ನವದೆಹಲಿ, ಮೇ 22: ಅಂಬಾನಿ, ಅದಾನಿ ವಿಚಾರ ಈಗ ಬಿಜೆಪಿ, ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಹಿಂದೆಲ್ಲಾ ಅಂಬಾನಿ, ಅದಾನಿಯನ್ನು ಟೀಕಿಸುತ್ತಿದ್ದ ರಾಹುಲ್ ಗಾಂಧಿ (Rahul Gandhi) ಚುನಾವಣೆ ಘೋಷಣೆ ಆದ ಬಳಿಕ ಅವರ ಬಗ್ಗೆ ಸದ್ದೇ ಮಾಡುತ್ತಿಲ್ಲ ಎಂದು ಕೆಲ ವಾರಗಳ ಹಿಂದೆ ಪ್ರಧಾನಿ ಮೋದಿ (Narendra Modi) ಕುಟುಕಿದ್ದರು. ರಾಹುಲ್ ಗಾಂಧಿ ಕಳೆದ ಐದು ವರ್ಷಗಳಿಂದ ತಮ್ಮ ಭಾಷಣಗಳಲ್ಲಿ ಒಮ್ಮೆಯಾದರೂ ನರೇಂದ್ರ ಮೋದಿ ಜೊತೆಗೆ ಅಂಬಾನಿ, ಅದಾನಿ ಹೆಸರು ಎತ್ತುವುದು ತಪ್ಪುವುದೇ ಇಲ್ಲ. ಅದಾನಿಯನ್ನು (Gautam Adani) ಮೋದಿ ರಕ್ಷಣೆ ಮಾಡುತ್ತಿದ್ದಾರೆ, ಪ್ರೋತ್ಸಾಹಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಬಹಳಷ್ಟು ಬಾರಿ ಆರೋಪ ಮಾಡಿದ್ದಾರೆ. ಕಲ್ಲಿದ್ದಲು ದರ ಹೆಚ್ಚಿಸಿ ಇನ್ವಾಯ್ಸ್ ಮಾಡುತ್ತಿದ್ದಾರೆ ಎಂದು ಅದಾನಿ ಗ್ರೂಪ್ ವಿರುದ್ಧ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ಇದೇ ಅದಾನಿಯಿಂದ ಇಂಥದ್ದೇ ಇನ್ವಾಯ್ಸ್ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಇವತ್ತು ಈ ಬಗ್ಗೆ ವರದಿ ಪ್ರಕಟಿಸಿ ಬೆಳಕು ಚೆಲ್ಲಿದೆ. ಆ ಇನ್ವಾಯ್ಸ್ 2014ರ ಜನವರಿಯದ್ದಾಗಿದ್ದು, ಆಗ ಅಧಿಕಾರದಲ್ಲಿ ಇದ್ದದ್ದು ಯುಪಿಎ ಸರ್ಕಾರವೇ.
ವರದಿ ಪ್ರಕಾರ ಅದಾನಿ ಗ್ರೂಪ್ ಸಂಸ್ಥೆ ಇಂಡೋನೇಷ್ಯಾದಿಂದ ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಖರೀದಿಸಿ ಭಾರತಕ್ಕೆ ತಂದು, ಉತ್ತಮ ಗುಣಮಟ್ಟದ ಕಲ್ಲಿದ್ದಲಿನ ಬೆಲೆಗೆ ಮಾರುತ್ತಿತ್ತು. ಕಿಲೋಗೆ 3,500 ಕ್ಯಾಲೊರಿ ಇರುವ ಕಲ್ಲಿದ್ದಲನ್ನು 6,000 ಕ್ಯಾಲೋರಿಯ ಕಲ್ಲಿದ್ದಲೆಂದು ಮಾರಿ ಒಳ್ಳೆಯ ಲಾಭ ಮಾಡಲಾಗುತ್ತಿತ್ತು ಎಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಹೇಳಿದೆ. 2024ರ ಜನವರಿಯಲ್ಲಿನ ಇನ್ವಾಯ್ಸ್ಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಶವವಾಗಿ ಪತ್ತೆ
ಅದರ ಪ್ರಕಾರ ಒಟ್ಟು 1.5 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲನ್ನು ಇಂಡೋನೇಷ್ಯಾದಲ್ಲಿ ಖರೀದಿಸಿ 22 ಹಡಗುಗಳಲ್ಲಿ ತುಂಬಿಸಿ ಭಾರತಕ್ಕೆ ಸಾಗಿಸಲಾಗಿತ್ತು. ಭಾರತದಲ್ಲಿ ಆ ಕಲ್ಲಿದ್ದಲನ್ನು ದುಪ್ಪಟ್ಟು ದರದಲ್ಲಿ ಮಾರಿ ಅದಾನಿ ಗ್ರೂಪ್ ಲಾಭ ಮಾಡಿಕೊಂಡಿತ್ತು ಎನ್ನಲಾಗಿದೆ.
