ಕೊಚ್ಚಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಅಧ್ಯಕ್ಷ ಮತ್ತು ಪ್ರಮುಖ ಆಧ್ಯಾತ್ಮಿಕ ನಾಯಕ ಪಾಣಕ್ಕಾಡ್ ಸೈಯದ್ ಹೈದರಾಲಿ ಶಿಹಾಬ್ ತಂಙಳ್ (74) (Panakkad Sayed Hyderali Shihab Thangal) ಭಾನುವಾರ ನಿಧನರಾದರು. ತಂಙಳ್ ಅವರು ಕಳೆದ ಕೆಲವು ತಿಂಗಳುಗಳಿಂದ ಅಸ್ವಸ್ಥರಾಗಿದ್ದರು. ಇಂದು ಮಧ್ಯಾಹ್ನ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನಲ್ಲಿ ಪ್ರಮುಖ ನಾಯಕರಾಗಿರುವ ತಂಙಳ್ ಅವರು ಕೇರಳದ ಮುಸ್ಲಿಂ ವಿದ್ವಾಂಸರ ಪ್ರಭಾವಿ ಸಂಸ್ಥೆಯಾದ ಸಮಸ್ತ ಕೇರಳ ಜಮಿಯ್ಯತುಲ್ ಉಲೇಮಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಮಲಪ್ಪುರಂ ಮೂಲದ ಪಾಣಕ್ಕಾಡ್ ತಂಙಳ್ ಕುಟುಂಬದ ಹಿರಿಯ ಸದಸ್ಯರಾಗಿದ್ದಾರೆ. ಈ ಕುಟುಂಬ ಐಯುಎಂಎಲ್ ರಾಜಕೀಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ತಂಙಳ್ 2009 ರಲ್ಲಿ ತಮ್ಮ ಹಿರಿಯ ಸಹೋದರ ಸಯ್ಯದ್ ಮೊಹಮ್ಮದಲಿ ಶಿಹಾಬ್ ತಂಙಳ್ ಅವರ ಮರಣದ ನಂತರ ಐಯುಎಂಎಲ್ ನ ಅಧ್ಯಕ್ಷರಾದರು. ಸೋಮವಾರ ಬೆಳಗ್ಗೆ 9 ಗಂಟೆಗೆ ಪಾಣಕ್ಕಾಡ್ ಜುಮಾ ಮಸೀದಿಯಲ್ಲಿ ದಫನ ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಭಾನುವಾರ ಸಂಜೆ 5 ಗಂಟೆಯಿಂದ ಮಲಪ್ಪುರಂ ಟೌನ್ ಹಾಲ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.
ಹೈದರಾಲಿ ತಂಙಳ್ ಅವರು ಜೂನ್ 15, 1947 ರಂದು ಪಿ.ಎಂ.ಎಸ್.ಎ ಪೂಕೋಯ ತಂಙಳ್ ಮತ್ತು ಆಯೇಶಾ ಚೆರುಕುಂಜಿ ಬೀವಿಯವರ ಮೂರನೇ ಮಗನಾಗಿ ಜನಿಸಿದರು. ದಿವಂಗತ ಪಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಙಳ್, ಪಾಣಕ್ಕಾಡ್ ಉಮರ್ ಅಲಿ ಶಿಹಾಬ್ ತಂಙಳ್, ಸಾದಿಕಲಿ ಶಿಹಾಬ್ ತಂಙಳ್ ಮತ್ತು ಅಬ್ಬಾಸಾಲಿ ಶಿಹಾಬ್ ತಂಙಳ್ ಸಹೋದರರು. ಅವರು ಇಸ್ಲಾಮಿಕ್ ವಿದ್ವಾಂಸರಾಗಿದ್ದರು ಮತ್ತು ರಾಜ್ಯದ ಅನೇಕ ಮಹಲುಗಳ ಖಾಸಿಯಾಗಿದ್ದರು. 18 ವರ್ಷಗಳ ಕಾಲ ಮುಸ್ಲಿಂ ಲೀಗ್‌ನ ಜಿಲ್ಲಾಧ್ಯಕ್ಷರಾಗಿದ್ದರು.
