ದೆಹಲಿ: ಭಾರತದ ಮೇಲೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ್ದ ಐಸಿಸ್ ಉಗ್ರನನ್ನು ಇತ್ತೀಚೆಗೆ ರಷ್ಯಾ ಭದ್ರತಾ ಪಡೆಗಳು ಬಂಧಿಸಿದ್ದವು. ಬಂಧಿತ ಉಗ್ರನ ವಿಚಾರಣೆಗೆ ಭಾರತ ಅವಕಾಶ ಕೋರಿದೆ. ಇದೀಗ ರಷ್ಯಾ ಸರ್ಕಾರಕ್ಕೆ ಭಾರತದ ತನಿಖಾ ಸಂಸ್ಥೆಗಳು ಉಗ್ರನಿಂದ ಪಡೆಯಲು ಇಚ್ಛಿಸಿರುವ ಮಾಹಿತಿಯ ಬಗ್ಗೆ ಪ್ರಶ್ನೆಗಳನ್ನು ಕಳಿಸಿಕೊಟ್ಟಿವೆ. ಬಂಧಿತ ಉಗ್ರನನ್ನು ಉಜ್ಬೆಕ್ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಅಝಮೊವ್ ಎಂದು ಗುರುತಿಸಲಾಗಿದೆ. ಇವನ ಸಹವರ್ತಿಯಾಗಿದ್ದ ಕಿರ್ಗಿಸ್ತಾನದ ಪ್ರಜೆಯನ್ನು ಟರ್ಕಿಯಲ್ಲಿ ಕೊಲ್ಲಲಾಗಿದೆ. ಅವನು ಭಾರತದ ಮೇಲಿನ ದಾಳಿಗೆ ಹಿಂಜರಿದಿದ್ದೇ ಕೊಲೆಗೆ ಕಾರಣ ಎಂದು ರಷ್ಯಾದ ಕೇಂದ್ರೀಯ ತನಿಖಾ ಸೇವೆಯ (Federal Security Service – FSB) ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ 22ರಂದು ಉಗ್ರನನ್ನು ಎಫ್ಎಸ್ಬಿ ಬಂಧಿಸಿತ್ತು, ಉಗ್ರರು ನಡೆಸುತ್ತಿರುವ ಭಾರತ ವಿರೋಧಿ ಷಡ್ಯಂತ್ರಗಳ ಬಗ್ಗೆ ಜುಲೈ ತಿಂಗಳ ಕೊನೆಯಲ್ಲಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿತ್ತು.
ಭಾರತದ ತನಿಖಾ ಸಂಸ್ಥೆಗಳು ಆರಂಭದಿಂದಲೂ ರಷ್ಯಾ ಮತ್ತು ಉಜ್ಬೆಕ್ ತನಿಖಾ ದಳಗಳೊಂದಿಗೆ ಸಂಪರ್ಕದಲ್ಲಿದ್ದು, ಉಗ್ರ ಅಜಮೊವ್ನ ನೇರ ವಿಚಾರಣೆಗೆ ಅವಕಾಶ ಕೋರಿವೆ. ಭಾರತದ ಮನವಿಗೆ ಹಾಗೂ ಭಾರತವು ಕಳಿಸಿಕೊಟ್ಟಿರುವ ಪ್ರಶ್ನೆಗಳಿಗೆ ರಷ್ಯಾ ಮತ್ತು ಉಜ್ಬೆಕ್ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆನ್ಲೈನ್ ಸಂದೇಶಗಳಿಂದ ಪ್ರಭಾವಿತನಾಗಿದ್ದ ಅಜಮೊವ್ಗೆ ಟರ್ಕಿಯಲ್ಲಿ ಐಸಿಸ್ ಉಗ್ರರು ತರಬೇತಿ ನೀಡಿದ್ದರು. ಭಾರತದಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮದ್ ಪೈಗಂಬರ್ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಸೇಡು ತೀರಿಸಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಕಿರ್ಗಿಸ್ತಾನದ ಮತ್ತೋರ್ವ ನಾಗರಿಕನಿಗೂ ಇದೇ ಹೊಣೆ ನೀಡಲಾಗಿತ್ತು. ಆತ ಮಾಸ್ಕೊ ಮಾರ್ಗವಾಗಿ ಟರ್ಕಿಗೆ ಹೋಗಿದ್ದ. ಅಲ್ಲಿಯೇ ಕೊಲೆಯಾದ ಎಂದು ಹೇಳಲಾಗಿದೆ.
