Mallikarjun Kharge: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು
Mallikarjun Kharge Hospitalized: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದ್ದು, ಹಿರಿಯ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು, ಅಕ್ಟೋಬರ್ 1: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ (Bengaluru) ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಖರ್ಗೆ ಅವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಹಿರಿಯ ವೈದ್ಯರು ನಿಗಾ ಇರಿಸಿದ್ದಾರೆ. ಖರ್ಗೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮಲ್ಲಿಕಾರ್ಜುನ ಖರ್ಗೆಗೆ ಆಗಿದ್ದೇನು?
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಸಲು ಸೂಚಿಸಲಾಗಿತ್ತು. ಯೋಜಿತ ಶಸ್ತ್ರಚಿಕಿತ್ಸೆಗಾಗಿ ಖರ್ಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚೆನ್ನಾಗಿದ್ದಾರೆ. ನಿಮ್ಮೆಲ್ಲರ ಕಾಳಜಿ ಮತ್ತು ಹಾರೈಕೆಗೆ ಧನ್ಯವಾದಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಎಕ್ಸ್ ಸಂದೇಶ
Sri Kharge was advised pacemaker to be implanted and is admitted to the hospital for the planned procedure. He is stable and doing well.
Grateful to all of you for your concern and wishes.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 1, 2025
ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿ, ಅವರಿಗೆ ಸ್ವಲ್ಪ ಉಸಿರಾಟ ಸಮಸ್ಯೆ ಆಗಿತ್ತು. ಮಂಗಳವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಳೆ ಬಿಡುಗಡೆಯಾಗಲಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಎಂದಿನಂತೆಯೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಭಾರಿ ಪ್ರವಾಹ ಮತ್ತು ಬೆಳೆ ಹಾನಿ ಬಗ್ಗೆ ಬೆಂಗಳೂರಿನಲ್ಲಿ ಅವರು ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕಲ್ಯಾಣ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿವರವಾದ ಪತ್ರ ಬರೆದು ಮನವಿ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಭೀಮಾನದಿ ಭೋರ್ಗರೆತಕ್ಕೆ ಕಲ್ಯಾಣ ಕರ್ನಾಟಕ ತತ್ತರ: ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ
ಮತ್ತೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಅಲ್ಲದೆ, ಮನೆ ಕಳೆದುಕೊಂಡವರಿಗೆ ಮತ್ತು ಬೆಳೆ ಹಾನಿಯಾದವರಿಗೆ ಏನೇನು ಪರಿಹಾರ ನೀಡಬೇಕು ಎಂಬುದನ್ನು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 am, Wed, 1 October 25




