ಮಾರುಕಟ್ಟೆಗೆ ಬಂತು ಮೂಗನ್ನು ಮಾತ್ರ ಮುಚ್ಚುವ ಮಾಸ್ಕ್: ಜಗತ್ತಿನಾದ್ಯಂತ ವೈರಲ್ ಆದ ‘ಕೋಸ್ಕ್’ ಮಾಸ್ಕ್
ದಕ್ಷಿಣ ಕೊರಯಾದ ಮಾಸ್ಕ್ ತಯಾರಿಕಾ ಕಂಪನಿಯೊಂದು ಕೇವಲ ಮೂಗನ್ನು ಮಾತ್ರ ಮುಚ್ಚುವ ಮಾಸ್ಕ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಇದು ಜಗತ್ತಿನೆಲ್ಲೆಡೆ ವೈರಲ್ ಆಗಿದೆ.

ಕೊರೊನಾ(Corona) ಆರಂಭವಾದಾಗಿನಿಂದ ಮಾಸ್ಕ್(Mask) ಗಳು ದೈನಂದಿನ ಜೀವನದ ಭಾಗವಾಗಿದೆ. ಮೂಗು ಬಾಯಿಯನ್ನು ಸರಿಯಾಗಿ ಮುಚ್ಚಿಕೊಳ್ಳಬೇಕು ಎನ್ನುವ ಘೋಷವಾಕ್ಯದೊಂದಿಗೆ ಮಾಸ್ಕ್ ಜೀವನ ಇಂದಿಗೂ ಮುಂದುವರೆಯುತ್ತಿದೆ. ಹೀಗಿದ್ದಾಗ ದಕ್ಷಿಣ ಕೊರಯಾದ ಮಾಸ್ಕ್ ತಯಾರಿಕಾ ಕಂಪನಿಯೊಂದು ಕೇವಲ ಮೂಗನ್ನು ಮಾತ್ರ ಮುಚ್ಚುವ ಮಾಸ್ಕ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಆನ್ಲೈನ್ನಲ್ಲೂ ಮಾರಾಟವಾಗುತ್ತಿರುವ ಮಾಸ್ಕ್ ಜಗತ್ತಿನಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ. ಈ ಮಾಸ್ಕ್ಗೆ ‘ಕೋಸ್ಕ್’ (Kosk) ಎಂದು ಹೆಸರಿಡಲಾಗಿದೆ. ದಕ್ಷಿಣ ಕೊರಿಯಾ ಭಾಷೆಯಲ್ಲಿ ‘ಕೋ’ ಎಂದರೆ ಮೂಗು ಎಂದರ್ಥ ಎಂದು ಟ್ರಿಬ್ಯೂನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸದ್ಯ ಈ ಮೂಗನ್ನು ಮಾತ್ರ ಮುಚ್ಚುವ ವಿಚಿತ್ರ ಮಾಸ್ಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ಊಟ. ತಿಂಡಿ ಮಾಡಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಹೇಳಲಾಗಿದೆ. ಈ ಮಾಸ್ಕ್ಅನ್ನು ದಕ್ಷಿಣ ಕೊರಿಯಾದ ಅಟ್ಮ್ಯಾನ್ ಎನ್ನುವ ಕಂಪನಿ ತಯಾರಿಸಿದೆ. ಈ ವಿಭಿನ್ನ ಮಾಸ್ಕ್ ನೋಡಿ ನೆಟ್ಟಿಗರು ಮೂರ್ಖತನದ ಕೆಲಸ ಎಂದು ಕಾಮೆಂಟ್ ಮಾಡಿದ್ದಾರೆ. ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ಕೋಸ್ಕ್ ಮಾಸ್ಕ್ಗಳನ್ನು ನೋಡಿ ಬಳಕೆದಾರರೊಬ್ಬರು ಚಾಕಲೇಟ್ನಿಂದ ತಯಾರಿಸಿದ ಟೀ ಪಾಟ್ಗಳನ್ನೇನಾದರೂ ಮಾರುತ್ತಿದ್ದಾರಾ ಎಂದು ಟೀಕಿಸಿದ್ದಾರೆ.
ಕೊರೊನಾ ಇನ್ನು ಮುಗಿದಿಲ್ಲ. ಅದರ ತಳಿ, ಉಪತಳಿಗಳು ಜನರ ದೇಹವನ್ನು ಹೊಕ್ಕಿ ಜಗತ್ತಿನ ಎಲ್ಲ ದೇಶಗಳಲ್ಲಿ ಜನರ ಜೀವ ಹಿಂಡುತ್ತಿದೆ. ಕೊರೊನಾ ಕೇವಲ ಮೂಗಿನ ಮೂಲಕ ಮಾತ್ರವಲ್ಲ ಬಾಯಿಯ ಮೂಲಕವೂ ಹರಡಬಲ್ಲದು ಎನ್ನುವ ವಾದ ಇರುವ ಕಾರಣ ಈ ರೀತಿ ಮೂಗನ್ನು ಮಾತ್ರ ಮುಚ್ಚುವ ಮಾಸ್ಕ್ ಹಾಕಿದರೆ ಸೋಂಕು ಹರಡುವ ಪ್ರಮಾಣ ಏರಿಕೆಯಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ. ಇದರ ಜೊತೆಗೆ ಮರುಬಳಕೆಯ ಕಾಪರ್ ಆಂಟಿವೈರಸ್ ನೋಸ್ ಮಾಸ್ಕ್ (Copper Antivirus Nose Masks) ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಇದು ಮೂಗು ಮತ್ತು ಬಾಯಿಯನ್ನು ಮುಚ್ಚುತ್ತದೆ. ಇದನ್ನು ಊಟ ತಿಂಡಿ ಮಾಡುವಾಗ ತೆಗೆದುಕೊಳ್ಳಬೇಕಾಗಿದೆ.
ಈ ಹಿಂದೆ ಕೊರೊನಾ ಆರಂಭದ ದಿನಗಳಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಮಾಸ್ಕ್ ಕುರಿತು ಸಾವಿರಾರು ಮೀಮ್ಸ್ಗಳು, ಟ್ರೋಲ್ಗಳು ಹರಿದಾಡಿದ್ದವು. ಇದೀಗ ದಕ್ಷಿಣ ಕೊರಿಯಾದ ವಿಚಿತ್ರ ಮಾಸ್ಕ್ ನೋಡಿ ಜಗತ್ತಿನಾದ್ಯಂತ ಹಲವು ಮೀಮ್ಸ್ಗಳು ಹರಿದಾಡುತ್ತಿವೆ.
ಇದನ್ನೂ ಓದಿ:
Published On - 1:14 pm, Fri, 4 February 22




