ಬುಡಕಟ್ಟು ಜನರಿಗಾದ ಅವಮಾನ; ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಸೋನಿಯಾ ಗಾಂಧಿ ಹೇಳಿಕೆಗೆ ಮೋದಿ ಆಕ್ಷೇಪ

ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಅಧಿವೇಶನದಲ್ಲಿ ಮಾಡಿದ ಭಾಷಣವನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಷ್ಟ್ರಪತಿ ಭವನ ಕೂಡ ಈ ಹೇಳಿಕೆಯನ್ನು ಖಂಡಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಕಾಂಗ್ರೆಸ್ ದೇಶಾದ್ಯಂತ 10 ಕೋಟಿ ಬುಡಕಟ್ಟು ಜನರನ್ನು ಅವಮಾನಿಸಿದೆ ಎಂದು ಮೋದಿ ಹೇಳಿದ್ದಾರೆ. ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.

ಬುಡಕಟ್ಟು ಜನರಿಗಾದ ಅವಮಾನ; ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಸೋನಿಯಾ ಗಾಂಧಿ ಹೇಳಿಕೆಗೆ ಮೋದಿ ಆಕ್ಷೇಪ
Pm Modi With President Murmu

Updated on: Jan 31, 2025 | 6:14 PM

ನವದೆಹಲಿ: ಬಜೆಟ್ ಅಧಿವೇಶನಕ್ಕೂ ಮುನ್ನ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್​ನಲ್ಲಿ ಭಾಷಣ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, “ರಾಷ್ಟ್ರಪತಿ ದ್ರೌಪದಿ ತುಂಬಾ ದಣಿದಿದ್ದರು. ಅಯ್ಯೋ ಪಾ, ಅವರಿಗೆ ಮಾತನಾಡಲು ಕೂಡ ಕಷ್ಟವಾಗುತ್ತಿತ್ತು. ಕೊನೆ ಕೊನೆಯಲ್ಲಿ ಅವರು ಮಾತನಾಡಲು ಕಷ್ಟಪಡುತ್ತಿದ್ದರು. ಪೂರ್ ಥಿಂಗ್ಸ್​” ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಸೋನಿಯಾ ಗಾಂಧಿಯವರಿಂದ ಬೇಷರತ್ ಕ್ಷಮೆ ಯಾಚನೆಗೆ ಒತ್ತಾಯಿಸಿದೆ.

“ದ್ರೌಪದಿ ಮುರ್ಮು ಬುಡಕಟ್ಟು ಕುಟುಂಬದಿಂದ ರಾಷ್ಟ್ರಪತಿ ಹುದ್ದೆಗೆ ಬಂದಿದ್ದಾರೆ. ಅವರ ಮಾತೃಭಾಷೆ ಹಿಂದಿ ಅಲ್ಲ, ಅವರ ಭಾಷೆ ಒಡಿಯಾ. ಅವರು ಇಂದು ಸಂಸತ್ತನ್ನು ತಮ್ಮ ಭಾಷಣದ ಮೂಲಕ ಅದ್ಭುತ ರೀತಿಯಲ್ಲಿ ಪ್ರೇರೇಪಿಸಿ ಭಾಷಣ ಮಾಡಿದರು. ಆದರೆ ಕಾಂಗ್ರೆಸ್ ರಾಜಮನೆತನ ಅವರನ್ನು ಅವಮಾನಿಸಲು ಪ್ರಾರಂಭಿಸಿದೆ” ಎಂದು ದೆಹಲಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಆಮ್ ಆದ್ಮಿ ಪಕ್ಷವನ್ನು ಓಡಿಸಿ; ದ್ವಾರಕಾದಲ್ಲಿ ನಡೆದ ವಿಕಾಸ್ ದೆಹಲಿ ಸಂಕಲ್ಪ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ


“ಕಾಂಗ್ರೆಸ್ ನಾಯಕರೊಬ್ಬರು ಬುಡಕಟ್ಟು ಸಮುದಾಯದ ಹೆಣ್ಣುಮಗಳು ನೀರಸ ಭಾಷಣ ಮಾಡಿದ್ದಾರೆ ಎಂದು ಹೇಳಿದರು. ಮತ್ತೊಬ್ಬ ಸದಸ್ಯರು ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರಪತಿಯನ್ನು ಬಡ ವ್ಯಕ್ತಿ ಎಂದು ಟೀಕಿಸಿದರು. ಇದು ದೇಶದ 10 ಕೋಟಿ ಬುಡಕಟ್ಟು ಸಹೋದರ, ಸಹೋದರಿಯರಿಗೆ ಮಾಡಿದ ಅವಮಾನವಾಗಿದೆ” ಎಂದು ಮೋದಿ ಹೇಳಿದರು.


ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ದ್ವಾರಕಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕಾಂಗ್ರೆಸ್ ‘ಶಾಹಿ ಪರಿವಾರ’ದ ದುರಹಂಕಾರವನ್ನು ನೋಡಿ. ಅವರು ಬುಡಕಟ್ಟು ಹಿನ್ನೆಲೆಯಿಂದ ಬಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಘನತೆಗೆ ಧಕ್ಕೆ ತಂದಿದೆ; ದ್ರೌಪದಿ ಮುರ್ಮು ಕುರಿತ ಸೋನಿಯಾ ಗಾಂಧಿ ಟೀಕೆಗೆ ರಾಷ್ಟ್ರಪತಿ ಭವನ ಆಕ್ರೋಶ


ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಬಡ ಮಹಿಳೆ’ ಎಂಬ ಸೋನಿಯಾ ಗಾಂಧಿಯವರ ಅವಹೇಳನಕಾರಿ ಹೇಳಿಕೆ ತೀವ್ರ ಅಗೌರವದಿಂದ ಕೂಡಿದೆ. ಒಂದೆಡೆ, ಕಾಂಗ್ರೆಸ್ ಪ್ರತಿಯೊಂದು ಸಂದರ್ಭದಲ್ಲೂ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸುತ್ತಿದೆ. ಮತ್ತೊಂದೆಡೆ, ಅತ್ಯುನ್ನತ ಸಾಂವಿಧಾನಿಕ ಅಧಿಕಾರವಾದ ರಾಷ್ಟ್ರಪತಿ ಹುದ್ದೆಗೆ ಅಗೌರವ ತೋರಿಸುತ್ತದೆ. ಇದು ಬುಡಕಟ್ಟು ಸಮುದಾಯಗಳ ಬಗ್ಗೆ ಕಾಂಗ್ರೆಸ್‌ನ ಕೀಳು ಮನೋಭಾವವನ್ನು ತೋರಿಸುತ್ತದೆ. ಈ ಬಗ್ಗೆ ಕಾಂಗ್ರೆಸ್ ಗೌರವಾನ್ವಿತ ರಾಷ್ಟ್ರಪತಿಗಳ ಬಳಿ ತಕ್ಷಣ ಕ್ಷಮೆಯಾಚಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