ವಿಜಯಪುರ: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಗಂಡು ಮಕ್ಕಳು ಸಾವು
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ದುರಂತ ಘಟನೆ ನಡೆದಿದೆ. ತಾಯಿ ಮತ್ತು ಅವರ ಇಬ್ಬರು ಗಂಡು ಮಕ್ಕಳು ಕೃಷಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇನ್ನೊಂದು ಘಟನೆಯಲ್ಲಿ, ವಿಜಯಪುರ ನಗರದ ಬೇಗಂ ತಾಲಾಬ್ ಕೆರೆಯಲ್ಲಿ ಯುವಕನೊಬ್ಬ ನೀರುಪಾಲು ಆಗಿದ್ದಾನೆ. ಆಯಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ, ಜನವರಿ 01: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮತ್ತು ಗಂಡು ಮಕ್ಕಳಿಬ್ಬರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿ ನಡೆದಿದೆ. ಗೀತಾ ಬಡಗಿ(28), ಮಕ್ಕಳಾದ ಶ್ರವಣ್(6), ಶರಣ್(4) ನೀರುಪಾಲಾದವರು. ಮೃತ ಗೀತಾ ತಂದೆ ರಾಮಪ್ಪ ನಾಯ್ಕೋಡಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ.
ಯಾಳವಾರ ಗ್ರಾಮದ ನಿವಾಸಿ ಶ್ರೀಶೈಲ ಜೊತೆಗೆ ಮದುವೆಯಾಗಿದ್ದ ಗೀತಾ, ಗಂಡನ ಜೊತೆ ಜಗಳವಾಡಿ ತವರು ಮನೆಗೆ ಬಂದಿದ್ದರು. ಈ ವೇಳೆ ಮಕ್ಕಳ ಜತೆ ಕೃಷಿ ಹೊಂಡದ ಬಳಿ ಹೋಗಿದ್ದಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಸದ್ಯ ತಾಯಿ ಮತ್ತು ಗಂಡು ಮಕ್ಕಳಿಬ್ಬರ ಶವಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೆರೆಯಲ್ಲಿ ಈಜಾಡಲು ಹೋಗಿದ್ದ ಓರ್ವ ಯುವಕ ನೀರುಪಾಲು
ವಿಜಯಪುರ ನಗರದ ಹೊರ ಭಾಗದಲ್ಲಿರುವ ಬೇಗಂ ತಾಲಾಬ್ ಕೆರೆಯಲ್ಲಿ ಈಜಾಡಲು ಹೋಗಿದ್ದ ಓರ್ವ ಯುವಕ ನೀರಲ್ಲಿ ಮುಳಗಿ ಮೃತಪಟ್ಟಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿರುವ ಕಾರಣ ಸಾರ್ವತ್ರಿಕ ರಜೆ ಘೋಷಣೆ ಹಿನ್ನಲೆ ನಗರದ ಅನಿರುದ್ದ ಸಾಮ್ರಾಣಿ ಹಾಗೂ ಇತರರು ಬೇಗಂ ತಾಲಾಬ್ ಕೆರೆಯ ಬಳಿ ತೆರಳಿದ್ದರು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಫಿಟ್ಸ್, ಸರಣಿ ಅಪಘಾತ: 40ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್ ಮಿಸ್
ಆಗ ಅನಿರುದ್ದ ಸಾಮ್ರಾಣಿ (20) ಈಜಾಡಲು ಕೆರೆಯಲ್ಲಿ ಇಳಿದಿದ್ದಾನೆ. ಆಗ ಜೊತೆಗಿದ್ದ ಅನಿರುದ್ದ ಸಹೋದರ ಅನಿಕೇತ ಸಾಮ್ರಾಣಿ ಹಾಗೂ ಇತರರು ನೀರಿಗೆ ಇಳಿಯಬೇಡಾ ಎಂದು ಹೇಳಿದರೂ ಅನಿರುದ್ದ ಮಾತ್ರ ನೀರಿಗೆ ಇಳಿದಿದ್ದಾನೆ. ಕೆಲ ಕಾಲ ಈಜಾಡಿದ ಬಳಿಕ ನೀರಲ್ಲಿ ಮುಳುಗಿದ್ದಾನೆ. ದಡದಲ್ಲಿದ್ದವರು ಎಷ್ಟೇ ಕೂಗಿ ಕರೆದರೂ ಅನಿರುದ್ದ ಮಾತ್ರ ನೀರಿನಿಂದ ಮೇಲೆ ಏಳಲೇ ಇಲ್ಲವಂತೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದಿ ಅಗ್ನಿಶಾಮಕ ದಳ ಸಿಬ್ಬಂದಿ ಅನಿರುದ್ದ ಶವಕ್ಕಾಗಿ ಶೋಧ ನಡೆಸಿದ್ದರು. ಸ್ಥಳದಲ್ಲಿ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.