ಫೈನಾನ್ಷಿಯಲ್ ಟೈಮ್ಸ್ನ ಈ ವರದಿಯು ಒಸಿಸಿಆರ್ಪಿ ಅಥವಾ ವ್ಯವಸ್ಥಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯ ದಾಖಲೆಗಳಲ್ಲಿನ ಅಂಶಗಳನ್ನು ಪ್ರಸ್ತಾಪಿಸಿದೆ. ಅದರಂತೆ, 2013ರ ಡಿಸೆಂಬರ್ನಲ್ಲಿ ಟನ್ಗೆ 28 ಡಾಲರ್ನ ಬೆಲೆಯಂತೆ ಕಲ್ಲಿದ್ದಲು ಇಂಡೋನೇಷ್ಯಾದಿಂದ ಹೊರಟು 2014ರ ಜನವರಿಯಲ್ಲಿ ಭಾರತವನ್ನು ತಲುಪಿದಾಗ ಟನ್ಗೆ 92 ಡಾಲರ್ ಬೆಲೆ ಪಡೆದಿತ್ತಂತೆ.
ಇದನ್ನೂ ಓದಿ: ಪೋರ್ಷೆ ಕಾರು ಅಪಘಾತ: ಆರೋಪಿ ಬಾಲಕನ ಕುಟುಂಬ ಹಾಗೂ ಭೂಗತ ಪಾತಕಿ ಛೋಟಾ ರಾಜನ್ಗಿದೆ ನಂಟು?
ತಮಿಳುನಾಡು ವಿದ್ಯುತ್ ಪ್ರಸರಣ ಕಂಪನಿಯಾದ ಟ್ಯಾಂಗೆಡ್ಕೋ ಜೊತೆ ಅದಾನಿ ಗುತ್ತಿಗೆ ಹೊಂದಿತ್ತು. ಅಧಿಕ ಗುಣಮಟ್ಟದ ಇಂಧನ ಪೂರೈಕೆ ಮಾಡಬೇಕೆಂದು ಗುತ್ತಿಗೆಯಲ್ಲಿ ನಿರ್ದಿಷ್ಟಪಡಿಸಲಾಗಿತ್ತು. ಆದರೆ, ಅದಾನಿ ಗ್ರೂಪ್ ಕಳಪೆ ದರ್ಜೆಯ ಕಲ್ಲಿದ್ದಲು ಇಂಧನವನ್ನು ಪೂರೈಕೆ ಮಾಡಿದೆ. ಕಲ್ಲಿದ್ದಲನ್ನು ವಿದ್ಯುತ್ ತಯಾರಿಕೆಗೆ ಇಂಧನವಾಗಿ ಬಳಸಲಾಗುತ್ತದೆ. ಕಲ್ಲಿದ್ದಲ ಬಳಕೆ ಪರಿಸರಕ್ಕೆ ಮಾರಕ. ಆದರೆ, ಕಡಿಮೆ ಕ್ಯಾಲೊರಿಯ ಕಲ್ಲಿದ್ದಲನ್ನು ಹೆಚ್ಚು ಉರಿಸಬೇಕಾಗುತ್ತದೆ. ಇದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