ಇಡೀ ಭಾರತ ಆಗಸ್ಟ್ 15, 2022 ರಂದು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವಾಗಿ 75 ವರ್ಷ ಕಳೆದಿದೆ. ಇದರ ಗೌರವಾರ್ಥವಾಗಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು(Azadi Ka Amrit Mahotsav) ಆಯೋಜಿಸಿದ್ದು ಈ ಬಾರಿ ಹರ್ ಘರ್ ತಿರಂಗ(Har Ghar Tiranga) ಅಭಿಯಾನವನ್ನು ಆರಂಭಿಸಲಾಗಿದೆ. ಬನ್ನಿ ರಾಷ್ಟ್ರ ಧ್ವಜದ(National Flag) ಬಗೆಗಿನ ಕೆಲ ಆಸಕ್ತಿಕರ ಸಂಗತಿಯನ್ನು ತಿಳಿಯಿರಿ. ರಾಷ್ಟ್ರ ಧ್ವಜವನ್ನು ಕೇವಲ ಸ್ವತಂತ್ರ ದಿನ ಮತ್ತು ಗಣರಾಜ್ಯೋತ್ಸವದಂದು ಮಾತ್ರ ಹೊರತೆಗೆದು ಗೌರವದಿಂದ ಧ್ವಜಾರೋಹಣ ಮಾಡಲಾಗುತ್ತೆ. ರಾಷ್ಟ್ರ ಧ್ವಜ ರಾಷ್ಟ್ರದ ಗೌರವ ಮತ್ತು ಭಾರತೀಯರ ರಾಷ್ಟ್ರೀಯತೆ ಬಿಂಬಿಸುವ ಲಾಂಛನವಾಗಿದೆ.
ದೇಶದ ಪ್ರಮುಖ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಬಳಸಲಾಗುತ್ತೆ. ಆದರೆ ಈ ಬಾರಿ ಮನೆ ಮನೆಗಳಲ್ಲಿ ಧ್ವಜಾರೋಹಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ರಾಷ್ಟ್ರ ಧ್ವಜ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲೇ ನಿರ್ಮಾಣವಾಗುತ್ತದೆ ಎಂಬುವುದೇ ನಮಗೊಂದು ಹೆಮ್ಮೆಯ ವಿಷಯ.
ಪ್ರತಿಯೊಬ್ಬರೂ ತಿಳಿಯಲೇಬೇಕಾದ ಅಂಶಗಳು
ಅಂಗೀಕಾರ: ಧ್ವಜವನ್ನು ಕೆಲವು ಮಾರ್ಪಾಡುಗಳ ಬಳಿಕ ಭಾರತದ ಸಂವಿಧಾನದ ಪ್ರಮುಖ ಸಭೆಯೊಂದರಲ್ಲಿ 22 ನೇ ಜುಲೈ 1947 ರಂದು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಅಂದರೆ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುನ್ನ ನಮ್ಮ ನಾಯಕರು ವಿಶ್ವಕ್ಕೆ ರಾಷ್ಟ್ರಧ್ವಜ ಹೇಗಿರಲಿದೆ ಎಂದು ಸ್ಪಷ್ಟಪಡಿಸಿದ್ದರು.
