ತಮಿಳುನಾಡು ಬಿಜೆಪಿ ಸಾರಥಿ, ಮಾಜಿ ಐಪಿಎಸ್ ಕೆ ಅಣ್ಣಾಮಲೈ ಹಾಲಿ ಲೋಕಸಭೆ ಚುನಾವಣೆಯಲ್ಲಿ ಪ್ರತಿಷ್ಠಿತ ಕೊಯಮತ್ತೂರಿನಿಂದ ಸ್ಪರ್ಧಿಸುತ್ತಿದ್ದಾರೆ. ಕೊಯಮತ್ತೂರು ಕ್ಷೇತ್ರ ಮತ್ತು ಅಭ್ಯರ್ಥಿ ಇಬ್ಬರೂ ತಮ್ಮ ಭವಿಷ್ಯದ ಪ್ರಯಾಣದಲ್ಲಿ ಕವಲುದಾರಿಯಲ್ಲಿದ್ದಾರೆ. ಕೊಯಮತ್ತೂರು ಲೋಕಸಭಾ ಸ್ಥಾನಕ್ಕೆ ಕೆ ಅಣ್ಣಾಮಲೈ ಅವರ ಉಮೇದುವಾರಿಕೆ ಸಲ್ಲಿಸಿರುವುದು ನಗರದ ಆರ್ಥಿಕ ಇತಿಹಾಸದಲ್ಲಿ ಆಸಕ್ತಿದಾಯಕ ಘಟ್ಟದಲ್ಲಿ ಬರುತ್ತದೆ. ಕ್ಷೇತ್ರದಲ್ಲಿ ಜವಳಿ ಉದ್ಯಮವು ಶಿಥಿಲಾವಸ್ಥೆಯಲ್ಲಿರುವುದನ್ನು ಆರ್ಥಿಕ ತಜ್ಞರು ಈಗಾಗಲೇ ಗುರುತಿಸಿದ್ದಾರೆ. ಅದರ ಜಾಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐಟಿ ವಲಯ ಮತ್ತು ರಕ್ಷಣಾ ಕಾರಿಡಾರ್ ಮುಂಬರುವ ವರ್ಷಗಳಲ್ಲಿ ಇಲ್ಲಿ ಪ್ರಗತಿ ಕಾಣಬೇಕಿದೆ ಎಂದು ಆರ್ಥಿಕ ತಜ್ಞರು ಬಯಸಿದ್ದಾರೆ. ಕೊಯಮತ್ತೂರು ನಗರದ ಸಾಮಾಜಿಕ ಪರಿಸರ ಚೌಕಟ್ಟು ಸಹ ಭಾರಿ ಬದಲಾವಣೆಗೆ ಒಳಗಾಗಿದೆ. ನಗರವು ವಾಸ್ತವದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಜವಳಿ ಕಾರ್ಮಿಕರನ್ನು ಸೃಷ್ಟಿಸಿಲ್ಲ. ಬದಲಿಗೆ ನೂರಾರು ಐಟಿ ಇಂಜಿನಿಯರ್ಗಳನ್ನು ಉತ್ಪಾದಿಸುತ್ತಿದೆ. ಇದರರ್ಥ ನಗರದಲ್ಲಿ ದೊಡ್ಡ ದೊಡ್ಡ ಐಟಿ ಕಂಪನಿಗಳ ಸ್ಥಾಪನೆಗೆ ಎಡೆ ಮಾಡಿಕೊಡುತ್ತಿದೆ.
ನಗರವು ಪ್ರಸ್ತುತ ಕುಂಠಿತ ವೇಗದಲ್ಲಿ ಬೆಳೆಯಲು ಮತ್ತು ಪ್ರಗತಿ ಸಾಧಿಸಲು ಈಗಿನ ‘ಸ್ವಯಂ ನಿರ್ಮಿತ’ ಮಾದರಿಗೆ ಅಂಟಿಕೊಂಡಿರುವುದು ಗಂಡಾಂತರಕಾರಿಯಾಗಿದೆ. ಪುರೋಭಿವೃದ್ಧಿಗೆ ಸರ್ಕಾರದ ಕಡೆಯಿಂದ ಹೂಡಿಕೆಗಳು ಕಡಿಮೆಯಾಗಿದೆ. ಅದು ಮೂಲಭೂತ ಮೂಲಸೌಕರ್ಯ ಅಭಿವೃದ್ಧಿಗೆ ಸೀಮಿತವಾಗಿವೆ. ಆದರೆ, ಜಾಗತಿಕವಾಗಿ ಇಂದಿನ ಆರ್ಥಿಕತೆ ಸಾಗುತ್ತಿರುವ ವೇಗವನ್ನು ನೋಡಿದರೆ ಕೊಯಮತ್ತೂರು ನಗರದ ಬೆಳವಣಿಗೆ ಎಂದಿನಂತೆ ನಿದ್ರಾವಸ್ಥೆಯಲ್ಲಿರುವುದು ಅನಪೇಕ್ಷಿತವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಕ್ಷೇತ್ರದ ಸಂಸದರು ನಿಜಕ್ಕೂ ನಗರೋತ್ಥಾನಕ್ಕೆ ಅಪಾರ ಕೊಡುಗೆ ನೀಡಬಹುದು ಎಂಬುದನ್ನು ತಳ್ಳಿಹಾಕಲಾಗದು.
