North Karnataka Flood: ಎಲ್ಲೆಡೆ ದಸರಾ, ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಜನಜೀವನ ತತ್ತರ
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ ಕೃಷ್ಣಾ, ಭೀಮಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಉತ್ತರ ಕರ್ನಾಟಕದ ಯಾದಗಿರಿ, ಬೀದರ್, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಕಬ್ಬು, ತೊಗರಿ, ಹತ್ತಿ ಸೇರಿ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದ್ದು, ಗ್ರಾಮಗಳು ಜಲಾವೃತವಾಗಿವೆ.

ಬೆಂಗಳೂರು, ಅಕ್ಟೋಬರ್ 1: ಗದ್ದೆಯಲ್ಲಿ ಸೊಂಪಾಗಿ ಬೆಳೆದು ನಿಂತ ಕಬ್ಬಿನ ಬೆಳೆ ಸಂಪೂರ್ಣ ಮುಳುಗಿದೆ. ತೊಗರಿ ಹೊಲದ ತುಂಬೆಲ್ಲ ಜಲರಾಶಿಯೇ ಆವರಿಸಿದೆ. ಹತ್ತಿ, ಈರುಳ್ಳಿ ಬೆಳೆ ನೆಲದಲ್ಲೇ ಕೊಳೆತುಹೋಗುತ್ತಿವೆ. ಊರಿಗೆ ಊರೇ ಮುಳುಗಡೆಯಾಗಿದೆ. ದೇವಾಲಯ, ದರ್ಗಾಗಳಿಗೂ ಜಲಕಂಟಕ ಎದುರಾಗಿದೆ. ಗ್ರಾಮಸ್ಥರ, ರೈತರ ಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಇದೆಲ್ಲ ಉತ್ತರ ಕರ್ನಾಟಕದ (Karnataka) ಯಾದಗಿರಿ, ಬೀದರ್, ಕಲಬುರಗಿ ಬಾಗಲಕೋಟೆ, ಬೆಳಗಾವಿ, ವಿಜಯಪುರದಲ್ಲಿ ಉಂಟಾಗಿರುವ ಪ್ರವಾಹದ ಕಣ್ಣೀರ ಕತೆಗಳು.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕರುನಾಡಲ್ಲಿ ಕೃಷ್ಣಾ, ಭೀಮಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇಡೀ ನಾಡು ನವರಾತ್ರಿ ಸಂಭ್ರಮದಲ್ಲಿ ಮುಳುಗಿದ್ದರೆ, ಉತ್ತರ ಕರ್ನಾಟಕದ ಜನ ಮಾತ್ರ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ದ್ವೀಪದಂತಾದ ವಿಜಯಪುರದ ಖೇಡಗಿ ಗ್ರಾಮ
ಭೀಮಾನದಿ ಅಬ್ಬರದಿಂದಾಗಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಖೇಡಗಿ ಗ್ರಾಮ ದ್ವೀಪದಂತೆ ಬದಲಾಗಿದೆ. 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು ನಿವಾಸಿಗಳ ಪಾಡು ಹೇಳತೀರದಾಗಿದೆ. ಇಲ್ಲಿನ ದೇಗುಲ, ಗುಡ್ಡದ ಬಸವೇಶ್ವರ ಮಠ, ದರ್ಗಾಗಳೂ ಮುಳುಗಿಹೋಗಿವೆ. ಈಜಿಕೊಂಡು ಹೋಗಿ ಅರ್ಚಕರು ಪೂಜೆ ಸಲ್ಲಿಸುವಂತಾಗಿದೆ.