ಟರ್ಕಿ, ಕತಾರ್ ಮತ್ತು ಕುವೈತ್ ಸೇರಿದಂತೆ ಪಶ್ಚಿಮ ಏಷ್ಯಾ ದೇಶಗಳಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು ಮತ್ತು ಅವರನ್ನು ನಿರ್ವಹಿಸುವ ವ್ಯಕ್ತಿಗಳನ್ನು ಗುರುತಿಸಲು ಭಾರತದ ತನಿಖಾ ಸಂಸ್ಥೆಗಳು ಸತತ ಪ್ರಯತ್ನ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಅಝಮೊವ್ನನ್ನು ವಿಚಾರಣೆಗಾಗಿ ಭಾರತದ ಅಧಿಕಾರಿಗೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇಸ್ಲಾಂನ ವಹಾಬಿ ಪಂಥವನ್ನು ಪ್ರತಿಪಾದಿಸುವ ಐಸಿಸ್ ತಾಲಿಬಾನಿಗಳ ಡಿಯೊಬಂದಿ ಹಾಗೂ ಅಲ್ಖೈದಾ ಉಗ್ರರ ಸಲಾಫಿ ಪಂಥಗಳನ್ನು ವಿರೋಧಿಸುತ್ತದೆ. 2014ರಿಂದಲೂ ವಿಶ್ವದ ಅತಿದೊಡ್ಡ, ಪ್ರಭಾವಿ ಭಯೋತ್ಪಾದಕ ಸಂಘಟನೆಯಾಗಿ ಹೊರಹೊಮ್ಮಲು ಐಸಿಸ್ ಪ್ರಯತ್ನಿಸುತ್ತಲೇ ಇದೆ.
ನೂಪುರ್ ಶರ್ಮಾ ಹೇಳಿಕೆಯು ದೊಡ್ಡಮಟ್ಟದಲ್ಲಿ ವಿವಾದವಾದ ನಂತರ ಭಾರತದಲ್ಲಿ ನಡೆಯಬಹುದಾದ ಸಂಭಾವ್ಯ ದಾಳಿಯ ಬಗ್ಗೆ ಮಾಹಿತಿ ಕಲೆಹಾಕುವ ದೊಡ್ಡಮಟ್ಟದ ಕಾರ್ಯಾಚರಣೆಗೆ ಭಾರತದ ತನಿಖಾ ಸಂಸ್ಥೆಗಳು ಮುಂದಾದವು. ಈ ಹಿನ್ನೆಲೆಯಲ್ಲಿ ಅಝಮೊವ್ ಬಂಧನ ಮತ್ತು ವಿಚಾರಣೆಯು ಭಾರತದ ತನಿಖಾ ಸಂಸ್ಥೆಗಳು ಮುಖ್ಯವೆನಿಸುತ್ತದೆ. ಭಾರತದಲ್ಲಿ ಇರುವ ಐಸಿಸ್ ಉಗ್ರರ ಜಾಲ ಮತ್ತು ಬೆಂಬಲಿಗರ ನಂಟಿನ ಬಗ್ಗೆ ಮಾಹಿತಿ ಕಲೆಹಾಕಲು ಅಝಮೊವ್ ವಿಚಾರಣೆಯನ್ನು ಭಾರತದ ತನಿಖಾ ಸಂಸ್ಥೆಗಳು ಎದುರು ನೋಡುತ್ತಿವೆ.