ಮೊದಲನೆಯದಾಗಿ, ಪ್ರಪಂಚದಾದ್ಯಂತದ ಸರ್ಕಾರಗಳು ಸ್ಥಳೀಯ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತಿವೆ. ದೊಡ್ಡ ಆರ್ಥಿಕತೆಗಳು ಸೆಮಿಕಂಡಕ್ಟರ್ ಚಿಪ್ಸ್, AI ಕಂಪನಿಗಳು ಮತ್ತು ಬಂದರುಗಳಲ್ಲಿ ಬಳಸುವ ದೊಡ್ಡ ಕ್ರೇನ್ಗಳ ಉತ್ಪಾದನೆಗೆ ನೇರವಾಗಿ ಸಬ್ಸಿಡಿ ನೀಡಿ, ಪ್ರೋತ್ಸಾಹಿಸುತ್ತಿವೆ. ಯುಎಸ್, ಇಯು, ಚೀನಾ ಮತ್ತು ಇತರ ಆರ್ಥಿಕತೆಗಳು ತಾಂತ್ರಿಕ ಜ್ಞಾನವನ್ನು ನಿರ್ಮಿಸಲು ಮಾತ್ರವಲ್ಲದೆ ಅಂತಹ ಜ್ಞಾನವನ್ನು ತಮ್ಮ ದೇಶಗಳಲ್ಲಿ ಇರಿಸಿಕೊಳ್ಳಲು ಮತ್ತು ದೊಡ್ಡ ಪ್ರಮಾಣದ ಉತ್ಪಾದನೆಯ ಮೂಲಕ ಇತರರ ಮೇಲೆ ಮೇಲುಗೈ ಸಾಧಿಸಲು ಮೇಲ್ಸ್ತರದ ಪೈಪೋಟಿಯಲ್ಲಿ ಸಿಲುಕಿಕೊಂಡಿವೆ.
ಎರಡನೆಯದಾಗಿ, ಭವಿಷ್ಯದ ಆರ್ಥಿಕತೆಯ ಹೆಚ್ಚಿನ ಭಾಗವು ಇಂದಿನ ಟೆಕ್ ಕಂಪನಿಗಳಿಂದ ಹೊರಬರುವ ಉತ್ಪನ್ನಗಳು ಮತ್ತು ಪರಿಹಾರೋತ್ಪನ್ನಗಳ ಮೇಲೆ ಅವಲಂಬಿತವಾಗಿದೆ. ಹೊಸ ರೀತಿಯ ಇಂಧನ ಪರಿಹಾರಗಳು (ಬ್ಯಾಟರಿಗಳು, ಸೌರ, ಸಣ್ಣ ಪರಮಾಣು ರಿಯಾಕ್ಟರ್ಗಳ ಬಗ್ಗೆ ಮಾತನಾಡಲಾಗುತ್ತಿದೆ). 2040 ರ ವೇಳೆಗೆ AI ಸಕ್ರಿಯಗೊಳಿಸಿದ ಲಕ್ಷಾಂತರ ಮಾನವ ಸ್ವರೂಪಿ ರೋಬೋಟ್ಗಳು ಇರುತ್ತವೆ. ಇದು ಆರ್ಥಿಕತೆಗಳು ಮತ್ತು ಸಮಾಜಗಳ ಸ್ವರೂಪವನ್ನು ಬದಲಿಸಲಿದೆ.
