ಬೇಜವಾಬ್ದಾರಿ ಹೇಳಿಕೆ; ರಾಷ್ಟ್ರಪತಿ ಬಗ್ಗೆ ಸಚಿವ ಗಿರಿ ಅವಹೇಳನಕಾರಿ ಮಾತು ಖಂಡಿಸಿದ ಟಿಎಂಸಿ

| Updated By: Ganapathi Sharma

Updated on: Nov 12, 2022 | 1:24 PM

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಹೇಳನ ಮಾಡಿ ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ ಮಾತನಾಡಿರುವುದರಿಂದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಸಚಿವ ಗಿರಿ ಅವರದ್ದು ಬೇಜವಾಬ್ದಾರಿ ಹೇಳಿಕೆ ಎಂದು ಪಕ್ಷ ಖಂಡಿಸಿದೆ.

ಬೇಜವಾಬ್ದಾರಿ ಹೇಳಿಕೆ; ರಾಷ್ಟ್ರಪತಿ ಬಗ್ಗೆ ಸಚಿವ ಗಿರಿ ಅವಹೇಳನಕಾರಿ ಮಾತು ಖಂಡಿಸಿದ ಟಿಎಂಸಿ
ಅಖಿಲ್ ಗಿರಿ
Image Credit source: ANI
Follow us on

ಕೋಲ್ಕತ್ತ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಅವಹೇಳನ ಮಾಡಿ ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ (Akhil Giri) ಮಾತನಾಡಿರುವುದರಿಂದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಅಂತರ ಕಾಯ್ದುಕೊಂಡಿದೆ. ಸಚಿವ ಗಿರಿ ಅವರದ್ದು ಬೇಜವಾಬ್ದಾರಿ ಹೇಳಿಕೆ ಎಂದು ಪಕ್ಷ ಖಂಡಿಸಿದ್ದು, ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಟೀಕೆಗೆ ಪ್ರತಿಕ್ರಿಯಿಸುವ ಭರದಲ್ಲಿ ಗಿರಿ ಅವರು ರಾಷ್ಟ್ರಪತಿ ಅವರನ್ನು ಉಲ್ಲೇಖಿಸಿ ಅವಹೇಳನ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ದೃಶ್ಯ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

‘ಇದು ಬೇಜವಾಬ್ದಾರಿಯ ಹೇಳಿಕೆಯಾಗಿದೆ. ಇದು ತೃಣಮೂಲ ಕಾಂಗ್ರೆಸ್​ನ ಅಭಿಪ್ರಾಯವಲ್ಲ. ದೇಶದ ರಾಷ್ಟ್ರಪತಿಗಳ ಬಗ್ಗೆ ನಮಗೆ ಅತೀವ ಗೌರವವಿದೆ. ರಾಷ್ಟ್ರಪತಿಗಳು, ಅವರ ಹುದ್ದೆ ಬಗ್ಗೆ ನಮಗೆ ಅತ್ಯುನ್ನತ ಗೌರವ ಇದೆ’ ಎಂದು ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಟ್ವೀಟ್ ಮಾಡಿದ್ದಾರೆ.

ಕ್ಷಮೆ ಯಾಚಿಸಿದ ಅಖಿಲ್ ಗಿರಿ

ರಾಷ್ಟ್ರಪತಿಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಚಿವ ಅಖಿಲ್ ಗಿರಿ ಕ್ಷಮೆಯಾಚಿಸಿದ್ದಾರೆ. ರಾಷ್ಟ್ರಪತಿಗಳಿಗೆ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ. ಬಿಜೆಪಿ ನಾಯಕರು ಸದಾ ನನ್ನನ್ನು ಗುರಿಯಾಗಿಸಿ ಟೀಕೆ ಮಾಡುತ್ತಿರುತ್ತಾರೆ. ಅವರ ಟೀಕೆಗಳಿಗೆ ಉತ್ತರ ನೀಡಿದ್ದೇನಷ್ಟೆ. ಅಂಥ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಯಾಚಿಸುತ್ತಿದ್ದೇನೆ. ನಮ್ಮ ದೇಶದ ರಾಷ್ಟ್ರಪತಿಗಳ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಗಿರಿ ಹೇಳಿದ್ದಾರೆ.

ಇದಕ್ಕೂ ಮುನ್ನ ಗಿರಿ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ, ಆಡಳಿತಾರೂಢ ಟಿಎಂಸಿ ವಿರುದ್ಧ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಮಮತಾ ಬ್ಯಾನರ್ಜಿ ಸಂಪುಟದ ಸಚಿವ ರಾಷ್ಟ್ರಪತಿಯವರನ್ನು ಅವಮಾನಿಸಿದ್ದಾರೆ. ಮಮತಾ ಯಾವತ್ತೂ ಬುಡಕಟ್ಟು ವಿರೋಧಿ, ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೆ ಬೆಂಬಲಿಸಿರಲಿಲ್ಲ ಮತ್ತು ಈಗ ಈ ರೀತಿ ಅವಮಾನಿಸುತ್ತಿದ್ದಾರೆ. ಗಿರಿ ಅವರದು ನಾಚಿಕೆಗೇಡಿನ ಭಾಷಣ ಎಂದು ಬಿಜೆಪಿ ಟೀಕಿಸಿತ್ತು. ಬಿಜೆಪಿಯ ಪಶ್ಚಿಮ ಬಂಗಾಳ ಘಟಕ ಸಹ ಹೇಳಿಕೆಯನ್ನು ಖಂಡಿಸಿದ್ದು, ಗಿರಿ ರಾಜೀನಾಮೆಗೆ ಆಗ್ರಹಿಸಿತ್ತು.

ಘಟನೆ ಹಿನ್ನೆಲೆ…

ಸಚಿವ ಅಖಿಲ್ ಗಿರಿ ಗುರುವಾರ ನಂದಿಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಸಂದರ್ಭದಲ್ಲಿ, ‘ಅವರು (ಸುವೇಂದು ಅಧಿಕಾರಿ) ನನ್ನನ್ನು ಚೆನ್ನಾಗಿ ಕಾಣುತ್ತಿಲ್ಲವೆಂದು ಟೀಕಿಸಿದ್ದಾರೆ. ಅವರೆಷ್ಟು ಚೆಂದ ಇದ್ದಾರೆ? ಜನ ಹೇಗೆ ಕಾಣಿಸುತ್ತಾರೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ಅಳೆಯಬಾರದು. ನಾವು ರಾಷ್ಟ್ರಪತಿಗಳ ಹುದ್ದೆಯನ್ನು ಗೌರವಿಸುತ್ತೇವೆ. ಆದರೆ ಅವರು ಹೇಗೆ ಕಾಣುತ್ತಾರೆ?’ ಎಂದು ಗಹಗಹಿಸಿ ನಗುತ್ತಾ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸಚಿವರು ಈ ಮಾತು ಹೇಳುತ್ತಿದ್ದಂತೆಯೇ ಅಲ್ಲಿ ಸೇರಿದ್ದವರೆಲ್ಲ ಹಾಸ್ಯ ಮಾಡಿ ನಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಇದನ್ನೂ ಓದಿ: ಮುರ್ಮು ಬಗ್ಗೆ ಮಮತಾ ಸಂಪುಟ ಸಚಿವ ಅಖಿಲ್ ಗಿರಿ ಅವಹೇಳನ; ವ್ಯಾಪಕ ವಿರೋಧ