AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ; ರೆಸ್ಟೋರೆಂಟ್​ಗೆ ಹೋಗುತ್ತಿದ್ದವನಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು

ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿ, ಕಾರ್ತೀಕ್​ ವಾಸುದೇವ್ ಸಾವಿಗೆ ಸಂತಾಪ ಸೂಚಿಸಿದೆ. ಇದು ನಿಜಕ್ಕೂ ಆಘಾತಕಾರಿ ವಿಚಾರ ಎಂದು ಹೇಳಿರುವ ಅದು, ನಾವು ಕಾರ್ತೀಕ್ ವಾಸುದೇವ್​ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ.

ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ; ರೆಸ್ಟೋರೆಂಟ್​ಗೆ ಹೋಗುತ್ತಿದ್ದವನಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು
ಕಾರ್ತೀಕ್ ವಾಸುದೇವ್​
TV9 Web
| Updated By: Lakshmi Hegde|

Updated on: Apr 09, 2022 | 2:34 PM

Share

ಕೆನಡಾದಲ್ಲಿ (Canada)ಭಾರತೀಯ ಮೂಲದ ಯುವಕನೊಬ್ಬನನ್ನು ಗುಂಡು ಹೊಡೆದು ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯ ಹೆಸರು ಕಾರ್ತೀಕ್​ ವಾಸುದೇವ್ ಎಂದಾಗಿದ್ದು ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಟೊರಂಟೋದ ಗ್ಲೆನ್​ ರಸ್ತೆಯಲ್ಲಿರುವ ಶೆಬೋರ್ನ್​ ಸಬ್​ವೇ (ಸುರಂಗಮಾರ್ಗ) ಸ್ಟೇಶನ್​​ನ ಪ್ರವೇಶದ್ವಾರದಲ್ಲಿ ಇವರಿಗೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತೀಕ್​ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಟೊರಂಟೊ ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರ್ತೀಕ್ ವಾಸುದೇವ್ ಅವರು ಟೊರಂಟೊದ ಸೆನೆಕಾ ಕಾಲೇಜಿನಲ್ಲಿ ಮಾರ್ಕೆಟಿಂಗ್​ ಮ್ಯಾನೇಜ್​ಮೆಂಟ್​ ವಿದ್ಯಾರ್ಥಿಯಾಗಿದ್ದು, ಪ್ರಥಮ ಸೆಮಿಸ್ಟರ್​ನಲ್ಲಿ ಓದುತ್ತಿದ್ದರು. ಹಾಗೇ, ಹಣಗಳಿಕೆಗಾಗಿ ಮೆಕ್ಸಿಕನ್ ರೆಸ್ಟೋರೆಂಟ್​ನಲ್ಲಿ ಕೆಲಸವನ್ನೂ ಮಾಡುತ್ತಿದ್ದರು. ಕ್ಲಾಸ್​ ಮುಗಿಸಿ, ರೆಸ್ಟೋರೆಂಟ್​ಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಹತ್ಯೆಯಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರ್ತೀಕ್​ ಸಾವನ್ನು ಅವರು ಓದುತ್ತಿದ್ದ ಕಾಲೇಜು ಕೂಡ ಟ್ವೀಟ್ ಮಾಡಿ ದೃಢೀಕರಿಸಿದೆ.  ಟ್ವೀಟ್ ಮಾಡಿರುವ ಸೆನೆಕಾ ಕಾಲೇಜು, ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಕಾರ್ತೀಕ್​ ವಾಸುದೇವ್​ ಸಾವಿನ ಸುದ್ದಿ ತೀವ್ರ ದುಃಖ ತಂದಿದೆ. ಕಾರ್ತೀಕ್​ ಕುಟುಂಬದೊಂದಿಗೆ ನಾವಿದ್ದೇವೆ. ಅವರ ಪಾಲಕರು, ಕುಟುಂಬದವರು, ಸ್ನೇಹಿತರು, ಸಹಪಾಠಿಗಳಿಗೆ ನಮ್ಮ ಸಾಂತ್ವನಗಳು ಎಂದು ಹೇಳಿದೆ. ಘಟನೆ ಗುರುವಾರ ಸಂಜೆಯೇ ನಡೆದಿದ್ದಾದರೂ ಇದೀಗ ಬೆಳಕಿಗೆ ಬಂದಿದೆ. ಟೊರಂಟೊ ಪೊಲೀಸ್ ಇಲಾಖೆಯ ಹೋಮಿಸೈಡ್ ಸ್ಕ್ವಾಡ್​ ತನಿಖೆಯನ್ನು ಕೈಗೆತ್ತಿಕೊಂಡಿದೆ. ಕಾರ್ತೀಕ್ ಹತ್ಯೆಗೆ ಸಂಬಂಧಪಟ್ಟು ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ. ಹತ್ಯೆ ನಡೆದ ಸ್ಥಳದ ಸುತ್ತಮುತ್ತಲೂ ಇರುವ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಯುತ್ತಿದ್ದು, ಅಲ್ಲಿನ ನಿವಾಸಿಗಳ ವಿಚಾರಣೆ ಕೂಡ ಮಾಡಲಾಗುತ್ತಿದೆ.

