ನೀತಿ ಆಯೋಗದ(Niti Aayog meeting) ಆಡಳಿತ ಮಂಡಳಿ ಸಭೆಯನ್ನು ಬಹಿಷ್ಕರಿಸಿದ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ (BJP) ವಾಗ್ದಾಳಿ ನಡೆಸಿದ್ದು, ಇದು ‘ದುರದೃಷ್ಟಕರ’ ‘ಬೇಜವಾಬ್ದಾರಿ’ ಮತ್ತು ‘ಜನ ವಿರೋಧಿ’ ಎಂದು ಹೇಳಿದೆ. ಶನಿವಾರ ನವದೆಹಲಿಯಲ್ಲಿ ಆರಂಭವಾದ ಸಭೆಯು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿಷಯಗಳನ್ನು ಚರ್ಚಿಸುವ ಅಜೆಂಡಾವನ್ನು ಹೊಂದಿದೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ (Ravi Shankar Prasad), ವಿರೋಧ ಪಕ್ಷದ ಮುಖ್ಯಮಂತ್ರಿಗಳ ಸಭೆಯನ್ನು ಬಹಿಷ್ಕರಿಸುವ ನಿರ್ಧಾರವು ಸಂಪೂರ್ಣ ಬೇಜವಾಬ್ದಾರಿ ಮತ್ತು ಸಾರ್ವಜನಿಕ ಹಿತಾಸಕ್ತಿ ಮತ್ತು ಅವರ ರಾಜ್ಯಗಳಲ್ಲಿ ಅವರು ಆಡಳಿತ ನಡೆಸುವ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ದೆಹಲಿಯ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಪಂಜಾಬ್‌ನ ಭಗವಂತ್ ಮಾನ್, ಬಿಹಾರದ ನಿತೀಶ್ ಕುಮಾರ್, ತೆಲಂಗಾಣದ ಕೆ ಚಂದ್ರಶೇಖರ್ ರಾವ್, ತಮಿಳುನಾಡಿನ ಎಂಕೆ ಸ್ಟಾಲಿನ್, ರಾಜಸ್ಥಾನದ ಅಶೋಕ್ ಗೆಹ್ಲೋಟ್ ಮತ್ತು ಕೇರಳದ ಪಿಣರಾಯಿ ವಿಜಯನ್ ಸೇರಿದಂತೆ ಎಂಟು ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗ ಗೈರಾಗಿದ್ದಾರೆ.
100 ವಿಷಯಗಳ ಚರ್ಚೆ ನಡೆಯಬೇಕಾದ ಸಭೆಗೆ ಹಾಜರಾಗಲು ಏಕೆ ಬರುತ್ತಿಲ್ಲ? ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸದಿದ್ದರೆ, ಅವರು ತಮ್ಮ ರಾಜ್ಯಗಳ ಧ್ವನಿಯನ್ನು ತರುತ್ತಿಲ್ಲ ಎಂದು ಪ್ರಸಾದ್ ಹೇಳಿದರು.
ದೇಶದ ಅಭಿವೃದ್ಧಿಗೆ ಸಂಪೂರ್ಣ ವಸ್ತುನಿಷ್ಠ ನೀತಿಯ ಚೌಕಟ್ಟು ಮತ್ತು ಮಾರ್ಗಸೂಚಿಯನ್ನು ನಿರ್ಧರಿಸಲು ನೀತಿ ಆಯೋಗವು ಪ್ರಮುಖ ಸಂಸ್ಥೆಯಾಗಿದೆ .ಮುಖ್ಯಮಂತ್ರಿಗಳು ಸಭೆಗೆ ಬರುವುದಿಲ್ಲ ಎಂದರೆ ಅವರು ತಮ್ಮ ಜನರ ಸಮಸ್ಯೆಗಳನ್ನು ಪರಿಷತ್ತಿನಲ್ಲಿ ಮಂಡಿಸಲು ಸಿದ್ಧರಿಲ್ಲ. ಮೋದಿಯನ್ನು ವಿರೋಧಿಸಲು ನಿಮಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಆದರೆ ನೀವು ನಿಮ್ಮ ರಾಜ್ಯದ ಜನರಿಗೆ ಏಕೆ ಹಾನಿ ಮಾಡುತ್ತಿದ್ದೀರಿ? ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಲು ನೀವು ಎಲ್ಲಿಯವರೆಗೆ ಹೋಗುತ್ತೀರಿ ಎಂದು ಪ್ರಶ್ನಿಸಿ ಪ್ರಸಾದ್, ಕಳೆದ ಏಳು ನೀತಿ ಆಯೋಗದ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಸಾಕಷ್ಟು ಪ್ರಯೋಜನಗಳಿಗೆ ಕಾರಣವಾಗಿವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಹೊಸ ಕನ್ವೆನ್ಷನ್ ಸೆಂಟರ್‌ನಲ್ಲಿ ನೀತಿ ಆಯೋಗದ ಎಂಟನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೀತಿ ಆಯೋಗ್‌ನ ಕೌನ್ಸಿಲ್, ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ವಿವಿಧ ಕೇಂದ್ರ ಮಂತ್ರಿಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: NITI Aayog Meeting: ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಗೈರಾದರೆ ರಾಜ್ಯಕ್ಕೆ ನಷ್ಟ
ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ಕೌನ್ಸಿಲ್ ಸಭೆಯನ್ನು ನಡೆಸಲಾಗಿಲ್ಲ. ದೆಹಲಿಯ ಪ್ರಗತಿ ಮೈದಾನದಲ್ಲಿರುವ ಹೊಸ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಈ ಸಭೆಯ ‘ವಿಕಸಿತ್ ಭಾರತ್ @ 2047: ಟೀಮ್ ಇಂಡಿಯಾದ ಪಾತ್ರ’ಎಂಬ ಅಜೆಂಡಾವನ್ನು ಹೊಂದಿದೆ
ವಿಕಸಿತ್ ಭಾರತ್ (ಅಭಿವೃದ್ಧಿಯ ಭಾರತ), ಎಂಎಸ್‌ಎಂಇಗಳ ಮೇಲಿನ ಒತ್ತಡ, ಮೂಲಸೌಕರ್ಯ ಮತ್ತು ಹೂಡಿಕೆಗಳು, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಪೋಷಣೆ, ಕೌಶಲ್ಯ ಅಭಿವೃದ್ಧಿ ಮತ್ತು ಪ್ರದೇಶಾಭಿವೃದ್ಧಿ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ ಗತಿ ಶಕ್ತಿ ಸೇರಿದಂತೆ ಎಂಟು ಪ್ರಮುಖ ವಿಷಯಗಳನ್ನು ದಿನದ ಸಭೆಯಲ್ಲಿ ಚರ್ಚಿಸಲಾಗುವುದು ನೀತಿ ಆಯೋಗದ ಹೇಳಿಕೆ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