ನೇತಾರರು ಪಾಲ್ಗೊಳ್ಳುವ ರಾಷ್ಟ್ರೀಯ ಹಬ್ಬಗಳಲ್ಲಿ ಸಮವಸ್ತ್ರ ಧರಿಸಿದ ಶಾಲಾ ಮಕ್ಕಳು ಭಾಗವಹಿಸುವುದು ಸರಿನಾ? ತಪ್ಪಾ?

|

Updated on: Apr 19, 2024 | 4:06 PM

ಗಣ್ಯರ ರಾಜಕೀಯ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಕ್ಕಳು ಬರುವುದರಲ್ಲಿ ತಪ್ಪಿಲ್ಲ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹೀಗಾಗಿ ಅವರು ಕೂಡ ಗಣ್ಯರ ಮಾತುಗಳನ್ನು ಕೇಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬುದು ಇಂದಿರಾನಗರದ ಸರ್ಕಾರಿ ಶಾಲೆಯ ಶಿಕ್ಷಕಿ ಆಶಾ ಅವರ ಸ್ಪಷ್ಟ ಅಭಿಪ್ರಾಯ. ಆದರೆ ಮಕ್ಕಳು ಅವರಾಗಿಯೇ ಇಷ್ಟಪಟ್ಟು ರಾಜಕೀಯ ಗಣ್ಯರನ್ನು ನೋಡಲು ಹೋಗುವುದರಲ್ಲಿ ತಪ್ಪಿಲ್ಲ. ಇದರಿಂದ ಅವರಿಗೆ ಸ್ಟೇಜ್ ಫಿಯರ್ ದೂರವಾಗುತ್ತೆ. ಭಾಷಣ ಮಾಡುವ ಕೌಶಲ್ಯ ಬೆಳೆಯುತ್ತೆ. ರಾಜಕಾರಣಿಗಳಿಂದ ಪ್ರೇರಣೆಗೊಂಡು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಸರ್ಕಾರಿ ಶಾಲೆಯ ಹಿರಿಯ ಶಿಕ್ಷಕ ಸತೀಶ್ ಬಾಬು ಆಶಿಸಿದ್ದಾರೆ.

ನೇತಾರರು ಪಾಲ್ಗೊಳ್ಳುವ ರಾಷ್ಟ್ರೀಯ ಹಬ್ಬಗಳಲ್ಲಿ ಸಮವಸ್ತ್ರ ಧರಿಸಿದ ಶಾಲಾ ಮಕ್ಕಳು ಭಾಗವಹಿಸುವುದು ಸರಿನಾ? ತಪ್ಪಾ?
ಪ್ರಧಾನಿ, ಸಿಎಂ, ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಸಮವಸ್ತ್ರ ಧರಿಸಿದ ಶಾಲಾ ಮಕ್ಕಳು ಭಾಗವಹಿಸುವುದು ಸರಿನಾ? ತಪ್ಪಾ?
Follow us on

ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾರ್ಚ್ 18ರಂದು ಬಿಜೆಪಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ವೇಳೆ ಸಮವಸ್ತ್ರ ಧರಿಸಿದ್ದ ಶಾಲಾ ಮಕ್ಕಳು ಭಾಗವಹಿಸಿದ್ದರು. ಈ ವಿಚಾರ ಚರ್ಚೆಗೆ ಗ್ರಾಸವೊದಗಿಸಿದೆ. ಸದ್ಯ ಈಗ ಇದಕ್ಕೆ ತೆರೆ ಬಿದ್ದಿದೆ. ಶಾಲಾ ಮಕ್ಕಳು ಸಮವಸ್ತ್ರದಲ್ಲಿ ಹಾಜರಿದ್ದರು ಎಂಬ ಕಾರಣಕ್ಕಾಗಿ ಸ್ಥಳೀಯ ಶಾಲೆಯ ಆಡಳಿತದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಕೊಯಮತ್ತೂರು ಪೊಲೀಸರ ಕ್ರಮವನ್ನು ಮದ್ರಾಸ್ ಹೈಕೋರ್ಟ್ ಪ್ರಶ್ನಿಸಿದೆ. ಪ್ರಧಾನಿ, ಸಿಎಂ, ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಸಮವಸ್ತ್ರ ಧರಿಸಿದ ಶಾಲಾ ಮಕ್ಕಳು ಭಾಗವಹಿಸಿದರೆ ತಪ್ಪಿಲ್ಲ ಎಂದಿದೆ. ಹಾಗಾದ್ರೆ ಯಾವುದೇ ರಾಜಕೀಯ ಸಮಾರಂಭದಲ್ಲಿ ಶಾಲಾ ಮಕ್ಕಳು ಪಾಲ್ಗೊಳ್ಳಬಹುದಾ? ಇಷ್ಟಕ್ಕೂ ಮಕ್ಕಳು ಯಾಕೆ ಪಾಲ್ಗೊಳ್ಳಬಾರದು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ ಬನ್ನಿ.

ಮಾರ್ಚ್ 18 ರಂದು ಬಿಜೆಪಿ ಆಯೋಜಿಸಿದ್ದ ರೋಡ್ ಶೋಗೆ ವಿದ್ಯಾರ್ಥಿಗಳನ್ನು ಸಮವಸ್ತ್ರದಲ್ಲಿ ಕಳುಹಿಸಿದ ಆರೋಪದ ಮೇಲೆ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 75 ಸೇರಿದಂತೆ ಹಲವು ಆರೋಪಗಳಡಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೊಯಮತ್ತೂರಿನ ಶಾಲೆಯೊಂದರ ಪ್ರಾಂಶುಪಾಲರಾದ ಎಸ್ ಪುಕುಲ್ ವಡಿವು ಅವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಪ್ರವಾಸದ ವೇಳೆ ಕೊಯಂಬತ್ತೂರಿನಲ್ಲಿ ಆಯೋಜಿಸಿದ್ದ ರೋಡ್ ಶೋ ವೇಳೆ ಶಾಲಾ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಕೊಯಂಬತ್ತೂರು ಜಿಲ್ಲಾಧಿಕಾರಿ ಕ್ರಾಂತಿ ಕುಮಾರ್ ಪಟಿ ಅವರು ಈ ಬಗ್ಗೆ ಟ್ವೀಟ್ ಮಾಡಿ, ತಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸಲು ಆದೇಶಿಸಿದ್ದೇವೆ. ಎಆರ್‌ಓ ಅವರು ಮುಖ್ಯ ಶಿಕ್ಷಣಾಧಿಕಾರಿ ಮತ್ತು ಕಾರ್ಮಿಕ ಇಲಾಖೆ ಜಂಟಿ ಆಯುಕ್ತರಿಂದ ವರದಿ ಕೇಳಿದ್ದಾರೆ. ವಿಚಾರಣೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಚುನಾವಣಾ ಪ್ರಚಾರದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದಕ್ಕೆ ನಿಷೇಧವಿದೆ. ಇದರ ಹೊರತಾಗಿಯೂ ಸುಮಾರು 50 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರಧಾನಿ ಮೋದಿಯವರ ರೋಡ್‌ಶೋನಲ್ಲಿ ಬಳಸಿಕೊಳ್ಳಲಾಗಿದೆ ಎಂಬ ಕೂಗು ಕೇಳಿ ಬಂದಿತ್ತು. 14 ವರ್ಷಕ್ಕಿಂತ ಚಿಕ್ಕ ಮಕ್ಕಳು ಹನುಮಂತನ ವೇಷ ಹಾಗೂ ಪಕ್ಷದ ಚಿಹ್ನೆ ಇರುವ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ ರೋಡ್‌ ಶೋನಲ್ಲಿ ಭಾಗಿಯಾಗಿದ್ದ ಫೋಟೋಗಳು ವೈರಲ್ ಆಗಿದ್ದವು. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು ಎಂಬ ಸ್ಪಷ್ಟ ನಿರ್ದೇಶನವನ್ನು ಚುನಾವಣಾ ಆಯೋಗ ಹೊರಡಿಸಿದ್ದು ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗುತ್ತಿದೆ.

