ಭಾರತದಲ್ಲಿ ಆಹಾರಧಾನ್ಯಗಳ ಉತ್ಪಾದನೆ ದಾಖಲೆಯ 329.7 ಮಿಲಿಯನ್ ಟನ್​ಗೆ ಏರಿಕೆ

|

Updated on: Oct 19, 2023 | 1:21 PM

ಕೃಷಿ ಸಚಿವಾಲಯವು ಬಿಡುಗಡೆ ಮಾಡಿದ ಅಂದಾಜಿನ ಪ್ರಕಾರ, ಆಹಾರ ಧಾನ್ಯಗಳ ಅಂದಾಜು ಉತ್ಪಾದನೆಯು 2017-18 ರಿಂದ 2021-22 ರವರೆಗಿನ ಆಹಾರ ಧಾನ್ಯಗಳ ಹಿಂದಿನ 5 ವರ್ಷಗಳ ಸರಾಸರಿ ಉತ್ಪಾದನೆಗಿಂತ 300 ಲಕ್ಷ ಟನ್‌ಗಳಷ್ಟು ಹೆಚ್ಚಾಗಿದೆ.

ಭಾರತದಲ್ಲಿ ಆಹಾರಧಾನ್ಯಗಳ ಉತ್ಪಾದನೆ ದಾಖಲೆಯ 329.7 ಮಿಲಿಯನ್ ಟನ್​ಗೆ ಏರಿಕೆ
ಆಹಾರಧಾನ್ಯ
Follow us on

ನವದೆಹಲಿ: 2022ರ ಜುಲೈ ತಿಂಗಳಿಂದ 2023ರ ಜೂನ್​ವರೆಗಿನ ಅವಧಿಯಲ್ಲಿ ಭಾರತದಲ್ಲಿ ಆಹಾರ ಧಾನ್ಯ ಮತ್ತು ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆಯು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ. ಈ ಬಾರಿ 2021-22ರಲ್ಲಿ ಸಾಧಿಸಿದ ಆಹಾರ ಧಾನ್ಯಗಳ ಉತ್ಪಾದನೆಗಿಂತ ಸುಮಾರು 141 ಲಕ್ಷ ಟನ್‌ಗಳಷ್ಟು ಉತ್ಪಾದನೆ ಹೆಚ್ಚಾಗಿದೆ. ಕೃಷಿ ಸಚಿವಾಲಯವು ಬಿಡುಗಡೆ ಮಾಡಿದ ಅಂದಾಜಿನ ಪ್ರಕಾರ, ಆಹಾರ ಧಾನ್ಯಗಳ ಅಂದಾಜು ಉತ್ಪಾದನೆಯು 2017-18 ರಿಂದ 2021-22 ರವರೆಗಿನ ಆಹಾರ ಧಾನ್ಯಗಳ ಹಿಂದಿನ 5 ವರ್ಷಗಳ ಸರಾಸರಿ ಉತ್ಪಾದನೆಗಿಂತ 300 ಲಕ್ಷ ಟನ್‌ಗಳಷ್ಟು ಹೆಚ್ಚಾಗಿದೆ.

ಆಹಾರ ಧಾನ್ಯ ಉತ್ಪಾದನೆಯು ಕಳೆದ ದಶಕದಲ್ಲಿ 2012-13ರಲ್ಲಿ 257.1 ದಶಲಕ್ಷ ಟನ್‌ಗಳಿಂದ 2021-22ರಲ್ಲಿ 315.6 ದಶಲಕ್ಷ ಟನ್‌ಗಳಿಗೆ ಹೆಚ್ಚಾಗಿದೆ. 2022-23ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು ಹಿಂದಿನ 5 ವರ್ಷಗಳ ಸರಾಸರಿಗಿಂತ 30.8 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಆಹಾರ ಧಾನ್ಯಗಳ ಜೊತೆಗೆ ತೋಟಗಾರಿಕೆ ಉತ್ಪನ್ನಗಳೂ ಕೂಡ ದೇಶದಲ್ಲಿ ದಾಖಲೆಯ ಮಟ್ಟದಲ್ಲಿ ಉತ್ಪಾದನೆಯಾಗುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ. 2022-23ರಲ್ಲಿ ಈ ವಿಭಾಗದ ಉತ್ಪಾದನೆಯು ದಾಖಲೆಯ 351.92 ಮಿಲಿಯನ್ ಟನ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಕೃಷಿ ಸಚಿವಾಲಯವು ಈಗ ಆಹಾರ ಧಾನ್ಯಗಳ ಉತ್ಪಾದನೆಯ 4ನೇ ಮುಂಗಡ ಅಂದಾಜನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡುವ ರೂಢಿಯನ್ನು ತೆಗೆದುಹಾಕಿದೆ. ಅದರ ಬದಲಿಗೆ ಈಗ ಅಂತಿಮ ಅಂದಾಜು ಪಟ್ಟಿಯನ್ನು ಅಕ್ಟೋಬರ್‌ನಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ: ಫೈಬರ್ ಅಂಶ ಅಧಿಕವಾಗಿರುವ ಈ 6 ತರಕಾರಿಗಳನ್ನು ನಿರ್ಲಕ್ಷ್ಯಿಸಬೇಡಿ

