ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ; ಕೆಸಿಆರ್, ನಿತೀಶ್ ಕುಮಾರ್ ಗೈರು

ಕೆಸಿಆರ್ ಈ ಹಿಂದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ತಮ್ಮ ನಿರ್ಧಾರವು ತೆಲಂಗಾಣ ಸೇರಿದಂತೆ ರಾಜ್ಯಗಳ ವಿರುದ್ಧ ಕೇಂದ್ರದ ಘೋರ ತಾರತಮ್ಯದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಸಭೆ; ಕೆಸಿಆರ್, ನಿತೀಶ್ ಕುಮಾರ್ ಗೈರು
ನೀತಿ ಆಯೋಗ ಸಭೆ
TV9kannada Web Team

| Edited By: Rashmi Kallakatta

Aug 07, 2022 | 5:30 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯುತ್ತಿರುವ ಸರ್ಕಾರದ ಚಿಂತಕರ ಚಾವಡಿ ನೀತಿ ಆಯೋಗದ (NITI Aayog ) ಏಳನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಈ ಸಭೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರು ಹಾಜರಾಗಿದ್ದಾರೆ. ಕೆಸಿಆರ್ ಈ ಹಿಂದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ತಮ್ಮ ನಿರ್ಧಾರವು ತೆಲಂಗಾಣ ಸೇರಿದಂತೆ ರಾಜ್ಯಗಳ ವಿರುದ್ಧ ಕೇಂದ್ರದ ಘೋರ ತಾರತಮ್ಯದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿದೆ ಎಂದಿದ್ದಾರೆ. ಕೊವಿಡ್​​​ನಿಂದ ಚೇತರಿಸಿಕೊಂಡಿರುವ ನಿತೀಶ್ ಕುಮಾರ್, ಒಂದು ತಿಂಗಳಲ್ಲಿ ಎರಡನೇ ಬಾರಿ ಪ್ರಧಾನಿ ನೇತೃತ್ವದ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.ಈ ಸಭೆ ಜುಲೈ 2019 ರಿಂದ ಆಡಳಿತ ಮಂಡಳಿಯ ಮೊದಲ ವೈಯಕ್ತಿಕ ಸಭೆಯಾಗಿದೆ. ನೀತಿ ಆಯೋಗದ ಉನ್ನತ ಸಂಸ್ಥೆಯಾದ ದಿ ಕೌನ್ಸಿಲ್​​ನಲ್ಲಿ ಎಲ್ಲಾ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಹಲವಾರು ಕೇಂದ್ರ ಮಂತ್ರಿಗಳನ್ನೊಳಗೊಂಡಿದ್ದು ಪ್ರಧಾನಿ ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ.

ನೀತಿ ಆಯೋ ಸಭೆಯ ಕಾರ್ಯಸೂಚಿಯು ಬೆಳೆ ವೈವಿಧ್ಯೀಕರಣ ಮತ್ತು ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳು ಮತ್ತು ಕೃಷಿ ಸಮುದಾಯಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು, ಶಾಲಾ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮತ್ತು ನಗರ ಆಡಳಿತ ಮೊದಲಾದವುಗಳನ್ನು ಒಳಗೊಂಡಿದೆ. ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಎಸ್ ಜೈಶಂಕರ್ ಮತ್ತು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ, ಮಧ್ಯಪ್ರದೇಶ ಮತ್ತು ಅಸ್ಸಾಂ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಸಭೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರು ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು. ರಾಜ್ಯಗಳ ಸಂಪನ್ಮೂಲಗಳ ಮೇಲಿನ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಒತ್ತಾಯಿಸಿದರು ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರದ ವಿಷಯದ ಕುರಿತು ಮಾತನಾಡಿದ ಬಾಘೆಲ್, ಹೊಸ ತೆರಿಗೆ ಕಾರ್ಯವಿಧಾನದಿಂದಾಗಿ ರಾಜ್ಯವು ಆದಾಯದ ಕೊರತೆಯನ್ನು ಎದುರಿಸುತ್ತಿದೆ ಎಂದಿದ್ದಾರೆ. ಜೂನ್ 2022 ರ ನಂತರ ರಾಜ್ಯಕ್ಕೆ ಪಾವತಿಸಿದ ಪರಿಹಾರಕ್ಕಾಗಿ ಐದು ವರ್ಷಗಳ ವಿಸ್ತರಣೆಯನ್ನು ಅವರು ಕೋರಿದ್ದಾರೆ. ಕಲ್ಲಿದ್ದಲು ಸೇರಿದಂತೆ ಪ್ರಮುಖ ಖನಿಜಗಳ ರಾಯಲ್ಟಿ ದರವನ್ನು ಪರಿಷ್ಕರಿಸಲು ಬಾಘೆಲ್ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಹೇಳಿಕೆಯ ಪ್ರಕಾರ, ನವೆಂಬರ್ 2004 ರಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (NPS) ರಾಜ್ಯ ಸರ್ಕಾರವು ಠೇವಣಿ ಇರಿಸಿರುವ ಹಣವನ್ನು ಸರ್ಕಾರಿ ನೌಕರರ ಹಿತಾಸಕ್ತಿಗಾಗಿ ಮರುಪಾವತಿಸಲು ಬಾಘೆಲ್ ಕೋರಿದರು. ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಹಾವಳಿ ನಿರ್ಮೂಲನೆಗಾಗಿ ನಿಯೋಜಿಸಲಾದ ಕೇಂದ್ರ ಭದ್ರತಾ ಪಡೆಗಳಿಗೆ ಖರ್ಚು ಮಾಡಿದ 12,000 ಕೋಟಿ ರೂ.ಗಳನ್ನು ರಾಜ್ಯಕ್ಕೆ ಮರುಪಾವತಿಸುವಂತೆ ಕೇಂದ್ರವನ್ನು ಕೋರಲಾಗಿದೆ ಎಂದು ಪ್ರಕಟಣೆ ಹೇಳಿದೆ.

ಇದಲ್ಲದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA) ಯೋಜನೆಯನ್ನು ನಗರಗಳ ಸಮೀಪವಿರುವ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 20,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲಿ ವಿಸ್ತರಿಸಲು ಬಾಘೆಲ್ ವಿನಂತಿಸಿದ್ದಾರೆ. ಏತನ್ಮಧ್ಯೆ, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸಭೆಯಲ್ಲಿ ಮಾತನಾಡಿ, ರಾಜ್ಯವು ಪ್ರತಿ ವರ್ಷ ಪ್ರಾಕೃತಿಕ ವಿಕೋಪಗಳಿಂದ ನಷ್ಟ ಅನುಭವಿಸುತ್ತಿದೆ. ಒಡಿಶಾವನ್ನು ವಿಶೇಷ ಗಮನ ರಾಜ್ಯವನ್ನಾಗಿ ಮಾಡಲು ಮತ್ತು ವಿಪತ್ತು ನಿರ್ವಹಣೆಗೆ ಹಣವನ್ನು ನಿಯೋಜಿಸಲು ನಾನು ಕೇಂದ್ರ ಸರ್ಕಾರವನ್ನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada