
ಇಸ್ರೇಲ್ನ ಬಂದರುನಗರಿ ಹೈಫಾದ ಇತಿಹಾಸದ ಪಾಠಗಳಲ್ಲಿ ಕೆಲ ವಿಚಾರಗಳನ್ನು ಬದಲಾಯಿಸಲಾಗಿದೆ. 1918ರಲ್ಲಿ ಬ್ರಿಟಿಷ್ ಪಡೆಗಳು ಹೈಫಾ ನಗರವನ್ನು (Haifa) ಆಟೊಮನ್ ಆಡಳಿತದಿಂದ (Ottoman empire) ಮುಕ್ತಗೊಳಿಸಿದ್ದರು ಎಂದು ದಶಕಗಳಿಂದ ಇತಿಹಾಸ ಪಾಠಗಳಲ್ಲಿ ಹೇಳಿಕೊಡಲಾಗುತ್ತಿತ್ತು. ಆದರೆ, ಈಗ ಹೈಫಾವನ್ನು ಮುಕ್ತಗೊಳಿಸಿದ್ದು ಬ್ರಿಟಿಷರಲ್ಲ, ಭಾರತೀಯ ಸೈನಿಕರು ಎಂದು ಪಠ್ಯ ಪುನಾರಚಿಸಲಾಗಿದೆ. ಕುದರೆ ಮೇಲೇರಿ ಕತ್ತಿ, ಭರ್ಜಿಗಳನ್ನು ಹಿಡಿದು ಭಾರತೀಯ ಸೈನಿಕರು ಹೈಫಾವನ್ನು ಆಟೊಮನ್ ಮುಷ್ಟಿಯಿಂದ ಬಿಡುಗಡೆ ಮಾಡಿದರು ಎಂದು ಈಗ ಶಾಲಾ ಮಕ್ಕಳಿಗೆ ಇತಿಹಾಸ ಪಾಠ ಹೇಳಿಕೊಡಲಾಗುತ್ತಿದೆ.
ಹೈಫಾ ಇಸ್ರೇಲ್ನ ಪ್ರಮುಖ ಬಂದರು ನಗರಿಯಾಗಿದೆ. ಇಲ್ಲಿರುವ ಭಾರತೀಯ ಸಮಾಧಿಯಲ್ಲಿ ಇತ್ತೀಚೆಗೆ ನಡೆದ ಸ್ಮರಣಾ ಕಾರ್ಯಕ್ರಮದಲ್ಲಿ ಅಲ್ಲಿಯ ಮೇಯರ್ ಯೋನಾ ಯಾಹವ್ ಅವರು ಈ ವಿಚಾರ ಪ್ರಸ್ತಾಪ ಮಾಡಿದರು.
‘ಈ ನಗರವನ್ನು ಬ್ರಿಟಿಷರು ಮುಕ್ತಗೊಳಿಸಿದರು ಎಂದು ಪದೇ ಪದೇ ಹೇಳಿಕೊಡಲಾಗುತ್ತಿತ್ತು. ಹಿಸ್ಟಾರಿಕಲ್ ಸೊಸೈಟಿಯ ಸಂಶೋಧನೆಯು ಸತ್ಯ ಬಹಿರಂಗಗೊಳಿಸಿತ್ತು. ಈಗ ಪ್ರತೀ ಶಾಲೆಯಲ್ಲೂ ಪಠ್ಯಗಳನ್ನು ಬದಲಿಸುತ್ತಿದ್ದೇವೆ. ಹೈಫಾಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಬ್ರಿಟಿಷರಲ್ಲ, ಭಾರತೀಯರು ಎಂದು ಮಕ್ಕಳಿಗೆ ತಿಳಿಸಲಾಗುತ್ತಿದೆ’ ಎಂದು ಹೈಫಾ ಮೇಯರ್ ಹೇಳಿದರು.
ಇದನ್ನೂ ಓದಿ: ಮುಸ್ಲಿಮರೇ ಆಗಲಿ, ಯಾರೇ ಆಗಲಿ ಬಂಗಾಳಿಗಳಿಗೆ ಹಿಂದೂ ಸಂಸ್ಕೃತಿಯೇ ಅಡಿಪಾಯ: ತಸ್ಲಿಮಾ ನಸ್ರೀನ್
1918ರ ಸೆಪ್ಟೆಂಬರ್ 23ಕ್ಕೆ ಹೈಫಾಗೆ ಆಟೊಮನ್ನರಿಂದ ಮುಕ್ತಿ ಸಿಕ್ಕಿತ್ತು. ಆಗ ಮೊದಲ ವಿಶ್ವ ಮಹಾಯುದ್ಧದ ಕಾಲಘಟ್ಟ. ಬ್ರಿಟಿಷರ ಸೇನೆಯಲ್ಲಿ ಭಾರತೀಯ ತುಕಡಿಗಳು ಒಳಗೊಂಡು, ಮಹಾಯುದ್ಧದಲ್ಲಿ ಭಾರತೀಯ ಸೈನಿಕರು ನೇರವಾಗಿ ಭಾಗಿಯಾಗಿದ್ದರು.
ಜೋಧಪುರ್, ಮೈಸೂರು ಮತ್ತು ಹೈದರಾಬಾದ್ ಲ್ಯಾನ್ಸರ್ಗಳು ಹೈಫಾದಲ್ಲಿ ಆಟೊಮನ್ ಮತ್ತು ಜರ್ಮನ್ ರಕ್ಷಣಾ ಕೋಟೆಯನ್ನು ಭೇದಿಸಿದರು. ಎದುರಾಳಿಗಳ ಬಳಿ ಮೆಷೀನ್ ಗನ್, ಮದ್ದುಗುಂಡುಗಳು ಹೇರಳವಾಗಿದ್ದವು. ಭಾರತೀಯ ಸೈನಿಕರ ಬಳಿ ಸವಾರಿಗೆ ಕುದುರೆ, ಕೈಯಲ್ಲಿ ಕತ್ತಿ, ಭರ್ಜಿ ಆಯುಧಗಳು, ಜೊತೆಗೆ ಧೈರ್ಯ ಇತ್ತು.
ಆವತ್ತಿನ ಸಮರದಲ್ಲಿ ಭಾರತೀಯ ತುಕಡಿಗಳ 8 ಯೋಧರು ಬಲಿದಾನಗೈದರು. 34 ಮಂದಿ ಗಾಯಗೊಂಡರು. ಆದರೆ, ಎದುರಾಳಿಗಳಲ್ಲಿ 700 ಮಂದಿಯನ್ನು ಖೈದುಗೊಳಿಸಿದರು. 17 ಫೀಲ್ಡ್ ಗನ್ಗಳು, 11 ಮೆಷೀನ್ ಗನ್ಗಳನ್ನು ವಶಪಡಿಸಿಕೊಂಡರು. ಪ್ರಮುಖ ಬಂದರಾಗಿದ್ದ ಹೈಫಾವನ್ನು ಮುಕ್ತಗೊಳಿಸಿದ್ದರು ಭಾರತೀಯ ಸೈನಿಕರು.
ಇದನ್ನೂ ಓದಿ: ಅಕ್ಟೋಬರ್ 1ರಂದು ಆರ್ಎಸ್ಎಸ್ ಶತಮಾನೋತ್ಸವ, ಪ್ರಧಾನಿ ನರೇಂದ್ರ ಮೋದಿ ಭಾಗಿ
1918ರಲ್ಲಿ ಹೈಫಾ ಮುಕ್ತಿಗೊಳಿಸಿದ ಭಾರತೀಯ ಸೈನಿಕರ ಪೈಕಿ ಮೇಜರ್ ದಲಪತ್ ಸಿಂಗ್ ಅವರನ್ನು ಈಗಲೂ ಸ್ಮರಿಸಲಾಗುತ್ತದೆ. ಜೋಧಪುರ್ ಲ್ಯಾನ್ಸರ್ ತುಕಡಿಯ ಮುಖಂಡನಾಗಿ ದಲಪತ್ ಸಿಂಗ್ ವೀರಾವೇಶದಿಂದ ಹೋರಾಡಿದ್ದರು. ಅವರ ಸಾಹಸವನ್ನು ಗುರುತಿಸಿ ಮರಣೋತ್ತರ ಗೌರವವಾಗಿ ಮಿಲಿಟರಿ ಕ್ರಾಸ್ ಪ್ರಶಸ್ತಿ ನೀಡಲಾಗಿತ್ತು. ಹೈಫಾದ ಹೀರೋ ಎಂದು ಈಗಲೂ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ.
ನರೇಂದ್ರ ಮೋದಿ ಅವರು 2017ರಲ್ಲಿ ಹೈಫಾಗೆ ಹೋಗಿದ್ದಾಗ ಮೇಜರ್ ದಲಪತ್ ಸಿಂಗ್ ಅವರ ಫಲಕವನ್ನು ಅನಾವರಣಗೊಳಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