ಯುವಕನ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್​?

ಬಸವನಬಾಗೇವಾಡಿ ಪಟ್ಟಣದಲ್ಲಿ ಯುವಕ ಸುನೀಲ್ ಭಜಂತ್ರಿಯ ಹತ್ಯೆಯು ಆಘಾತಕಾರಿ ತಿರುವು ಪಡೆದಿದೆ. ಕೊಲೆಯ ಸಂದರ್ಭದ ವಿಡಿಯೋಗಳು ಬಹಿರಂಗಗೊಂಡಿದ್ದು, ಸಂತೋಷ ಉಕ್ಕಲಿ ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತನಿಖೆ ಚುರುಕಾಗಿದೆ.

ಯುವಕನ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್​?
ಯುವಕನ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹತ್ಯೆಗೆ ಕಾರಣವಾಯ್ತಾ ವಿಧವೆಯೊಂದಿಗಿನ ಲವ್​?
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 11, 2024 | 4:54 PM

ವಿಜಯಪುರ, ನವೆಂಬರ್​ 11: ನಿನ್ನೆ ಬಸವನಬಾಗೇವಾಡಿ ಪಟ್ಟಣದ ಹೊರ ಭಾಗದಲ್ಲಿ ಯುವಕನೋರ್ವನ ಶವ ಪತ್ತೆಯಾಗಿತ್ತು (death). ಶವದ ಮೇಲೆ ಯಾವುದೇ ಗಾಯದ ಗುರುತೂ ಸಹ ಆಗಿರಲಿಲ್ಲ. ಸ್ಥಳಕ್ಕೆ ಆಗಮಿಸಿದ ಬಸವನಬಾಗೇವಾಡಿ ಪೊಲೀಸರು ಪರಿಶೀಲನೆ ನಡೆಸಿ ಸುನೀಲ್ ಭಜಂತ್ರಿ ಎಂದು ಮೃತ ಯುವಕನ ಗುರುತು ಪತ್ತೆ ಹಚ್ಚಿದ್ದರು. ಸದ್ಯ ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿರೋವಾಗಲೇ ಆಘಾತಕಾರಿ ವಿಡಿಯೋಗಳು ಪತ್ತೆಯಾಗಿದ್ದು, ಬಿಗ್ ಟ್ವಿಸ್ಟ್​ ಸಿಕ್ಕಿದೆ.

ನನ್ನ ಮಗನನ್ನು ಕೊಲೆ ಮಾಡಿದ್ದಾರೆ: ಪೋಷಕರು ಆರೋಪ

ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಹೊರ ಭಾಗದ ಜಮೀನನಲ್ಲಿ ನಿನ್ನೆ ಯುವಕನ ಶವ ಪತ್ತೆಯಾಗಿತ್ತು. ಬಸವನಬಾಗೇವಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದರು. ಶವವಾಗಿ ಪತ್ತೆಯಾದವವನ್ನು ಪಟ್ಟಣದ ವಾಸಿ ಸುನೀಲ್ ಭಜಂತ್ರಿ (21) ಎಂದು ತಿಳಿದುಬಂದಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ಸುನೀಲ್ ಪೋಷಕರು ಕಣ್ಣೀರು ಹರಿಸಿದ್ದರು. ನನ್ನ ಮಗನನ್ನು ಕೊಲೆ ಮಾಡಿದ್ಧಾರೆಂದು ಆರೋಪ ಮಾಡಿದ್ದರು.

ನನ್ನ ಮಗನ ಕೊಲೆಗೆ ಸಂತೋಷ ಉಕ್ಕಲಿ, ಓಗಪ್ಪ ಉರ್ಪ್ ಮುದಕಪ್ಪಾ ಒಡೆಯರ್, ಬಸವರಾಜ ಉಕ್ಕಲಿ ಹಾಗೂ ಓರ್ವ ಮಹಿಳೆ ಕಾರಣ. ಓರ್ವ ಮಹಿಳೆಯೊಂದಿಗೆ ನನ್ನ ಮಗ ಪ್ರೀತಿ-ಪ್ರೇಮ ಎಂದು ಓಡಾಡಿಕೊಂಡಿದ್ದ. ಈ ವಿಚಾರವಾಗಿ ನಾವು ಆತನಿಗೆ ಬುದ್ದಿ ಮಾತು ಹೇಳಿದ್ದೇವು. ಇದೇ ಮಹಿಳೆ ಜೊತೆಗೆ ಸಂತೋಷ ಉಕ್ಕಲಿಯ ಸಂಬಂಧವೂ ಇತ್ತು. ನನ್ನ ಮಗನ ಸಾವಿನ ಹಿಂದೆ ಇದೇ ಕಾರಣವಿದೆ ಎಂದು ದೂರು ನೀಡಿದ್ದರು. ಇದರ ಮಧ್ಯೆ ಸುನೀಲ್ ಭಜಂತ್ರಿ ಕತ್ತಿಗೆ ಹಗ್ಗ ಹಾಕಿರುವ ಗುರುತನ್ನು ಪೊಲೀಸರು ಪತ್ತೆ ಮಾಡಿದ್ದರು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರೀಕ್ಷೆ ನಡೆಸಿ ತನಿಖೆ ಮಾಡಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಶಂಕರ ಮಾರೀಹಾಳ ಹಾಗೂ ಇತರೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದರು. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು. ಈ ಕುರಿತು ತನಿಖೆ ನಡೆಸಿದ್ದರು.