ಇದರ ಪ್ರಕಾರ, 2022-23 ರಲ್ಲಿ ಅಕ್ಕಿಯ ಒಟ್ಟು ಉತ್ಪಾದನೆಯು ದಾಖಲೆಯ 135.75 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷದ ಉತ್ಪಾದನೆಗಿಂತ 6.28 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ. ಅಕ್ಕಿ ಉತ್ಪಾದನೆಯು ಕಳೆದ 5 ವರ್ಷಗಳ ಸರಾಸರಿ ಉತ್ಪಾದನೆಯಾದ 120.39 ಮಿಲಿಯನ್ ಟನ್‌ಗಳಿಗಿಂತ 15.36 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ.

2022-23ರಲ್ಲಿ ಗೋಧಿ ಉತ್ಪಾದನೆಯು ದಾಖಲೆಯ 110.55 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷದ ಗೋಧಿ ಉತ್ಪಾದನೆಗಿಂತ 2.8 ಮಿಲಿಯನ್ ಟನ್ ಹೆಚ್ಚು. 105.73 ಮಿಲಿಯನ್ ಟನ್‌ಗಳ ಸರಾಸರಿ ಗೋಧಿ ಉತ್ಪಾದನೆಗೆ ಹೋಲಿಸಿದರೆ ಇದು 4.8 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ.

2022-23ರಲ್ಲಿ ಒಟ್ಟು ಬೇಳೆಕಾಳುಗಳ ಉತ್ಪಾದನೆಯು 26 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ. ಇದು ಕಳೆದ 5 ವರ್ಷಗಳ ಸರಾಸರಿ ಬೇಳೆಕಾಳುಗಳ ಉತ್ಪಾದನೆಯಾದ 24.6 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ 1.4 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ. 2022-23ರಲ್ಲಿ ದೇಶದಲ್ಲಿ ಎಣ್ಣೆಬೀಜದ ಉತ್ಪಾದನೆಯು ದಾಖಲೆಯ 41.35 ಮಿಲಿಯನ್ ಟನ್‌ಗಳೆಂದು ಅಂದಾಜಿಸಲಾಗಿದೆ. ಹಿಂದಿನ ವರ್ಷದ ಉತ್ಪಾದನೆಗೆ ಹೋಲಿಸಿದರೆ 3.39 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ ದರ ಹೆಚ್ಚಳ; ಆಗಸ್ಟ್ ತಿಂಗಳ ಅಂಕಿ ಅಂಶ ಬಿಡುಗಡೆ

ಹಣ್ಣುಗಳು, ತರಕಾರಿಗಳು, ತೋಟದ ಬೆಳೆಗಳು, ಹೂವುಗಳು ಮತ್ತು ಜೇನುತುಪ್ಪದ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೃಷಿ ಸಚಿವಾಲಯ ಹೇಳಿದೆ. 2021-22ರಲ್ಲಿ 107.51 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ 2022-23ರಲ್ಲಿ ಹಣ್ಣಿನ ಉತ್ಪಾದನೆಯು 108.34 ಮಿಲಿಯನ್ ಟನ್‌ಗಳನ್ನು ಮುಟ್ಟಿದೆ ಎಂದು ಅಂದಾಜಿಸಲಾಗಿದೆ. ತರಕಾರಿಗಳ ಉತ್ಪಾದನೆಯು 2022-23ರಲ್ಲಿ 212.91 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ ಹಿಂದಿನ ವರ್ಷದಲ್ಲಿ 209.14 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Thu, 19 October 23