ವಿದೇಶಾಂಗ ಇಲಾಖೆ ಸಚಿವರಿಂದ ಸಂತಾಪ

ಟೊರಂಟೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿ, ಕಾರ್ತೀಕ್​ ವಾಸುದೇವ್ ಸಾವಿಗೆ ಸಂತಾಪ ಸೂಚಿಸಿದೆ. ಇದು ನಿಜಕ್ಕೂ ಆಘಾತಕಾರಿ ವಿಚಾರ ಎಂದು ಹೇಳಿರುವ ಅದು, ನಾವು ಕಾರ್ತೀಕ್ ವಾಸುದೇವ್​ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಕಾರ್ತೀಕ್​ ಶವವನ್ನು ಭಾರತಕ್ಕೆ ಕಳಿಸುವ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದ್ದೇವೆ. ಕುಟುಂಬಕ್ಕೆ ಸಮಾಧಾನ ಹೇಳಿದ್ದೇವೆ ಎಂದು ತಿಳಿಸಿದೆ.  ರಾಯಭಾರಿ ಕಚೇರಿ ಮಾಡಿರುವ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡಿದ್ದ ಎಸ್​.ಜೈಶಂಕರ್​, ಕಾರ್ತೀಕ್​ ಸಾವಿನ ದುರಂತದಿಂದ ನಿಜಕ್ಕೂ ನೋವಾಗಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ.

ಸೋದರನ ಪ್ರತಿಕ್ರಿಯೆ ಏನು?

ಕಾರ್ತೀಕ್ ವಾಸುದೇವ್​ ಮೂಲತಃ ಉತ್ತರ ಪ್ರದೇಶದ ಘಾಜಿಯಾಬಾದ್​ನ ಸಾಹೀಬಾಬಾದ್​ನವರು. ಇವರ ಕುಟುಂಬದವರೆಲ್ಲ ಇಲ್ಲೇ ನೆಲೆಸಿದ್ದಾರೆ.  ಕಾರ್ತೀಕ್ ವಿದ್ಯಾಭ್ಯಾಸಕ್ಕಾಗಿ ಜನವರಿಯಲ್ಲಿ ಕೆನಡಾಕ್ಕೆ ಹೋಗಿದ್ದರು ಎಂಬ ಮಾಹಿತಿಯನ್ನು ಅವರ ಸೋದರ  CP24  ಎಂಬ ಸುದ್ದಿವಾಹಿನಿಗೆ ತಿಳಿಸಿದ್ದಾಗಿ ವರದಿಯಾಗಿದೆ.

ಇದನ್ನೂ ಓದಿ: Virender Sehwag: ಪಂಜಾಬ್ ಕಿಂಗ್ಸ್ ತಮ್ಮ ಡಗೌಟ್‌ನಲ್ಲಿ ರಾಹುಲ್ ತೆವಾಟಿಯಾ ಪ್ರತಿಮೆ ಮಾಡಿಟ್ಟುಕೊಳ್ಳಲಿ..!