ರಚನೆ: ಧ್ವಜವನ್ನು ಪಿಂಗಾಳಿ ವೆಂಕಯ್ಯ ಎಂಬುವವರು ರಚಿಸಿದ್ದಾರೆ. ಇವರು ಓರ್ವ ಕೃಷಿಕರಾಗಿದ್ದು ಸ್ವತಂತ್ರ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
ತಯಾರಿಕಾ ನಿರ್ಬಂಧ: ಧ್ವಜವನ್ನು ನಮಗೆ ಇಷ್ಟವಾಗುವಂತೆ, ಯಾವುದೋ ಬಟ್ಟೆಯಲ್ಲಿ ತಯಾರಿಸುವಂತಿಲ್ಲ. ಬದಲಿಗೆ, ಕಾನೂನು ಸ್ಪಷ್ಟಪಡಿಸಿದಂತೆ ಇದನ್ನು ಖಾದಿ ಬಟ್ಟೆಯಿಂದಲೇ ತಯಾರಿಸ ಬೇಕು. ಇದರ ಬಟ್ಟೆಯನ್ನು ಚರಕ ಬಳಸಿ ತಯಾರಿಸಿದ ಹತ್ತಿಯ ನೂಲುಗಳನ್ನು ನೇಯ್ದ ಬಟ್ಟೆಯನ್ನೇ ಬಳಸಬೇಕಾಗುತ್ತದೆ. ಈ ನೂಲುಗಳನ್ನು ಮಹಾತ್ಮಾಗಾಂಧಿಯವರು ಚರಕದಿಂದ ತಯಾರಿಸುತ್ತಿದ್ದ ರೀತಿಯಲ್ಲಿಯೇ ತಯಾರಿಸಲಾಗುತ್ತದೆ. ಈ ಧ್ವಜವನ್ನು ತಯಾರಿಸಲು ಒಂದು ಸಂಸ್ಥೆಗೆ ಮಾತ್ರವೇ ಅಧಿಕಾರ ನೀಡಲಾಗಿದೆ. ಖಾದಿ ಅಭಿವೃದ್ದಿ ಮತ್ತು ಗ್ರಾಮೋದ್ಯೋಗ ಆಯೋಗ ಸಂಸ್ಥೆ ಈ ಅಧಿಕೃತ ಸಂಸ್ಥೆಯಾಗಿದ್ದು, ಸ್ಥಳೀಯವಾಗಿ ಧ್ವಜ ತಯಾರಿಸುವ ಅನುಮತಿಯನ್ನು ಇತರ ಸಂಸ್ಥೆಗಳಿಗೆ ನೀಡುವ ಅಧಿಕಾರವನ್ನು ಈ ಸಂಸ್ಥೆ ಹೊಂದಿದೆ.
ತ್ರಿವರ್ಣ: ನಮ್ಮ ರಾಷ್ಟ್ರಧ್ವಜ ’ತಿರಂಗಾ’ ಎಂಬ ಹೆಸರಿನಿಂದಲೇ ಹೆಚ್ಚು ಜನಪ್ರಿಯ. ಹಿಂದಿ ಭಾಷೆಯಲ್ಲಿ ‘ತಿರಂಗ’ ಎಂದರೆ ಮೂರು ಬಣ್ಣಗಳು ಎಂದರ್ಧ. ವಾಸ್ತವದಲ್ಲಿ ರಾಷ್ಟ್ರಧ್ವಜದಲ್ಲಿ ಒಟ್ಟು ನಾಲ್ಕು ಬಣ್ಣಗಳಿವೆ. ಕೇಸರಿ, ಬಿಳಿ, ಹಸಿರು ಮತ್ತು ನಡುವಣ ಅಶೋಕ ಚಕ್ರ ಗಾಢ ನೀಲಿ ಬಣ್ಣದ್ದಾಗಿದೆ. ಆಂಗ್ಲ ಭಾಷೆಯ ಟ್ರೈಕಲರ್ ಅಥವಾ ಹಿಂದಿಯ ತಿರಂಗ ಎರಡೂ ಪದಗಳನ್ನು ಯಾವಾಗ ಉಲ್ಲೇಖಿಸಿದರೂ ಇದು ರಾಷ್ಟ್ರಧ್ವಜವೆಂದೇ ಪರಿಗಣಿಸಬೇಕು.
ರಾಷ್ಟ್ರಧ್ವಜದ ಮೂರು ಬಣ್ಣಗಳು ಯಾವುದರಾ ಪ್ರತೀಕ?
ಈ ಮೂರೂ ಬಣ್ಣಗಳು ಭಿನ್ನ ವಿಷಯಗಳನ್ನು ಪ್ರತಿನಿಧಿಸುತ್ತವೆ.
ಕೇಸರಿ ಬಣ್ಣ: ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ.
ಬಿಳಿ ಬಣ್ಣ: ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ.
ಹಸಿರು ಬಣ್ಣ: ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ.
ಬಾವುಟದ ಮಧ್ಯದಲ್ಲಿ ಕಡು ನೀಲಿ ಬಣ್ಣದ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ಇದು ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುತ್ತದೆ.