ಯಾದಗಿರಿ ಜಿಲ್ಲೆ ಶಹಾಪುರದ ರೋಜಾ ಗ್ರಾಮಸ್ಥರು ಭೀಮಾ ಪ್ರವಾಹಕ್ಕೆ ಊರು ಬಿಟ್ಟಿದ್ದಾರೆ. ಬೀದರ್‌ನಲ್ಲಿ ಮಾಂಜ್ರಾ ನದಿಯಿಂದ 900 ಎಕರೆ ಜಮೀನು ಜಲಾವೃತಗೊಂಡಿದೆ. ಬೀದರ್‌ನ ಇಸ್ಲಾಂಪುರ ಗ್ರಾಮ ಸೇರಿ ಹಲವೆಡೆ ಮಂಜ್ರಾ ನದಿ ನೆರೆಯಿಂದ 900ಕ್ಕೂ ಹೆಚ್ಚು ಎಕರೆ ಜಮೀನು ಪ್ರವಾಹಕ್ಕೆ ಮುಳುಗಿವೆ. ತೊಗರಿ ಸೇರಿ ಹಲವು ಬೆಳೆ ನಾಶವಾಗಿದೆ.
ಇನ್ನು ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದ್ದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಜಿನ್ರಾಳ ಗ್ರಾಮದಲ್ಲಿ ನೂರಾರು ಎಕರೆ ಮೆಕ್ಕೆಜೋಳ, ಕಬ್ಬು ನೀರುಪಾಲಾಗಿದೆ.
ನೆರೆ ಹಾನಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ನೂರಾರು ಹಳ್ಳಿಗಳ ಜನ ಪ್ರವಾಹದಿಂದ ನಲುಗಿದ್ದಾರೆ. ಸದ್ಯ, ಸರ್ಕಾರ ಮೈಕೊಡವಿಕೊಂಡಿದ್ದು ಮಂಗಳವಾರ ಸಿಎಂ ಸಿದ್ದರಾಮಯ್ಯ ಕಲಬುರಗಿ, ವಿಜಯಪುರ,ಬೀದರ್,ಯಾದಗಿರಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
ನೆರೆ ಅವಲೋಕನ ಬಳಿಕ ಮುಖ್ಯಮಂತ್ರಿಗಳು ಕಲಬುರಗಿ ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಜಂಟಿ ಸರ್ವೆ ಮುಗಿದ ಬಳಿಕ ಬೆಳೆ ಹಾನಿಗೆ ಪರಿಹಾರ ನೀಡಲಾಗುತ್ತದೆ. 1 ಹೆಕ್ಟೇರ್ ಖುಷ್ಕಿ ಜಮೀನಿಗೆ 8.5 ಸಾವಿರ ರೂಪಾಯಿ, ನೀರಾವರಿ ಜಮೀನಿಗೆ ಒಂದು ಹೆಕ್ಟೇರ್‌ಗೆ 17 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದರು . ಪ್ರವಾಹದಿಂದ ಮನೆಗಳು ಮುಳುಗಿದರೆ ತಕ್ಷಣವೇ 5 ಸಾವಿರ ನೀಡುತ್ತಿದ್ದೇವೆ. ಸರ್ವೆ ಮುಗಿದ ಬಳಿಕ ಹೆಚ್ಚು ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: ಭೀಮಾನದಿ ಭೋರ್ಗರೆತಕ್ಕೆ ಕಲ್ಯಾಣ ಕರ್ನಾಟಕ ತತ್ತರ: ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ
ನೆರೆ ಹಾನಿಯಿಂದ ಬೆಳೆಮಾತ್ರವಲ್ಲ, ರಸ್ತೆ, ಸೇತುವೆ, ವಿದ್ಯುತ್ ಸೇರಿ ಮೂಲಸೌಕರ್ಯಗಳಿಗೂ ಹಾನಿಯಾಗಿದೆ. ಸರ್ಕಾರ ತ್ವರಿತಗತಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.
ಮಾಹಿತಿ: ಸಹದೇವ್ ಮಾನೆ, ರವಿ ಮೂಕಿ, ಅಶೋಕ್ ಯಡಹಳ್ಳಿ, ಸುರೇಶ್ ನಾಯ್ಕ್