ಉತ್ಪಾದನೆ ಮತ್ತು ಆಳವಾದ ತಂತ್ರಜ್ಞಾನ ಹೂಡಿಕೆಗಳು – ಈ ಎರಡೂ ಬದಲಾವಣೆಗಳು ಸ್ಥಳೀಯ ಸರ್ಕಾರಗಳ ಬೃಹತ್ ಪಾಲ್ಗೊಳ್ಳುವಿಕೆಯನ್ನು ಎದುರು ನೋಡುತ್ತವೆ. ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಸ್ಥಲೀಯ ಮಟ್ಟದಲ್ಲಿ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಪರಸ್ಪರ ಹೊಂದಾಣಿಕೆಯಲ್ಲಿ ಕೆಲಸ ಮಾಡುತ್ತವೆ. ಸೆಮಿಕಂಡಕ್ಟರ್ ಚಿಪ್ಸ್ ಜಾಗದಲ್ಲಿ ನಾಲ್ಕು ಪ್ರಮುಖ ಹೂಡಿಕೆಗಳಲ್ಲಿ ಮೂರು ಗುಜರಾತ್ಗೆ ಹೋಗಿರುವುದು ಆಕಸ್ಮಿಕವಲ್ಲ ಎಂಬುದನ್ನು ಮನಗಾಣಬೇಕು. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಎಲ್ಲ ನಾಲ್ಕು ಹೂಡಿಕೆಗಳೂ ಬಿಜೆಪಿ ಆಡಳಿತದ ರಾಜ್ಯಗಳಿಗೆ ಮುಡಿಪಾಗಿವೆ ಎಂಬುದು ಮರೆಯುವಂತಿಲ್ಲ.
ಆಳವಾದ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಹೂಡಿಕೆಗಳು ಸರ್ಕಾರದ ಆರ್ಥಿಕ ಕೊಡುಗೆಗಳನ್ನು ಸಹ ಒಳಗೊಂಡಿರುತ್ತವೆ. EV ಹಬ್ ಕೇಂದ್ರವಾಗಿ ಹೊಸೂರಿನ ಬೆಳವಣಿಗೆಯು ತನ್ನಿಂತಾನೇ ಆದುದಲ್ಲ. ರಾಜ್ಯ ಸಬ್ಸಿಡಿಗಳು ಇದರತ್ತ ಸಕ್ರಿಯಗೊಂಡು ಸಾಧ್ಯವಾಗಿದೆ. ಅದೇ ರೀತಿ, ಶ್ರೀಪೆರಂಬದೂರಿನ ಆಟೋಮೊಬೈಲ್ ಉತ್ಪಾದನಾ ಪರಿಸರವು ಸಹ ‘ಸ್ವಯಂ ನಿರ್ಮಿತ’ ಅಲ್ಲ – ಇದೂ ರಾಜ್ಯ ಸರ್ಕಾರದ ಉದ್ದೇಶಿತ ಕೊಡುಗೆಯಾಗಿದೆ. ಇಲ್ಲಿ ಪ್ರಸ್ತಾಪಗೊಂಡಿರುವ ವಾಸ್ತವಗಳನ್ನು ಗಮನಿಸಿದರೆ ಕೊಯಮತ್ತೂರು ಸಹ ಸ್ಥಳೀಯ ಜನಪ್ರತಿನಿಧಿಗಳ ಭಾಗಿತ್ವದೊಂದಿಗೆ ರಚನೆಯಾಗಬೇಕಿದೆ.
ಕ್ಷೇತ್ರದ ಇಂತಹ ಸರ್ವಾಂಗೀಣ ಅಭಿವೃದ್ಧಿಗಳತ್ತ ಗಮನವನ್ನೇ ಹರಿಸದೆ, ಅಸಡ್ಡೆ ತೋರುವ ಹಳೆಯ ಮಾದರಿ ಸಂಸದರು (ಕ್ಷೇತ್ರದಲ್ಲಿಯೇ ಕಾಣಿಸಿಕೊಳ್ಳದಂತೆ ಹೆಚ್ಚು ಕಾಳಜಿ ವಹಿಸಿರುವ ಹಿಂದಿನ ಸಂಸದ ಪಿ.ಆರ್. ನಟರಾಜನ್) ಕೊಯಮತ್ತೂರಿನ ಬೆಳವಣಿಗೆಗೆ ಹೇಗೆ ಪೂರಕವಾಗಬಲ್ಲರು ಅಲ್ಲವಾ? ಇನ್ನು ರಾಜ್ಯ/ಕೇಂದ್ರ ಸರ್ಕಾರದ ಪುರೋಭಿವೃದ್ಧಿ ಉದ್ದೇಶಗಳಿಗೆ ಹೊಂದಿಕೆಯಾಗದ ಸ್ಥಳೀಯ ಉದ್ಯಮ ಪರಿಸರ ವ್ಯವಸ್ಥೆಯು ನಿಶ್ಚಲತೆಯ ಆರ್ಥಿಕತೆಯನ್ನು ಮಾತ್ರ ಅರ್ಥೈಸಬಲ್ಲದು.