ಮುಹಮ್ಮದ್ ಅಲಿ ಶಿಹಾಬ್ ಅವರ ನಿಧನದ ನಂತರ ಆಗಸ್ಟ್ 1, 2009 ರಂದು ಲೀಗ್‌ನ ರಾಜ್ಯಾಧ್ಯಕ್ಷರಾದರು. ವಯನಾಡು ಜಿಲ್ಲೆಯ ಖಾಸಿ, ಎಸ್‌ವೈಎಸ್ ಅಧ್ಯಕ್ಷ, ಸುನ್ನಿ ಮಹಲ್ ಫೆಡರೇಶನ್ ಕಾರ್ಯದರ್ಶಿ, ಇಸ್ಲಾಮಿಕ್ ಶಿಕ್ಷಣ ಮಂಡಳಿಯ ಕೋಶಾಧಿಕಾರಿ, ಜಾಮಿಯಾ ನೂರಿಯಾ ಅರೇಬಿಕ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ, ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಮತ್ತು ತಾನೂರ್ ವರಕ್ಕಲ್ ಮುಳ್ಳಕೋಯ ತಂಙಳ್ ಸ್ಮಾರಕ ಅನಾಥಾಶ್ರಮದ ಅಧ್ಯಕ್ಷರಾಗಿದ್ದರು. 30 ನೇ ವಯಸ್ಸಿನಲ್ಲಿ, ಅವರು ಪೂಕೊಳತ್ತೂರು ಮಹಲ್ಲಾ ಮಸೀದಿ ಮತ್ತು ಮದರಸಾದ ಅಧ್ಯಕ್ಷರಾದರು. ಎರಡೇ ವರ್ಷದಲ್ಲಿ ಕರುವಾರಕುಂದು ದಾರುನ್ನಜಾತ್ ಅರೇಬಿಕ್ ಕಾಲೇಜಿನ ಅಧ್ಯಕ್ಷರಾದರು. ಅವರು ಸುನ್ನಿ ವಿದ್ಯಾರ್ಥಿ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾಗಿದ್ದರು.
ಕೋಯಿಕ್ಕೋಡ್‌ನ ಎಂಎಂ ಹೈಸ್ಕೂಲ್‌ನಿಂದ ಎಸ್‌ಎಸ್‌ಎಲ್‌ಸಿ ತೇರ್ಗಡೆ. ಕನ್ನಲ್ಲೂರು, ಪಟ್ಟರ್ನಡಕ್ಕಾವು ಮತ್ತು ಪೊನ್ನಾನಿ ಮೌನತುಲ್ ಇಸ್ಲಾಂನಲ್ಲಿ ಧರ್ಮವನ್ನು ಅಧ್ಯಯನ ಮಾಡಿದ ನಂತರ, ಅವರು 1975 ರಲ್ಲಿ ಪಟ್ಟಿಕಾಡ್‌ನ ಜಾಮಿಯಾ ನೂರಿಯಾ ಅರೇಬಿಕ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ಆಮೇಲೆ ಮುಸ್ಲಿಂ ಲೀಗ್ ಅನ್ನು ನಿರ್ಣಾಯಕ ಹಂತಗಳಿಗೆ ಕೊಂಡೊಯ್ಯುವತ್ತ ಗಮನಹರಿಸಿದರು.
ಇದನ್ನೂ ಓದಿ: ಉಕ್ರೇನ್‌ನಿಂದ ಹಿಂತಿರುಗುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಿಯಮಗಳನ್ನು ಸಡಿಲಗೊಳಿಸಿ: ಬಿಜೆಪಿ ಸಂಸದ ವರುಣ್ ಗಾಂಧಿ
Published On - 2:54 pm, Sun, 6 March 22