ಧ್ವಜದ ರಚನೆ
ರಾಷ್ಟ್ರಧ್ವಜಕ್ಕೂ ಅದರದೇ ಆದ ರಚನಾ ನಿಯಮಾವಳಿ ಇದೆ. ಅದರ ಪ್ರಕಾರ ಉದ್ದ ಮತ್ತು ಅಗಲ 2:3 ಅನುಪಾನದಲ್ಲಿಯೇ ಇರುವುದು ಕಡ್ಡಾಯ. ಅಂದರೆ ಅಗಲಕ್ಕಿಂತಲೂ ಉದ್ದ ಒಂದೂವರೆ ಪಟ್ಟು ಇರಬೇಕು. ಮೂರು ಬಣ್ಣಗಳು ಸಮಾನವಾದ ಅಗಲ ಮತ್ತು ಉದ್ದವನ್ನು ಹೊಂದಿರಬೇಕು. ಅಲ್ಲದೇ ಅಶೋಕ ಚಕ್ರವನ್ನು ಧ್ವಜದ ಎರಡೂ ಬದಿಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಿರಬೇಕು.
ಸಾಮಾನ್ಯವಾಗಿ ರಾಷ್ಟ್ರಧ್ವಜವನ್ನು ಒಂಭತ್ತು ಗಾತ್ರಗಳಲ್ಲಿ ತಯಾರಿಸಲಾಗುತ್ತದೆ. ಅತಿ ಚಿಕ್ಕದ್ದು 6:4 ಇಂಚು ಗಾತ್ರ ಹೊಂದಿದ್ದರೆ ಪ್ರಮುಖ ಕಟ್ಟಡಗಳ ಮೇಲೆ ರಾಷ್ಟ್ರವನ್ನು ಪ್ರತಿನಿಧಿಸುವ ದೊಡ್ಡ ಧ್ವಜಗಳು 21:14 ಅಡಿಯಷ್ಟು ವಿಶಾಲವಾಗಿರುತ್ತವೆ. ದೆಹಲಿಯ ಕೆಂಪುಕೋಟೆ, ರಾಷ್ಟ್ರಪತಿ ಭವನ ಮೊದಲಾದ ಕಟ್ಟಡಗಳ ಮೇಲೆ ಮಧ್ಯಮ ಗಾತ್ರದ, ಅಂದರೆ 12:8 ಅಡಿಯ ಅಳತೆಯ ಧ್ವಜವನ್ನು ಹಾರಿಸಲಾಗುತ್ತದೆ.
ಅಶೋಕ ಚಕ್ರದ ಗಾತ್ರ
ಅಶೋಕ ಚಕ್ರದ ಗಾತ್ರ ಇಷ್ಟೇ ಇರಬೇಕು ಎಂಬ ಸ್ಪಷ್ಟ ನಿಯಮಾವಳಿಯೇನೂ ಇಲ್ಲ. ಆದರೆ ಅದು ಗಾಢನೀಲಿ ಬಣ್ಣದ್ದಾಗಿರಬೇಕು. ಇದರಲ್ಲಿರುವ ಇಪ್ಪತ್ತನಾಲ್ಕು ಗೆರೆಗಳು ಸಮಾನ ಅಂತರ ಹೊಂದಿರಬೇಕು. ಹಾಗೂ ಧ್ವಜದ ನಡುವೆ, ಬಿಳಿಪಟ್ಟಿಯ ಮೇಲೆ ಮಾತ್ರವೇ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಿರಬೇಕು. ಇದರ ಅಂಚು ಬಿಳಿ ಪಟ್ಟಿಯನ್ನು ದಾಟುವಂತಿಲ್ಲ.