ಅಣ್ಣಾಮಲೈ ಅವರು ಬಿಜೆಪಿಯ ರಾಷ್ಟ್ರೀಯ ನಾಯಕತ್ವದೊಂದಿಗೆ ಹತ್ತಿರವಾಗಿರುವುದನ್ನು ಗಮನಿಸಿದರೆ ಕೊಯಮತ್ತೂರಿಗೆ ಮಾದರಿ ಸಂಸದರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಅನ್ನಿಸುತ್ತದೆ. ದಾಖಲಾರ್ಹ ಸಂಗತಿಯೆಂದರೆ ಅವರು ಇನ್ನೂ ನಗರದ ಬಗ್ಗೆ ವಿಶಾಲವಾದ ದೃಷ್ಟಿಕೋನ ವ್ಯಕ್ತಪಡಿಸದಿದ್ದರೂ, ಕೊಯಮತ್ತೂರು ನಗರಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಸ್ಥಳೀಯ ಉದ್ಯಮಿಗಳನ್ನು ಉತ್ತೇಜಿಸುವ ಮತ್ತು ನಗರವನ್ನು ಬೇರೆಯದ್ದೇ ಸ್ತರಕ್ಕೆ ಕೊಂಡೊಯ್ಯಬಹುದಾದ ಮತ್ತು ADMK ಅಥವಾ DMK ಪ್ರತಿನಿಧಿಗಳಿಗಿಂತ ನಾಲ್ಕು ಹೆಜ್ಜೆ ಮುಂದೆ ಹೋಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನಬಹುದು.
ಇನ್ನು ಅಣ್ಣಾಮಲೈಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದಕ್ಕೆ ಕೊಯಮತ್ತೂರು ಕ್ಷೇತ್ರವು ಅತ್ಯುತ್ತಮ ಆಯ್ಕೆಯಾಗಲಿದೆ. ಅಣ್ಣಾಮಲೈ ಸಂಸದರಾಗಿ ಆಯ್ಕೆಯಾದರೆ ಬಂಡವಾಳ ಹೂಡಿಕೆಗಾಗಿ ಸ್ಪರ್ಧಿಸುತ್ತಿರುವ ಇತರ ರಾಜ್ಯಗಳು ಮತ್ತು ನಗರಗಳನ್ನು ಅವರು ಮೀರಿಸಬಹುದೇ? ನಗರಕ್ಕೆ ಹೊಸ ಕೈಗಾರಿಕಾ ಮತ್ತು ಉದ್ಯಮಶೀಲ ಶಕ್ತಿಯನ್ನು ತರಲು ಮತ್ತು ಅದಕ್ಕೆ ತಕ್ಕಂತಹ ಅಗತ್ಯವಾದ ಸಾಂಸ್ಕೃತಿಕ ಬದಲಾವಣೆಗಳನ್ನು ಅವರು ತರಬಹುದೇ? ಭವಿಷ್ಯದಲ್ಲಿ ಅವರು ಏನು ಮಾಡುತ್ತಾರೆ ಎಂಬುದನ್ನು ಪರೀಕ್ಷಗೆ ಒಡ್ಡಲು ಅವರನ್ನು ಕೊಯಮತ್ತೂರಿನ ಪರಿಪೂರ್ಣ ಅಭ್ಯರ್ಥಿ ಎನ್ನಲಡ್ಡಿಯಿಲ್ಲ.
