ದೆಹಲಿ: ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಯವಾಗಿದ್ದ ವ್ಯಕ್ತಿ ಮೋಸ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 39 ವರ್ಷದ ಬೆಂಗಳೂರು ಮೂಲದ ಮಹಿಳೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ವ್ಯಕ್ತಿಯೊಬ್ಬರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾಗಿ ಬೆಲೆಬಾಳುವ ವಸ್ತುಗಳು ಮತ್ತು ಹಣವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ದಾಖಲಿಸಲಾದ ಎಫ್‌ಐಆರ್ ಪ್ರಕಾರ, ಏರ್‌ಲೈನ್ ಉದ್ಯೋಗಿ ಮಹಿಳೆ, 15 ದಿನಗಳ ಹಿಂದೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಅನ್ಶುಲ್ ಜೈನ್ ಎಂಬಾತನನ್ನು ಸಂಪರ್ಕಿಸಿದ್ದಾರೆ. ಅನ್ಶುಲ್ ಜೈನ್ ತನ್ನನ್ನು ಎನ್‌ಸಿಆರ್ ಪ್ರದೇಶದಲ್ಲಿ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ಆಕೆಯನ್ನು ದೆಹಲಿಗೆ ಬರುವಂತೆ ತಿಳಿಸಿದ್ದಾನೆ. ಜತೆಗೆ ತನ್ನ ಮನೆಯವರ ಜತೆಗೆ ಮದುವೆ ಮಾತುಕತೆ ನಡೆಸಲು ಬರುವಂತೆ ಹೇಳಿದ್ದಾನೆ. ಇದಕ್ಕೆ ಬರುವಾಗ ಉಡುಪುಗಳು ಮತ್ತು ಆಭರಣಗಳನ್ನು ತರುವಂತೆ ಅನ್ಶುಲ್ ಜೈನ್ ತನ್ನ ಬಳಿ ಹೇಳಿದ್ದಾನೆ ಎಂದು ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಅನ್ಶುಲ್ ಜೈನ್ ನನ್ನನ್ನೂ ಬರಮಾಡಿಕೊಂಡು ಏರೋಸಿಟಿ ಫುಡ್ ಕೋರ್ಟ್‌ನಲ್ಲಿ ಊಟ ಮಾಡಿ ಅವರ ಕಾರಿನಲ್ಲಿ ಅಲ್ಲಿಂದ ತೆರಳಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್ ನಂತರ, ಅನ್ಶುಲ್ ಜೈನ್ ಕಾರಿನ ಟೈರ್‌ನಲ್ಲಿ ಏನೋ ಶಬ್ದ ಬರುತ್ತಿದೆ ಹೇಳಿದ್ದಾನೆ. ಟೈರ್ ಚೆಕ್ ಮಾಡಲು ಕೆಳಗೆ ಇಳಿದ ಕೂಡಲೇ ಅಲ್ಲಿಂದ ಅನ್ಶುಲ್ ಜೈನ್ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ತನ್ನ ಬಳಿಯಿದ್ದ 300 ಗ್ರಾಂ ಚಿನ್ನಾಭರಣ, 15 ಸಾವಿರ ರೂ. ನಗದು, ಮೊಬೈಲ್ ಫೋನ್, ಮೂರು ಎಟಿಎಂ ಕಾರ್ಡ್‌ಗಳು ಹಾಗೂ ಬ್ಯಾಗ್ ಕಳವು ಮಾಡಲಾಗಿದೆ ಎಂದು ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:02 am, Thu, 11 May 23