ಘಟಬಂಧನ ಅಲ್ಲ, ಲಠಬಂಧನ; ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಗೆ ಪ್ರಧಾನಿ ಮೋದಿ ಲೇವಡಿ

ಬಿಹಾರದಲ್ಲಿ ಆರ್​ಜೆಡಿ ಮಾಡಿದ ಜಂಗಲ್ ರಾಜ್ ಆಡಳಿತವನ್ನು ಆ ರಾಜ್ಯದ ಜನರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಆರ್‌ಜೆಡಿಯನ್ನು ಟೀಕಿಸಿದ್ದಾರೆ. ಮುಂಬರುವ ಚುನಾವಣೆಯು ರಾಜ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಇದು ಬಿಹಾರದ ಸಮೃದ್ಧಿಯ ಹೊಸ ಅಧ್ಯಾಯವನ್ನು ಬರೆಯುವ ಚುನಾವಣೆಯಾಗಲಿದೆ. ಬಿಹಾರದ ಯುವಕರು ಇದರಲ್ಲಿ ಬಹಳ ಮಹತ್ವದ ಪಾತ್ರವನ್ನು ಹೊಂದಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಘಟಬಂಧನ ಅಲ್ಲ, ಲಠಬಂಧನ; ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಗೆ ಪ್ರಧಾನಿ ಮೋದಿ ಲೇವಡಿ
Pm Modi

Updated on: Oct 23, 2025 | 10:19 PM

ನವದೆಹಲಿ, ಅಕ್ಟೋಬರ್ 23: ‘ಮೇರಾ ಬೂತ್ ಸಬ್ಸೆ ಮಜ್ಬೂತ್’ ಕಾರ್ಯಕ್ರಮದ ಮೂಲಕ ಬಿಹಾರದ (Bihar Elections) ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಇಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವೇಳೆ ಬಿಹಾರದ ವಿಪಕ್ಷದ ಮೈತ್ರಿಯ ಕುರಿತು ಅವರು ವಾಗ್ದಾಳಿ ನಡೆಸಿದ್ದಾರೆ. ಮಹಾಘಟಬಂಧನದ ದೆಹಲಿ ಮತ್ತು ಬಿಹಾರದ ನಾಯಕರು ಜಾಮೀನಿನ ಮೇಲೆ ಬಿಡುಗಡೆಯಾಗಿರುವುದರಿಂದ ವಿರೋಧ ಪಕ್ಷಗಳ ಮೈತ್ರಿ ‘ಘಟಬಂಧನ’ ಅಲ್ಲ, ಅದು ‘ಲಠಬಂಧನ’ (ಅಪರಾಧಿಗಳ ಮೈತ್ರಿ) ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರು ತಮ್ಮೊಳಗೆ ಹೇಗೆ ಹೋರಾಡಬೇಕೆಂದು ಮಾತ್ರ ತಿಳಿದಿದ್ದಾರೆ. ಅವರು ತಮ್ಮ ಸ್ವಾರ್ಥವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಮಾತ್ರ ತಿಳಿದಿದ್ದಾರೆಯೇ ವಿನಃ ಅವರಿಗೆ ಜನರ ಮೇಲೆ ಯಾವುದೇ ಕಾಳಜಿಯಿಲ್ಲ ಎಂದಿದ್ದಾರೆ.


ಇದನ್ನೂ ಓದಿ: ಬಿಹಾರ ಚುನಾವಣೆ; ಮಹಾಘಟಬಂಧನದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಹೆಸರು ಘೋಷಣೆ

“ಬಿಹಾರದ ‘ಲಠಬಂಧನ್’ಗೆ ಅವರ ಸ್ವಂತ ಹಿತಾಸಕ್ತಿಯೇ ಮುಖ್ಯ. ಅವರಿಗೆ ಬಿಹಾರದ ಯುವಕರ ಬಗ್ಗೆ ಕಾಳಜಿಯಿಲ್ಲ. ದಶಕಗಳಿಂದ ದೇಶದ ಮತ್ತು ಬಿಹಾರದ ಯುವಕರು ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯಿಂದ ಬಳಲುತ್ತಿದ್ದರು. ಅವರು ಮಾವೋವಾದಿ ಭಯೋತ್ಪಾದನೆಯ ಸಹಾಯದಿಂದ ಚುನಾವಣೆಗಳನ್ನು ಗೆಲ್ಲುತ್ತಲೇ ಇದ್ದರು. ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆ ಬಿಹಾರದ ನಾಶದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಈ ಮಾವೋವಾದಿ ಭಯೋತ್ಪಾದನೆಯು ಶಾಲೆಗಳು, ಕಾಲೇಜುಗಳು ಅಥವಾ ಆಸ್ಪತ್ರೆಗಳನ್ನು ತೆರೆಯಲು ಅವಕಾಶ ನೀಡಲಿಲ್ಲ. ಅದರ ಬದಲಿಗೆ ಈಗಾಗಲೇ ನಿರ್ಮಿಸಲಾದ ಕೈಗಾರಿಕೆಗಳನ್ನು ನಾಶಪಡಿಸಿತು. ಬಿಹಾರವನ್ನು ಇದರಿಂದ ಹೊರತರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. 2014ರಿಂದ ನಾವು ತುಂಬಾ ಶ್ರಮಿಸುತ್ತಿದ್ದೇವೆ. ಎನ್‌ಡಿಎ ಬಿಹಾರವನ್ನು ಕಾಡುರಾಜ್ಯದ ಕತ್ತಲೆಯಿಂದ ಹೊರತಂದು ಅಭಿವೃದ್ಧಿಯ ಹೊಸ ಬೆಳಕಿಗೆ ತಂದಿದೆ” ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ‘ನಮಕ್ ಹರಾಮ್’ಗಳ ಮತಗಳು ಬೇಕಿಲ್ಲ: ಬಿಹಾರದಲ್ಲಿ ಗಿರಿರಾಜ್ ಸಿಂಗ್ ಗುಡುಗು; ಮುಸ್ಲಿಮರನ್ನು ಕುಟುಕಿದ ಮಾಡಿದ ಕೇಂದ್ರ ಸಚಿವ

“ಇಂದು ನಾವು ಬಿಹಾರದಲ್ಲಿ ನಕ್ಸಲಿಸಂ, ಮಾವೋವಾದ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವತ್ತ ವೇಗವಾಗಿ ಸಾಗುತ್ತಿದ್ದೇವೆ. ಭವಿಷ್ಯವನ್ನು ಸುರಕ್ಷಿತಗೊಳಿಸುವುದು ನಮ್ಮ ಕರ್ತವ್ಯ. ಬಿಹಾರದ ಯುವಕರ ಅಭಿವೃದ್ಧಿ ಬಗ್ಗೆ ನಾವು ಸಂಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ನವೆಂಬರ್ 14ರಂದು ಎನ್​ಡಿಎ ಅಧಿಕಾರಕ್ಕೆ ಬಂದ ನಂತರ, ಬಿಹಾರದಲ್ಲಿ ಮಹಿಳಾ ಸಬಲೀಕರಣದ ಹೊಸ ಯುಗ ಪ್ರಾರಂಭವಾಗಲಿದೆ” ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