ಬೆಂಗಳೂರು: ಇನ್ಮುಂದೆ ಬೈಕ್ ನಂಬರ್ ಪ್ಲೇಟ್ ಮರೆಮಾಚಿದ್ರೆ ಬೀಳುತ್ತೆ ಕೇಸ್; ಸವಾರರೇ ಜೋಕೆ!
ನಂಬರ್ ಪ್ಲೇಟ್ ಮರೆಮಾಚುವ ಅಥವಾ ತಿದ್ದುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ನಂಬರ್ ಪ್ಲೇಟ್ ಮರೆಮಾಚುವ ಬೈಕ್ ಸವಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದೆ. ಕಳೆದ ಒಂದು ವಾರದಲ್ಲಿ 1200 ಬೈಕ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 01: ಇನ್ಮುಂದೆ ಬೈಕ್ ನಂಬರ್ ಪ್ಲೇಟ್ (number plate) ಸರಿಯಾಗಿ ಕಾಣಿಸದಿದ್ದರೆ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ (Criminal Case) ದಾಖಲಾಗುವುದು ಗ್ಯಾರಂಟಿ. ಟ್ರಾಫಿಕ್ ಪೊಲೀಸರು, ಎಐ ಕ್ಯಾಮೆರಾ ಮತ್ತು ಸಿಗ್ನಲ್ಗಳ ಕಣ್ತಪ್ಪಿಸಲು ಬೈಕ್ ಸವಾರರು ನಾನಾ ಕಸರತ್ತು ನಡೆಸುತ್ತಾರೆ. ಅದರಲ್ಲೂ ನಂಬರ್ ಪ್ಲೇಟ್ಗಳು ಸರಿಯಾಗಿ ಕಾಣಿಸಬಾರದು ಅಂತಾ ಕೊನೆ ನಂಬರ್ಗಳಿಗೆ ಬಣ್ಣ ಬಳೆಯುವುದು, ಟೇಪ್ ಹಾಕುವುದು, ಬಟ್ಟೆ ಸುತ್ತುವುದನ್ನು ಮಾಡುತ್ತಾರೆ. ಹೀಗೆ ನಂಬರ್ ಪ್ಲೇಟ್ಗಳನ್ನ ತಿದ್ದುವ ಸವಾರರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ.
ಇತ್ತೀಚಿಗೆ ನಗರದಲ್ಲಿ ಪೊಲೀಸರು ವಾಹನ ತಪಾಸಣೆಗೆ ಮುಂದಾಗಿದ್ದು, ಈ ವೇಳೆ ಹಲವು ಬೈಕ್ ಸವಾರರು ತಮ್ಮ ಬೈಕ್ ನಂಬರ್ ಪ್ಲೇಟ್ ಅನ್ನು ಮರೆಮಾಚಿ ಸಂಚಾರ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಎಚ್ಚೆತ್ತ ಪೊಲೀಸರು ಅಂತಹ ಬೈಕ್ ಸವಾರರನ್ನ ಪತ್ತೆ ಹಚ್ಚಿ ಅವರ ಮೇಲೆ ವಂಚನೆ ಪ್ರಕರಣ ದಾಖಲು ಮಾಡುತ್ತಿದ್ದಾರೆ.
ಇದನ್ನೂ ಓದಿ: ಅ.1ರಿಂದ ಇರಲ್ಲ ವರ್ಕ್ ಫ್ರಮ್ ಹೋಮ್: ಬೆಂಗಳೂರಲ್ಲಿ ಟ್ರಾಫಿಕ್ ಡಬಲ್?
ಬೈಕ್ ನಂಬರ್ ಪ್ಲೇಟ್ ಮರೆಮಾಚುವುದರಿಂದ ಟ್ರಾಫಿಕ್ ಪೊಲೀಸರಿಗೆ ಬೈಕ್ ಮಾಹಿತಿ ಸಿಗುವುದಿಲ್ಲ. ಎಐ ಕ್ಯಾಮೆರಾಗೆ ಬೈಕ್ ಪತ್ತೆಯಾಗುವುದಿಲ್ಲ. ಹೀಗಾಗಿ ಕೇಸ್ ದಾಖಲು ಮಾಡುವುದು ಕೂಡ ಕಷ್ಟವಾಗುತ್ತೆ. ಆದ್ದರಿಂದ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ವಂಚನೆಯಡಿ ಕೇಸ್ ದಾಖಲಿಸುತ್ತಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಆಗಿದ್ದರೂ ರೆಕಾರ್ಡ್ ಆಗಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಇದು ಉದ್ದೇಶ ಪೂರಕವಾಗಿಯೇ ಹೀಗೆ ಮಾಡಲಾಗುತ್ತಿದ್ದೆ ಎನ್ನಲಾಗುತ್ತಿದ್ದು, ಯಾವ ಪೊಲೀಸ್ ಅಧಿಕಾರಿ ವಾಹನವನ್ನು ತಡೆದು ಪರಿಶೀಲನೆ ಮಾಡುತ್ತಾರೋ ಅವರಿಂದಲೇ ದೂರು ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ. ಈಗಾಗಲೇ 43 ವಾಹನ ಸವಾರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿ, ದಂಡ ಬಾಕಿ ಉಳಿಸಿಕೊಂಡು ಓಡಾಡುವಂತ್ತಿಲ್ಲ: ಏಕೆ ಗೊತ್ತಾ?
ನಕಲಿ ನಂಬರ್ ಪ್ಲೇಟ್ ಬಳಸಿ ವಾಹನ ಚಲಾಯಿಸುತ್ತಿದ್ದ 1200 ಬೈಕ್‌ಗಳನ್ನು ಕಳೆದ ಒಂದು ವಾರದಲ್ಲಿ ಪೊಲೀಸರು ಸೀಜ್ ಮಾಡಿದ್ದಾರೆ. ಅಲ್ಲದೆ ನಗರದಲ್ಲಿ ರಾತ್ರಿ ವೇಳೆ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಈ ವೇಳೆ ನಕಲಿ ನಂಬರ್ ಪ್ಲೇಟ್ಗಳು, ನಂಬರ್ ಪ್ಲೇಟ್ ಮಡಚಿರುವುದು ಗೊತ್ತಾಗಿದೆ. ಆದ್ದರಿಂದ ವಂಚನೆ ಕೇಸ್ ದಾಖಲಾಗಬಾರದು ಅಂದರೆ ನಂಬರ್ ಪ್ಲೇಟ್ ಸರಿಮಾಡಿಸಿಕೊಳ್ಳುವುದು ಅಗತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:42 am, Wed, 1 October 25



