳು ಕೂಡ ದೇಹವನ್ನು ಬಾಯಿ ಮತ್ತು ಮೂಗಿನಿಂದ ಪ್ರವೇಶಿಸದಂತೆ ತಡೆಯುತ್ತದೆ. ಜತೆಗೆ ಸರಾಗವಾಗಿ ಉಸಿರಾಡಲು ನೆರವಾಗುತ್ತದೆ. ಇದನ್ನು ತೊಳೆದು ಮರುಬಳಕೆ ಮಾಡಬಹುದಾಗಿದೆ ಹಾಗೂ ಮಣ್ಣಿನಲ್ಲಿ ವಿಘಟನೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಿಜ್ಞಾನಿಗಳೂ ಕೂಡ ಸುರಕ್ಷಿತವಾದ ಕಡಿಮೆ ಬೆಲೆಯ ಮಾಸ್ಕ್ಅನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಆಂಟಿವೈರಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಮಾಸ್ಕ್ಗಳು ದುಬಾರಿ ಬೆಲೆ ಮಾರಟವಾಗುತ್ತಿದೆ. ಕೊರೊನಾ ವೈರಸ್ ಜನನಿಬಿಡ ಪ್ರದೇಶಗಳಾದ ಆಸ್ಪತ್ರೆ, ವಿಮಾನ ನಿಲ್ದಾಣ, ಮಾಲ್ಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಹೀಗಾಗಿ ಹೆಚ್ಚು ಸುರಕ್ಷತೆ ನೀಡುವ ಕಡಿಮೆ ಬೆಲೆಯ ಮಾಸ್ಕ್ ತಯಾರಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪೌಡರ್ ಮೆಟಲರ್ಜಿ ಮತ್ತು ನ್ಯೂ ಮೆಟೀರಿಯಲ್ನ ಅಂತರಾಷ್ಟ್ರೀಯ ಸುಧಾರಿತ ಸಂಶೋಧನಾ ಕೇಂದ್ರ, ಭಾರತ ಸರ್ಕಾರ, R &Dಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ಬೆಂಗಳೂರಿನ ರೆಸಿಲ್ ಕೆಮಿಕಲ್ಸ್ನ ಸಹಯೋಗದೊಂದಿಗೆ ತಾಮ್ರ ಲೇಪಿತ ನ್ಯಾನೋಪಾರ್ಟಿಕಲ್ ಕೋಟೆಡ್ ಆ್ಯಂಟಿವೈರಲ್ ಫೇಸ್ ಮಾಸ್ಕ್ ಅಭಿವೃದ್ಧಿಪಡಿಸಲಾಗಿದೆ.
ಈ ನ್ಯಾನೋಪಾರ್ಟಿಕಲ್ ಫೇಸ್ ಮಾಸ್ಕ್ಗಳನ್ನು ಸುಮಾರು 20 ನ್ಯಾನೋ ಮೀಟರ್ಗಳ ಫ್ಲೇಮ್ ಸ್ಪ್ರೇ ಪೈರೋಲಿಸಿಸ್ (Flame Spray Pyrolysis) ಮುಲಕ ತಯಾರಿಸಲಾಗಿದ್ದು, ಒಳಗಡೆಯಿಂದ ಹತ್ತಿಯ ಪದರವನ್ನು ಹಾಕಲಾಗಿದೆ. ಇದು ಶೇ. 99.9ಕ್ಕಿಂತ ಹೆಚ್ಚು ಪಟ್ಟು ವೈರಸ್ ದೇಹವನ್ನು ಸೇರದಂತೆ ತಡೆಯುತ್ತದೆ. ಇದರಲ್ಲೇ ಸಿಂಗಲ್ ಕೋಟೆಡ್ ಮತ್ತು ಮೂರು ಕೋಟಿಂಗ್ ಇರುವ ಮಾಸ್ಕ್ಗಳನ್ನು ಉತ್ಪಾದಿಸಲಾಗುತ್ತಿದೆ. ಈ ಮಾಸ್ಕ್ಅನ್ನು DSTಯ ನ್ಯಾನೋ ಮಷಿನ್ ಪ್ರಾಜೆಕ್ಟ್ ಅಡಿಯಲ್ಲಿ ತಯಾರಿಸಲಾಗುತ್ತಿದೆ. ಈ ಮಾಸ್ಕ್ಗಳಲ್ಲಿ ತಾಮ್ರ ಆಧಾರಿತ ನ್ಯಾನೋಪಾರ್ಟಿಕಲ್ ಸಿಂಗಲ್ ಕೋಟೆಡ್ ಮಾಸ್ಕ್ಗಳು ಹೆಚ್ಚು ಸುರಕ್ಷಿತ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈಗಾಗಲೇ ಬೆಂಗಳೂರಿನ ರೆಸಿಲ್ ಕೆಮಿಕಲ್ಸ್ ಸಂಸ್ಥೆ ಡಬಲ್ ಲೇಯರ್ ಮಾಸ್ಕ್ಗಳನ್ನು ಉತ್ಪಾದಿಸುತ್ತಿವೆ. ಈ ಮಾಸ್ಕ್ಗಳನ್ನು ಸರಿಯಾಗಿ ಧರಿಸದಿದ್ದರೆ ಮತ್ತು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ ವೈರಸ್ಅನ್ನು ಮತ್ತೆ ಹರಡುವ ಸಾಧ್ಯತೆ ಇರುತ್ತದೆ. ಜನನಿಬಿಡ ಸ್ಥಳಗಳಲ್ಲಿ ಡಬಲ್ ಲೇಯರ್ ಮಾಸ್ಕ್ ಧರಿಸವುದು ಹೆಚ್ಚು ಸುರಕ್ಷಿತ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಜಗತ್ತಿನಾದ್ಯಂತ ಈಗ ಎಸೆದ ಮಾಸ್ಕ್ಗಳ ವಿಲೇವಾರಿಯ ಸಂಕಷ್ಟ ಎದುರಾಗಿದೆ ಆದರೆ ವಿಜ್ಞಾನಿಗಳ ತಂಡ ತಯಾರಿಸಿದ ಆ್ಯಂಟಿವೈರಲ್ ಮಾಸ್ಕ್ಗಳು ಭೂಮಿಯಲ್ಲಿ ಕರಗುತ್ತವೆ. ಈ ಹೀಗಾಗಿ ವಿಘಟನೆಯ ಸಮಸ್ಯೆ ಎದುರಾಗುವುದಿಲ್ಲ ಎಂದು ವಿಜ್ಞಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ಮಾರುಕಟ್ಟೆಗೆ ಬಂತು ಮೂಗನ್ನು ಮಾತ್ರ ಮುಚ್ಚುವ ಮಾಸ್ಕ್: ಜಗತ್ತಿನಾದ್ಯಂತ ವೈರಲ್ ಆದ ‘ಕೋಸ್ಕ್’ ಮಾಸ್ಕ್