ವಿಡಿಯೋದಲ್ಲಿ ಕೊಲೆ ವಿಚಾರ ಬಹಿರಂಗ

ಸುನೀಲ್ ಭಜಂತ್ರಿ ಕೊಲೆಯ ವಿಚಾರವಾಗಿ ದೂರಿನ ವಿಚಾರಣೆ ಮಾಡುತ್ತಿರೋವಾಗಲೇ ಕೆಲ ವಿಡಿಯೋಗಳು ಬಹಿರಂಗವಾಗಿವೆ. ಜಮೀನಿನಲ್ಲಿ ಸುನೀಲ್ ಗೆಳೆಯರೊಂದಿಗೆ ಮದ್ಯ ಸೇವಿಸುತ್ತಾ ಕುಳಿತಿರೋದು, ಮಹಿಳೆಯೊಂದಿಗಿನ ಪ್ರೀತಿ ಪ್ರೇಮದ ಬಗ್ಗೆ ಎದುರಿಗಿದ್ದವರ ಜೊತೆಗೆ ಮಾತನಾಡಿದ್ದು ಹಾಗೂ ಸುನೀಲ್ ಭಜಂತ್ರಿ ಕತ್ತಿಗೆ ಹಗ್ಗ ಹಾಕಿ ಕತ್ತಿನ ಮೇಲೆ ಕಾಲಿಟ್ಟು ಆತನ ಉಸಿರು ಗಟ್ಟಿಸಿ ಕೊಲೆ ಮಾಡುವ ವಿಡಿಯೋ ಹಾಗೂ ಪೋಟೋಗಳು ವೈರಲ್ ಆಗಿದ್ದವು.

ಇದನ್ನೂ ಓದಿ: ಬೆಂಗಳೂರು: ನೇಪಾಳಿ ಕಳ್ಳರ ಕೈಚಳಕ, ನಗರದಲ್ಲಿ ನಡೆದಿರುವ ಕಳ್ಳತನ ಒಂದೆರಡಲ್ಲ!

ಕೊಲೆಗೂ ಮುನ್ನ ಹಾಗೂ ನಂತರ ಮೊಬೈಲ್​ನಲ್ಲಿ ಕೊಲೆಗಾರರು ಮಾಡಿಕೊಂಡಿರೋ ವಿಡಿಯೋಗಳು ವೈರಲ್ ಆಗಿದ್ದವು. ಕುಡಿದ ಮತ್ತಿನಲ್ಲಿದ್ದ ಸುನೀಲ್ ಎದುರಿಗೆ ಇದ್ದವನ ಜೊತೆಗೆ ಏನೇನೋ ಮಾತನಾಡಿದ್ದಾನೆ. ಎದುರಿಗಿದ್ದವ ಆಕೆಯನ್ನು ಲವ್ ಮಾಡುತ್ತಿದ್ದೀಯಾ ಎಂದು ಸುನೀಲ್​ಗೆ ಪ್ರಶ್ನೆ ಮಾಡಿದ್ದಾನೆ. ಆಕೆಯೊಂದಿಗೆ ಮಲಗಿದ್ದೀಯಾ ಎಂಬ ಪ್ರಶ್ನೆಗೆ ನಾನು ಮಲಗಿಲ್ಲಾ ಎಂದು ಕೊಲೆಯಾಗಿರೋ ಸುನೀಲ್ ಹೇಳಿದ್ದಾನೆ. ನಂತರ ನಾನು ಸಿನ್ಸಿಯರ್ ಆಗಿ ಲವ್ ಮಾಡುತ್ತಿದ್ದೇನೆಂದು ಸಹ ಕೊಲೆಯಾದ ಸುನೀಲ್ ಭಜಂತ್ರಿ ಮಾತನಾಡಿರೋ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಇಷ್ಟೇಯಲ್ಲಾ ನೀನು ಸಾಯಬೇಕಷ್ಟೇ ಎಂದು ಹಂತಕರು ಮಾತನಾಡಿದ್ದೂ ಸಹ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ಇಡೀ ಜಿಲ್ಲೆಯ ಜನರು ಭಯ ಬೀಳುವಂತಾಗಿದೆ.

ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಎಸ್ಪಿ ಪ್ರಸನ್ನ ದೇಸಾಯಿ ತಿನಿಖೆ ಚುರುಕು ಮಾಡಿದ್ದರು. ಸಂತೋಷ ಉಕ್ಕಲಿ, ಓಗಪ್ಪಾ ಉರ್ಫ್ ಮುದಕಪ್ಪ ಒಡೆಯರ್, ಬಸವರಾಜ ಉಕ್ಕಲಿ ಸುನೀಲ್ ಜೊತೆಗೆ ನಿನ್ನೆ ಇದ್ದರು ಎಂಬ ಮಾಹಿತಿ ಸಿಕ್ಕಿದ್ದೇ ತಡ, ಪೊಲೀಸರು ಸಂತೋಷ ಉಕ್ಕಲಿ, ಓಗಪ್ಪಾ ಉರ್ಫ್ ಮುದಕಪ್ಪ ಒಡೆಯರ್ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವಿಧವೆ ಮಹಿಳೆಯ ಜೊತೆಗೆ ಕೊಲೆಯಾದ ಸುನೀಲ್ ಭಜಂತ್ರಿ ಹಾಗೂ ಸಂತೋಷ ಉಕ್ಕಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಇವರಿಬ್ಬರೂ ಮೊದಲಿನಿಂದಲೂ ಸ್ನೇಹಿತರು ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಇವರು ವಿಧವೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಇದೇ ವಿಚಾರದಲ್ಲಿ ಇಬ್ಬರ ಮಧ್ಯೆ ದ್ವೇಷ ಹುಟ್ಟುವಂತೆ ಮಾಡಿದೆ.

ಈ ಕಾರಣ ಮೊದಲೇ ಪ್ಲ್ಯಾನ್ ಮಾಡಿದಂತೆ ಸಂತೋಷ ಉಕ್ಕಲಿ, ಓಗಪ್ಪಾ ಉರ್ಫ್ ಮುದಕಪ್ಪ ಒಡೆಯರ್, ಬಸವರಾಜ ಉಕ್ಕಲಿ ಎಂಬ ಮೂವರು ಸೇರಿ ಸುನೀಲ್ ನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದು, ಖಾಕಿ ಪಡೆಗೆ ಗೊತ್ತಾಗುತ್ತದೆ. ನಿನ್ನೆ ಇವರೆಲ್ಲಾ ಪಟ್ಟಣದ ವಿಮೋಚನಾ ಬಾರ್​ನಲ್ಲಿ ಕುಡಿಯೋಕೆ ಸುನೀಲ್​ನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಲ್ಲರೂ ಕಂಠಪೂರ್ತಿ ಕುಡಿದಿದ್ದಾರೆ. ಬಳಿಕ ಸುನೀಲ್ ಭಜಂತ್ರಿ ಬೈಕ್ ನಲ್ಲಿ ಆತನನ್ನು ಕರೆದುಕೊಂಡು ಮೇವು ತರೋಕೆ ಸಿದ್ದಪ್ಪ ಉಕ್ಕಲಿ ಎಂಬುವವರ ಜಮೀನಗೆ ಹೋಗಿದ್ದಾರೆ.