ಇತ್ತ ಈ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ತೆರೆ ಎಳೆದಿದೆ. ರೋಡ್​ ಶೋ ನೋಡಲು ಮಕ್ಕಳನ್ನು ಕರೆದುಕೊಂಡು ಹೋಗಲಾಗಿದೆ. ಅವರನ್ನು ಪ್ರಚಾರಕ್ಕಾಗಿ ಬಳಸಿಕೊಂಡಿಲ್ಲ. ಮಕ್ಕಳಿಗೆ ಹಿಂಸೆ ಅಥವಾ ಯಾವುದೇ ಧಕ್ಕೆಯಾಗಿಲ್ಲ. ನಾನು ಚಿಕ್ಕವನಿದ್ದಾಗಲೂ ಈ ರೀತಿಯ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೆ. ಪ್ರಧಾನಿ, ಸಿಎಂ, ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಸಮವಸ್ತ್ರ ಧರಿಸಿದ ಶಾಲಾ ಮಕ್ಕಳು ಭಾಗವಹಿಸಿದರೆ ತಪ್ಪಿಲ್ಲ ಎಂದು ನ್ಯಾಯಮೂರ್ತಿ ಜಿ ಜಯಚಂದ್ರನ್ ಹೇಳಿದ್ದಾರೆ.

ಇದಿಷ್ಟೂ ಒಂದು ಕಡೆಯಾದ್ರೆ ಮತ್ತೊಂದು ಕಡೆ ಚಾಚಾ ನೆಹರೂ ಕಾಲದಿಂದಲೂ ಶಾಲಾ ಮಕ್ಕಳು ಇಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದು ಶಿಕ್ಷಕಿಯೊಬ್ಬರು ಮಾತನಾಡಿದ್ದಾರೆ.

ಗಣ್ಯರ ರಾಜಕೀಯ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಕ್ಕಳು ಬರುವುದರಲ್ಲಿ ತಪ್ಪಿಲ್ಲ

