Defence Ministry: ವಿಶ್ವದ ಅತಿದೊಡ್ಡ ಉದ್ಯೋಗದಾತ ಭಾರತದ ರಕ್ಷಣಾ ಸಚಿವಾಲಯ; ವರದಿ

ಭಾರತದ ರಕ್ಷಣಾ ಸಚಿವಾಲಯವು ವಿಶ್ವದಲ್ಲೇ ಅತಿದೊಡ್ಡ ಉದ್ಯೋಗದಾತ ಸಂಸ್ಥೆ ಎಂದು ವರದಿಯೊಂದು ತಿಳಿಸಿದೆ.

Defence Ministry: ವಿಶ್ವದ ಅತಿದೊಡ್ಡ ಉದ್ಯೋಗದಾತ ಭಾರತದ ರಕ್ಷಣಾ ಸಚಿವಾಲಯ; ವರದಿ
ಸಾಂದರ್ಭಿಕ ಚಿತ್ರ
Image Credit source: PTI
Updated By: Ganapathi Sharma

Updated on: Oct 29, 2022 | 12:25 PM

ನವದೆಹಲಿ: ಭಾರತದ ರಕ್ಷಣಾ ಸಚಿವಾಲಯವು (Ministry of Defence) ವಿಶ್ವದಲ್ಲೇ ಅತಿದೊಡ್ಡ ಉದ್ಯೋಗದಾತ ಸಂಸ್ಥೆ. ರಕ್ಷಣಾ ಸಚಿವಾಲಯದಲ್ಲಿ ಒಟ್ಟು 29.2 ಲಕ್ಷ ಉದ್ಯೋಗಿಗಳಿದ್ದಾರೆ ಎಂದು ‘ಸ್ಟ್ಯಾಟಿಸ್ಟಾ’ ವರದಿ ತಿಳಿಸಿದೆ. ಅಮೆರಿಕದ ರಕ್ಷಣಾ ಸಚಿವಾಲಯ ಎರಡನೇ ಸ್ಥಾನದಲ್ಲಿದೆ. ಅಲ್ಲಿ 29.1 ಲಕ್ಷ ಜನ ಉದ್ಯೋಗಿಗಳಿದ್ದಾರೆ ಎಂದು ವರದಿ ತಿಳಿಸಿದೆ. ಜತೆಗೆ, 2022ರಲ್ಲಿ ವಿಶ್ವದ ಅತಿದೊಡ್ಡ ಉದ್ಯೋಗದಾತರ ಇನ್ಫೋಗ್ರಾಫಿಕ್ ಅನ್ನೂ ಪ್ರಕಟಿಸಿದೆ. ‘ಸ್ಟ್ಯಾಟಿಸ್ಟಾ’ ಎಂಬುದು ಜರ್ಮನಿಯ ಹ್ಯಾಂಬರ್ಗ್​ನ (Hamburg) ಖಾಸಗಿ ಸಂಸ್ಥೆಯಾಗಿದ್ದು, ವಿಶ್ವದ ಅನೇಕ ವಿಷಯಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಒದಗಿಸುತ್ತದೆ.

‘ವಿಶ್ವದ ಅತಿದೊಡ್ಡ ಉದ್ಯೋಗದಾತರ ಪಟ್ಟಿಯಲ್ಲಿ ಭಾರತದ ರಕ್ಷಣಾ ಸಚಿವಾಲಯ ಅಗ್ರ ಸ್ಥಾನದಲ್ಲಿದೆ. ಸಕ್ರಿಯ ಸೇವಾ ಸಿಬ್ಬಂದಿ, ಮೀಸಲು ಉದ್ಯೋಗಿಗಳು ಮತ್ತು ನಾಗರಿಕ ಸೇವಾ ಸಿಬ್ಬಂದಿ ಸೇರಿದಂತೆ ಒಟ್ಟು 29.2 ಲಕ್ಷ ಮಂದಿ ಉದ್ಯೋಗಿಗಳ ಸಚಿವಾಲಯದ ಅಧೀನದಲ್ಲಿದ್ದಾರೆ’ ಎಂದು ವರದಿ ತಿಳಿಸಿದೆ.

ಚೀನಾದಲ್ಲಿ ಹೇಗಿದೆ ಪರಿಸ್ಥಿತಿ?

