ವಿಜಯಪುರ: ಚುಡಾಯಿಸಿದ್ದಕ್ಕೆ ಮನನೊಂದ ಬಾಲಕಿ ನೇಣಿಗೆ ಶರಣು, 1 ತಿಂಗಳ ಅಂತರದಲ್ಲಿ 2ನೇ ಪೋಕ್ಸೋ ಕೇಸ್
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಯುವಕನ ಕಿರುಕುಳಕ್ಕೆ ನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ.ಒಂದು ತಿಂಗಳ ಅಂತರದಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎರಡನೇ ಪೋಕ್ಸೋ ಕೇಸ್ ದಾಖಲಾಗಿದೆ.
ವಿಜಯಪುರ, ಡಿಸೆಂಬರ್ 03: ಯುವಕ ಚುಡಾಯಿಸಿದ್ದಕ್ಕೆ ಮನನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುದ್ದೇಬಿಹಾಳ (Muddebihal) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಸಂಗಮೇಶ ಜುಂಜವಾರ ಎಂಬ ಯುವಕ ಅಪ್ರಾಪ್ತೆಯ ಹಿಂದೆ ಬಿದ್ದಿದ್ದನು. ಕಾಲೇಜಿಗೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಚುಡಾಯಿಸುತ್ತಿದ್ದನು. ಪ್ರೀತಿ ಪ್ರೇಮದ ಹೆಸರಿನಲ್ಲಿ ಬಾಲಕಿಗೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.
ಅಲ್ಲದೇ, ಇತ್ತೀಚೆಗೆ ಬಾಲಕಿ ಕಾಲೇಜಿಗೆ ಹೋಗುವಾಗ ಮೈ-ಕೈ ಮುಟ್ಟಿ ಮಾತನಾಡಿಸಿದ್ದನು. ನಿನ್ನ ಪ್ರೀತಿಸುವೆ, ನೀನೂ ನನ್ನ ಪ್ರೀತಿಸು ಎಂದು ಬಲವಂತ ಮಾಡಿದ್ದನು. ಇದನ್ನು ಪ್ರಶ್ನೆ ಮಾಡಿದ್ದ ಬಾಲಕಿಯ ಸಹೋದರನಿಗೆ ಸಂಗಮೇಶ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದನು ಎಂಬ ಆರೋಪವಿದೆ. ಈ ಕುರಿತು ಬಾಲಕಿ ನವೆಂಬರ್ 27 ರಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಸಂಗಮೇಶ ಜುಂಜವಾರ, ಮೌನೇಶ ಮಾದರ, ಚಿದಾನಂದ ಕಟ್ಟಿಮನಿ ವಿರುದ್ಧ ದೂರು ನೀಡಿದ್ದಳು.
ಬಾಲಕಿ ದೂರಿನ ಆಧಾರದ ಮೇಲೆ, ಮುದ್ದೇಬಿಹಾಳ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿಗಳಾದ ಸಂಗಮೇಶ ಜುಂಜವಾರ, ಮೌನೇಶ ಮಾದರನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಯುವಕನ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್?
ಆದರೆ, ಇದೆಲ್ಲದ್ದರಿಂದ ನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಶರಣಾಗಿದ್ದಕ್ಕೆ ಬಾಲಕಿಯ ಸಮಾಜದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿ ಸಾವಿಗೆ ಸಂಗಮೇಶ ಕಿರುಕುಳವೇ ಕಾರಣವೆಂದು ಆರೋಪಿಸಿದ್ದಾರೆ.
ಬಾಲಕಿಗೆ ತಾಳಿ ಕಟ್ಟಿದ್ದ ಯುವಕ
ಇತ್ತೀಚಿಗೆ ಇದೇ ಮುದ್ದೇಬಿಹಾಳ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಗೆ ಯುವಕ ತಾಳಿ ಕಟ್ಟಿದ್ದ ಘಟನೆ ನಡೆದಿತ್ತು. ಸರ್ಕಾರಿ ವಸತಿ ಶಾಲೆಯ ಬಳಿ ಅಪ್ರಾಪ್ತ ಬಾಲಕಿಗೆ ಯುವಕನೊಬ್ಬ ತಾಳಿ ಕಟ್ಟಿದ್ದನು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಈ ಘಟನೆ ನವೆಂಬರ್ 24ರಂದು ನಡೆದಿತ್ತು.
ತಾಳಿ ಕಟ್ಟಿದ ಬಗ್ಗೆ ಅಪ್ರಾಪ್ತ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದಳು. ಮುದ್ದೇಬಿಹಾಳ ಠಾಣೆಯಲ್ಲಿ ಇಬ್ಬರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Tue, 3 December 24