ಚುನಾವಣಾ ಸಮಾವೇಶಗಳು, ಪ್ರಚಾರ ಕಾರ್ಯಕ್ರಮಗಳಲ್ಲಿ ಮಕ್ಕಳು ಯಾವುದೇ ಪಕ್ಷದ ಬಾವುಟ, ಬಟ್ಟೆ ತೊಟ್ಟು ಪಾಲ್ಗೊಂಡಿದ್ದರೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕ್ರಮ ವಹಿಸಬಹುದು. ಪ್ರಚಾರದ ವೇಳೆ ಮುಗ್ದ ಮಕ್ಕಳಿಗೆ ಟಿ-ಶರ್ಟ್‌, ಹಣದ ಆಮಿಷವೊಡ್ಡಿ ರಾಜಕೀಯ ಪಕ್ಷಗಳು ಮಕ್ಕಳನ್ನು ಬಳಸಿಕೊಳ್ಳುವ ಉದಾಹರಣೆಗಳಿವೆ. ಈ ರೀತಿಯಾದರೆ ಅದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ, ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ನಿಷೇಧ ಮಾಡಲಾಗಿದೆ. ಆದರೆ ಗಣ್ಯರ ರಾಜಕೀಯ ಕಾರ್ಯಕ್ರಮಗಳನ್ನು ವೀಕ್ಷಿಸಲು ಮಕ್ಕಳು ಬರುವುದರಲ್ಲಿ ತಪ್ಪಿಲ್ಲ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹೀಗಾಗಿ ಅವರು ಕೂಡ ಭಾಷಣಗಳಲ್ಲಿ ಭಾಗಿಯಾಗಿ ಗಣ್ಯರ ಮಾತುಗಳನ್ನು ಕೇಳಿಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಇಂದಿರಾನಗರದ ಸರ್ಕಾರಿ ಶಾಲೆಯ ಶಿಕ್ಷಕಿ ಆಶಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಲಾ ಅವಧಿಯಲ್ಲಿ ಮಕ್ಕಳು ರಾಜಕೀಯ ಕಾರ್ಯಕ್ರಮಗಳಿಗೆ ಹೋಗೋದು ತಪ್ಪು. ಇಂತಹ ಕಾರ್ಯಕ್ರಮಗಳಿಗೆ ಹೋಗಬೇಕಾದ್ರೆ ಅನುಮತಿ ಮುಖ್ಯ. ಮಕ್ಕಳು ಬೇರೆ ಕಾರ್ಯಕ್ರಮಗಳನ್ನು ಅಡೆಂಟ್ ಮಾಡ್ತಿದ್ದಾರೆ ಎಂದ್ರೆ ಅವರಿಗೆ ಆ ದಿನದ ಕ್ಲಾಸ್ ಮಿಸ್ ಆಗುತ್ತೆ. ಅಲ್ಲದೆ ಈಗ ಬಿಸಿಲು ಹೆಚ್ಚಿರುವುದರಿಂದ ಮಕ್ಕಳಿಗೆ ಬಿಸಿಲಿನ ಬೇಗೆಯಿಂದ ತಲೆ ಸುತ್ತುವುದಂತಹ ಸಮಸ್ಯೆಗಳಾಗಬಹುದು. ರಾಜಕೀಯ ವ್ಯಕ್ತಿಗಳ ರ್ಯಾಲಿ ಎಂದ ಮೇಲೆ ಅಲ್ಲಿ ಸಾವಿರಾರು ಜನ ನೆರೆದಿರುತ್ತಾರೆ. ಅದು ಮಕ್ಕಳಿಗೆ ಹಿಂಸೆ ಎನಿಸಬಹುದು. ನೂಕುನುಗ್ಗಲಾಗಬಹುದು. ನೀರು, ತಿಂಡಿಯಂತಹ ವ್ಯವಸ್ಥೆ ಇಲ್ಲದಿರಬಹುದು. ಜೊತೆಗೆ ಕೆಲವೊಮ್ಮೆ ಶಾಲಾ ಮಕ್ಕಳಿಗೆ ಇಷ್ಟ ಇಲ್ಲದಿದ್ದರೂ ಶಿಕ್ಷಕರು ಬಲವಂತಕ್ಕಾಗಿ ಹೋಗಬೇಕಾಗಿ ಬಂದಿರಬಹುದು. ಹಾಗಾಗಿ ಶಾಲೆ ಅವಧಿಯಲ್ಲಿ ಮಕ್ಕಳನ್ನು ಈ ರೀತಿ ಹಿಂಸಿಸುವುದು ತಪ್ಪು.