ಮದ್ಯ ಕುಡಿಸಿ ಕೊಲೆ 

ಅಲ್ಲಿ ಹೋಗೋ ಮುಂಚೆ ಮತ್ತಷ್ಟು ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಿದ್ಧಾರೆ. ಜಮೀನಿನಲ್ಲಿ ಸುನೀಲ್ ಭಜಂತ್ರಿಗೆ ಮತ್ತಷ್ಟು ಮದ್ಯವನ್ನು ಕುಡಿಸಿದ್ದಾರೆ. ಬಳಿಕ ಸುನೀಲ್ ಭಜಂತ್ರಿ ವಿಪರೀತ ಮದ್ಯ ಸೇವಿಸಿದ ಕಾರಣ ನೆಲಕ್ಕೆ ಬಿದ್ದು ಏನೇನೋ ಗುನುಗಿದ್ದಾನೆ. ಇದಕ್ಕೆ ಸಂತೋಷ ನೀನು ಸಾಯಬೇಕಷ್ಟೇ ಎಂದಿದ್ದಾನೆ. ಕುಡಿದ ಮತ್ತಿನಲ್ಲಿ ಸಾಯುತ್ತೇನೆಂದು ಸುನೀಲ್ ಬಡಬಡಾಯಿಸಿದ್ದಾನೆ. ಮುಂದೆ ಆಗಿದ್ದೇ ಘನಘೋರ ಘಟನೆ. ಮೊಲದೇ ಪ್ಲ್ಯಾನ್ ಮಾಡಿದಂತೆ ಸಂತೋಷ ತನ್ನ ಜೊತೆಗೆ ತಂದಿದ್ದ ಹಗ್ಗದಿಂದ ಸುನೀಲ್ ಕತ್ತಿಗೆ ಬಿಗಿದಿದ್ದಾನೆ. ಮತ್ತೊಂದು ತುದಿಯನ್ನು ತನ್ನ ಕೈಯ್ಯಲ್ಲಿ ಹಿಡಿದುಕೊಂಡು ಕಾಲನನ್ನು ಸುನೀಲನ ಕತ್ತಿಗೆ ಇಟ್ಟು ತುಳಿದು ಕೈಯ್ಯಲ್ಲಿರೋ ಹಗ್ಗವನ್ನು ಬಲವಾಗಿ ಎಳೆದು ಆತನ ಉಸಿರು ನಿಲ್ಲಿಸಿದ್ದಾನೆ. ಇದೆಲ್ಲವನ್ನು ಸಂತೋಷ ಉಕ್ಕಲಿ ತನ್ನ ಮೊಬೈಲ್​ನಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಮಾಡಿಕೊಂಡಿದ್ದಾನೆ. ಸುನೀಲ್ ಸಾವನ್ನಪ್ಪುತ್ತಿದ್ದಂತೆ ಅಲ್ಲಿದ್ದವರು ಪರಾರಿಯಾಗಿದ್ದರು.

ಇದನ್ನೂ ಓದಿ: ಉಡುಪಿ: ಲೈಂಗಿಕ‌ ಕಿರುಕುಳ ಆರೋಪದಡಿ ವಶಕ್ಕೆ ಪಡೆದಿದ್ದ ವ್ಯಕ್ತಿ ಪೊಲೀಸ್​ ಠಾಣೆಯಲ್ಲೇ ಸಾವು

ಸದ್ಯ ಸುನೀಲ್ ಭಜಂತ್ರಿ ಕೊಲೆ ಮಾಡಿರುವ ವಿಡಿಯೋಗಳ ಆಧಾರದ ಮೇಲೆ ಸಂತೋಷ ಉಕ್ಕಲಿ ಹಾಗೂ ಓಗಪ್ಪಾ ಉರ್ಫ್ ಮುದಕಪ್ಪ ಒಡೆಯರ್​ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ಎಸ್ಪಿ ಪ್ರಸನ್ನ ದೇಸಾಯಿ ಹೇಳಿದ್ದಾರೆ. ವಶಕ್ಕೆ ಪಡೆದ ಸಂತೋಷ, ಸುನೀಲ್​ನನ್ನು ಕೊಲೆ ಮಾಡಿರುವ ಪ್ರಮುಖ ಆರೋಪಿಯಾಗಿದ್ದಾನೆ. ಈ ಕೊಲೆಯಲ್ಲಿ ಓಗಪ್ಪಾ ಉರ್ಫ್ ಮುದಕಪ್ಪನ ಪಾತ್ರ ಇದೆಯೋ ಇಲ್ಲವೋ, ಈತನೂ ಸಾಥ್ ನೀಡಿದ್ದಾನೋ ಇಲ್ಲವೋ ಎಂಬುದನ್ನು ತನಿಖೆಯಲ್ಲಿ ತಿಳಿದು ಬರಲಿದೆ ಎಂದಿದ್ದಾರೆ. ಸದ್ಯ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮತ್ತಷ್ಟು ತೀವ್ರವಾಗಿ ಮುಂದುವರೆದಿದೆ. ಪೂರ್ಣ ತನಿಖೆಯ ಬಳಿಕ ಮತ್ತಷ್ಟು ಸತ್ಯಾಂಶಗಳು ತಿಳಿದು ಬರಲಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.