ಇದೆಲ್ಲವೂ ಸಾಮಾನ್ಯ ಜ್ಞಾನದ ಸಂಗತಿಗಳಾಗಿದ್ದರೆ ಕೊಯಮತ್ತೂರು ನಗರದ ಬಗ್ಗೆ ಮತ್ತು ಅದರ ಹಿಂದಿನ ಸಂಸದರ ಬಗ್ಗೆ ಅನಪೇಕ್ಷಿತ ಅಂಶಗಳಿವೆ. ಸ್ವಯಂ-ಅಭಿವೃದ್ಧಿ ಹೊಂದಿದ ನಗರವನ್ನಾಗಿ ಮಾರ್ಪಡಿಸುವುದಕ್ಕಾಗಿ ರಾಷ್ಟ್ರೀಯ ರಾಜಕೀಯದಲ್ಲಿ ಕೊಯಮತ್ತೂರು ನಗರವನ್ನು ಪ್ರತಿನಿಧಿಸಲು ಹಿಂದಿನ ಜನಪ್ರತಿನಿಧಿಗಳು ವಿಫಲವರಾಗಿದ್ದರು ಎನ್ನುತ್ತಾರೆ ಇಲ್ಲಿನ ರಾಜಕೀಯ ತಜ್ಞರು. ಪಿಆರ್ ರಾಮಕೃಷ್ಣನ್, ಸಿಪಿ ರಾಧಾಕೃಷ್ಣನ್ ಅವರಂತಹ ಕೆಲವರ ಅಧಿಕಾರಾವಧಿಯನ್ನು ಹೊರತುಪಡಿಸಿ, ನಗರದ ಉದ್ಯಮಶೀಲ ವ್ಯವಹಾರಗಳ ಬಗ್ಗೆ ಯಾರಿಗೂ ದೂರದೃಷ್ಟಿಯ ಪರಿಕಲ್ಪನೆ ಇರಲಿಲ್ಲ ಎನ್ನಬಹುದು.
ಈ ಸಿದ್ಧ ದತ್ತಾಂಶಗಳ ಸಮ್ಮುಖದಲ್ಲಿ ಅಣ್ಣಾಮಲೈ ಮತ್ತು ಕೊಯಮತ್ತೂರು ಒಂದಕ್ಕೊಂದು ಪರಸ್ಪರ ಪೂರಕವಾಗಿರಲಿದೆ ಎಂಬುದು ಎದ್ದುಕಾಣುತ್ತದೆ. ಅದಕ್ಕಾಗಿಯೇ ಕ್ಷೇತ್ರ ಮತ್ತು ಅಭ್ಯರ್ಥಿ ಇಬ್ಬರೂ ತನ್ನ ಭವಿಷ್ಯದ ಕವಲುಹಾದಿಯಲ್ಲಿದ್ದಾರೆ.
ತಮಿಳುನಾಡಿನಲ್ಲಿ 2024 ರ ಲೋಕಸಭಾ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು (Friday 19 April, 2024) ಮತದಾನವನ್ನು ನಿಗದಿಪಡಿಸಲಾಗಿದೆ. ತಮಿಳುನಾಡಿನಲ್ಲಿ 39 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಎಂದು ಚುನಾವಣಾ ಆಯೋಗ ಈಗಾಗಲೇ ಘೋಷಿಸಿದೆ.
ಕೊಯಮತ್ತೂರು ಹಿಂದಿನ ಲೋಕಸಭೆ ಚುನಾವಣೆ ಫಲಿತಾಂಶಗಳು
2019 ರಲ್ಲಿ ಪಿ.ಆರ್. ನಟರಾಜನ್ ಕೊಯಮತ್ತೂರು ಕ್ಷೇತ್ರದಿಂದ 1.7 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದರು. ಅವರು 3.9 ಲಕ್ಷ ಮತಗಳನ್ನು ಪಡೆದ ಬಿಜೆಪಿಯ ಸಿ.ಪಿ.ರಾಧಾಕೃಷ್ಣನ್ ಅವರನ್ನು ಸೋಲಿಸಿದರು. ಸಿ.ಪಿ. ರಾಧಾಕೃಷ್ಣನ್ ಅವರು 2019 ರ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರು. ಗಮನಾರ್ಹವಾಗಿ, 2014 ರ ಚುನಾವಣೆಯಲ್ಲಿ ಡಿಎಂಕೆಯ ಕೆ. ಗಣೇಶ್ಕುಮಾರ್ ಮೂರನೇ ಸ್ಥಾನ ಪಡೆದರು, ಇದರಲ್ಲಿ ಎಐಎಡಿಎಂಕೆಯ ಪಿ. ನಾಗರಾಜನ್ ವಿಜಯಶಾಲಿಯಾಗಿ ಹೊರಹೊಮ್ಮಿದ್ದರು.
Published On - 11:32 am, Mon, 8 April 24