ಇಂದು ಶಾಲೆಯ ಶಿಕ್ಷಕರೇ ಒಂದು ರಾಜಕೀಯ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದರೆ, ನಾಳೆ ಮತ್ತೊಂದು ರಾಜಕೀಯ ಪಕ್ಷ ನಮ್ಮ ಕಾರ್ಯಕ್ರಮಕ್ಕೂ ಬನ್ನಿ ಎನ್ನುತ್ತೆ. ಹೀಗೆಯೇ ಆದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದರೆ ಮಕ್ಕಳು ಅವರಾಗಿ ಇಷ್ಟಪಟ್ಟು ರಾಜಕೀಯ ಗಣ್ಯರನ್ನು ನೋಡಲು ಹೋಗುವುದರಲ್ಲಿ ತಪ್ಪಿಲ್ಲ. ಈ ರೀತಿ ಮಕ್ಕಳು ಹೋಗುವುದರಿಂದ ಅವರಿಗೆ ಸ್ಟೇಜ್ ಫಿಯರ್ ದೂರವಾಗುತ್ತೆ. ಭಾಷಣ ಮಾಡುವ ಕೌಶಲ್ಯ ಬೆಳೆಯುತ್ತೆ. ರಾಜಕಾರಣಿಗಳಿಂದ ಪ್ರೇರಣೆಗೊಂಡು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಸರ್ಕಾರಿ ಶಾಲೆಯ ಹಿರಿಯ ಶಿಕ್ಷಕ ಸತೀಶ್ ಬಾಬು ಅವರು ಟಿವಿ9 ಕನ್ನಡ ಪ್ರೀಮಿಯಂ ಆ್ಯಪ್​ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಪ್ರಧಾನಿ, ಸಿಎಂ ಇನ್ನಿತರೆ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಸಮವಸ್ತ್ರ ಧರಿಸಿದ ಶಾಲಾ ಮಕ್ಕಳು ಭಾಗವಹಿಸುವುದು ಸಾಮಾನ್ಯವೇ. ಮಕ್ಕಳಿಗೆ ಗಣ್ಯರನ್ನು ನೋಡುವ ಆಸೆ ಇರುತ್ತೆ. ಜೊತೆಗೆ ರಾಷ್ಟ್ರೀಯ ಹಬ್ಬದ ದಿನವಾಗಿರುವ ಕಾರಣ ಶಾಲೆಯಲ್ಲಿ ಯಾವುದೇ ಕ್ಲಾಸ್​ಗಳು ಇರುವುದಿಲ್ಲ. ರಾಷ್ಟ್ರೀಯ ಹಬ್ಬದ ಹಿನ್ನೆಲೆ ಕಾರ್ಯಕ್ರಮಗಳನ್ನು ಆಯೋಜಿಸಿ ಗಣ್ಯರಿಗೆ ಆಹ್ವಾನ ನೀಡಲಾಗಿರುತ್ತೆ. ಈ ಕಾರ್ಯಕ್ರಮಗಳಲ್ಲಿ ಗಣ್ಯರು ಕೂಡ ರಾಜಕೀಯ ಲಾಭದ ಉದ್ದೇಶವನ್ನು ಹೊಂದಿರುವುದಿಲ್ಲ. ಮಕ್ಕಳಿಗೆ ನೀತಿ ಪಾಠ ಹೇಳ್ತಾರೆ. ಇದರಿಂದ ಮಕ್ಕಳ ಖುಷಿ ಹೆಚ್ಚಾಗುತ್ತೆ.

ಮಕ್ಕಳು ಮುಂದೆ ಮತ್ತಷ್ಟು ಉತ್ಸಾಹಿತರಾಗಿ ತಮ್ಮ ಓದಿನಲ್ಲಿ ಪಾಲ್ಗೊಳ್ಳಲು ಸಹಾಯಕವಾಗುತ್ತೆ. ಆದರೆ ಅದೆಷ್ಟೋ ಕಡೆಗಳಲ್ಲಿ ನಾನು ಗಮನಿಸಿದ್ದೇನೆ, ಪೋಷಕರು ಪ್ರಚಾರಕ್ಕೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಾರೆ. ಮಕ್ಕಳು ಬಿಸಿಲಿನಲ್ಲಿ ನಡೆದು ಅಸ್ವಸ್ಥರಾಗುತ್ತಾರೆ. ಹೀಗೆ ಆಗಬಾರದು ಎಂದು ಹಲಸೂರಿನ ಖಾಸಗಿ ಶಾಲೆಯ ಪ್ರಾಂಶುಪಾಲರಾದ ಸುಧಾಮ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Published On - 1:35 pm, Thu, 18 April 24