ರಾಷ್ಟ್ರ ಧ್ವಜವನ್ನು ಧರ್ಮ ಮತ್ತು ಕಾನೂನಿನ ಪ್ರತಿನಿಧಿಯ ರೂಪದಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಅಶೋಕ ಚಕ್ರವನ್ನು ಚಕ್ರವರ್ತಿ ಅಶೋಕನ ಲಾಂಛನದಲ್ಲಿರುವಂತೆಯೇ ವಿನ್ಯಾಸಗೊಳಿಸಲಾಗಿದೆ. ಸ್ವತಂತ್ರ ಭಾರತದ ಎರಡನೆಯ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ರವರು ತಿಳಿಸಿದಂತೆ ಈ ಲಾಂಛನವನ್ನು ಧರ್ಮ ಮತ್ತು ಕಾನೂನಿನ ಪ್ರತಿನಿಧಿಯ ರೂಪದಲ್ಲಿ ಅಳವಡಿಸಿಕೊಳ್ಳಲಾಗಿದೆ.
ರಾಷ್ಟ್ರಧ್ವಜ ಹಾರಿಸುವಾಗ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು
ಡಿಸೆಂಬರ್ 30 ರಂದು ಕೇಂದ್ರ ಸರ್ಕಾರ ಭಾರತದ ಧ್ವಜ ಸಂಹಿತೆ, 2002 ಅನ್ನು ತಿದ್ದುಪಡಿ ಮಾಡಿತು. ಇದು ಯಂತ್ರ-ನಿರ್ಮಿತ ಮತ್ತು ಪಾಲಿಸ್ಟರ್ ರಾಷ್ಟ್ರೀಯ ಧ್ವಜಗಳ ತಯಾರಿಕೆ ಮತ್ತು ಬಳಕೆಯನ್ನು ಅನುಮತಿಸುತ್ತದೆ. ಸಂಹಿತೆಯ ಅಡಿಯಲ್ಲಿ ಇವುಗಳಿಗೆ ಈ ಹಿಂದೆ ಅವಕಾಶವಿರಲಿಲ್ಲ. ತಿದ್ದುಪಡಿ ಮಾಡಲಾದ ಧ್ವಜ ಸಂಹಿತೆಯ ಪ್ರಕಾರ, ಕೈಯಿಂದ ನೂಲುವ, ಕೈಯಿಂದ ನೇಯ್ದ ಅಥವಾ ಯಂತ್ರದಿಂದ ಮಾಡಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಂಟಿಂಗ್‌ನಿಂದ ಮಾಡಿದ ರಾಷ್ಟ್ರಧ್ವಜಗಳನ್ನು ಸಹ ಬಳಸಬಹುದು. ಜುಲೈ 20, 2022 ರಂದು ತಂದ ಮತ್ತೊಂದು ತಿದ್ದುಪಡಿಯಲ್ಲಿ ರಾಷ್ಟ್ರೀಯ ಧ್ವಜವನ್ನು ತೆರೆದ ಅಥವಾ ಸಾರ್ವಜನಿಕ ಸದಸ್ಯರ ಮನೆಯಲ್ಲಿ ಅದನ್ನು ಹಗಲು, ರಾತ್ರಿ ಹಾರಿಸಲು ಕೇಂದ್ರವು ಅನುಮತಿಸಿದೆ. ಹಿಂದಿನ ನಿಯಮಗಳ ಪ್ರಕಾರ, ತ್ರಿವರ್ಣ ಧ್ವಜವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರ ಹಾರಿಸಬಹುದಾಗಿತ್ತು.
ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚುವುದಾಗಲಿ, ಕೆಳಗೆ ಬೀಳಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಒಳ ಪಡಿಸಲಾಗುವುದು. ಅಪ್ಪಿತಪ್ಪಿಯೂ ಹಸಿರು ಬಣ್ಣ ಮೇಲೆ ಬರದಂತೆ ಎಚ್ಚರ ವಹಿಸಬೇಕು. ಬೆಂಕಿ, ಮಳೆ, ಬಿರುಗಾಳಿ ಮೊದಲಾದ ಸಂದರ್ಭದಲ್ಲಿ ಧ್ವಜ ಹಾಳಾಗುವ ಸಂದರ್ಭವಿದ್ದರೆ ತಕ್ಷಣ ಇಳಿಸಬೇಕು ಹಾಗೂ ಧ್ವಜ ಹಾಳಾಗುವುದನ್ನು ತಪ್ಪಿಸಬೇಕು.
Published On - 6:27 pm, Sun, 7 August 22