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ 25 ಲಕ್ಷ ಸಿಬ್ಬಂದಿ ಇದ್ದಾರೆ. ಅಮೆರಿಕದ ರಕ್ಷಣಾ ಇಲಾಖೆಗೆ ಸರಿಸಮವೆಂದು ಹೇಳಲಾಗುತ್ತಿರುವ ಚೀನಾದ ರಕ್ಷಣಾ ಇಲಾಖೆಯಲ್ಲಿ ಒಟ್ಟು 68 ಲಕ್ಷ ಉದ್ಯೋಗಿಗಳು ಇರಬಹುದೆಂದು ಭಾವಿಸಲಾಗಿದೆ. ಆದರೆ ಈ ಅಂಕಿಅಂಶ ಪಟ್ಟಿಯಲ್ಲಿ ಸೇರಿಸುವಷ್ಟು ವಿಶ್ವಾಸಾರ್ಹವಾಗಿಲ್ಲ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ವಾಲ್​ಮಾರ್ಟ್​ನಷ್ಟು ಉದ್ಯೋಗಿಗಳನ್ನು ಹೊಂದಿರುವ ಕಂಪನಿ ವಿಶ್ವದಾದ್ಯಂತ ಎಲ್ಲೂ ಇಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕದ ಚಿಲ್ಲರೆ ವಹಿವಾಟು ಕಂಪನಿ 23 ಲಕ್ಷ ಉದ್ಯೋಗಿಗಳನ್ನು ಒಳಗೊಂಡಿದೆ. ಕಂಪನಿಗಳ ಸಾಲಿನಲ್ಲಿ 16 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್​ ನಂತರದ ಸ್ಥಾನದಲ್ಲಿದೆ.

ಇದನ್ನೂ ಓದಿ: Ministry of Defence Recruitment 2022: ರಕ್ಷಣಾ ಸಚಿವಾಲಯ ನೇಮಕಾತಿ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

2021ರಲ್ಲಿ ಜಾಗತಿಕ ವಿಲಿಟರಿ ವೆಚ್ಚ 2,113 ಶತಕೋಟಿ ಡಾಲರ್​ಗೆ ಏರಿಕೆಯಾಗಿತ್ತು. ಹೀಗಾಗಿ ವಿಶ್ವದ ಪ್ರಮುಖ ರಕ್ಷಣಾ ಸಚಿವಾಲಯಗಳು ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ ಎಂಬ ವರದಿಯಲ್ಲಿ ಅಚ್ಚರಿಯಿಲ್ಲ ಎಂದು ಹೇಳಲಾಗಿದೆ.

ಸ್ಟಾಕ್​ಹಾಮ್ ಇಂಟರ್​ನ್ಯಾಷನಲ್ ಪೀಸ್ ರಿಸರ್ಚ್ ಇನ್​ಸ್ಟಿಟ್ಯೂಟ್ ಪ್ರಕಾರ ಅಮೆರಿಕ, ಚೀನಾ, ಭಾರತ, ಯುನೈಟೆಡ್ ಕಿಂಗ್​ಡಂ, ರಷ್ಯಾ 2021ರಲ್ಲಿ ರಕ್ಷಣಾ ಕ್ಷೇತ್ರಕ್ಕಾಗಿ ಅತಿಹೆಚ್ಚು ವೆಚ್ಚ ಮಾಡಿದ ದೇಶಗಳಾಗಿವೆ. ವಿಶ್ವದ ಒಟ್ಟು ರಕ್ಷಣಾ ವೆಚ್ಚದ ಶೇಕಡಾ 62ರಷ್ಟು ಈ ದೇಶಗಳದ್ದಾಗಿವೆ.

ಅಮೆರಿಕದ ಮಿಲಿಟರಿ ವೆಚ್ಚ 2021ರಲ್ಲಿ 801 ಶತಕೋಟಿ ಡಾಲರ್ ಆಗಿದ್ದರೆ ಚೀನಾದ್ದು 293 ಶತಕೋಟಿ ಡಾಲರ್ ಆಗಿತ್ತು. ಭಾರತವು 76.6 ಶತಕೋಟಿ ಡಾಲರ್ ವ್ಯಯಿಸಿತ್ತು ಎಂದು ಸ್ಟಾಕ್​ಹಾಮ್ ಇಂಟರ್​ನ್ಯಾಷನಲ್ ಪೀಸ್ ರಿಸರ್ಚ್ ಇನ್​ಸ್ಟಿಟ್ಯೂಟ್ ವರದಿ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:50 am, Sat, 29 October 22