ನಿಮಗೆ ಇಷ್ಟವಿಲ್ಲದಿದ್ದರೆ ಖರೀದಿಸಬೇಡಿ; ರಷ್ಯಾ ತೈಲ ಖರೀದಿ ಕುರಿತು ಹೆಚ್ಚಿನ ಸುಂಕ ವಿಧಿಸಿದ ಅಮೆರಿಕಕ್ಕೆ ಸಚಿವ ಜೈಶಂಕರ್ ತಿರುಗೇಟು

ಭಾರತದ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ಹೆಚ್ಚಿನ ಸುಂಕ ವಿಧಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವನ್ನು ವಿರೋಧಿಸಿದ್ದಾರೆ. ಹಾಗೇ, ಮೇ ತಿಂಗಳಲ್ಲಿ ನಾಲ್ಕು ದಿನಗಳ ಭಾರತ-ಪಾಕಿಸ್ತಾನ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಯಾವುದೇ ಅಮೆರಿಕದ ಮಧ್ಯಸ್ಥಿಕೆ ಇರಲಿಲ್ಲ ಎಂದು ಜೈಶಂಕರ್ ಪುನರುಚ್ಚರಿಸಿದ್ದಾರೆ.

ನಿಮಗೆ ಇಷ್ಟವಿಲ್ಲದಿದ್ದರೆ ಖರೀದಿಸಬೇಡಿ; ರಷ್ಯಾ ತೈಲ ಖರೀದಿ ಕುರಿತು ಹೆಚ್ಚಿನ ಸುಂಕ ವಿಧಿಸಿದ ಅಮೆರಿಕಕ್ಕೆ ಸಚಿವ ಜೈಶಂಕರ್ ತಿರುಗೇಟು
Jaishankar S

Updated on: Aug 23, 2025 | 3:34 PM

ನವದೆಹಲಿ, ಆಗಸ್ಟ್ 23: ಭಾರತದ ಮೇಲಿನ ಹೆಚ್ಚುವರಿ ಆಮದು ಸುಂಕಗಳ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅಮೆರಿಕ ಮತ್ತು ಯುರೋಪ್ ಅನ್ನು ಟೀಕಿಸಿದ್ದಾರೆ. ಯಾರೂ ಭಾರತದಿಂದ ಸಂಸ್ಕರಿಸಿದ ತೈಲ ಅಥವಾ ಉತ್ಪನ್ನಗಳನ್ನು ಖರೀದಿಸಲು ಒತ್ತಾಯಿಸಿಲ್ಲ ಎಂದು ಅವರು ಹೇಳಿದ್ದಾರೆ. ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜೈಶಂಕರ್, “ವ್ಯಾಪಾರ ಪರ ಅಮೇರಿಕನ್ ಆಡಳಿತಕ್ಕಾಗಿ ಕೆಲಸ ಮಾಡುವ ಜನರು ಇತರರು ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸುವುದು ತಮಾಷೆಯ ಸಂಗತಿಯಾಗಿದೆ. ಭಾರತದಿಂದ ತೈಲ ಅಥವಾ ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸುವಲ್ಲಿ ನಿಮಗೆ ಸಮಸ್ಯೆ ಇದ್ದರೆ ನೀವು ಖರೀದಿಸಬೇಡಿ. ಯಾರೂ ನಿಮ್ಮನ್ನು ಖರೀದಿಸಲೇಬೇಕೆಂದು ಒತ್ತಾಯಿಸುವುದಿಲ್ಲ” ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದೆ ಎಂಬ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ, ಸಚಿವ ಜೈಶಂಕರ್ ಭಾರತ ತನ್ನ ನೆರೆಯ ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಎಂಬ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.


ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್

ವ್ಯಾಪಾರ ಮತ್ತು ಭಾರತೀಯ ರೈತರ ಹಿತಾಸಕ್ತಿಗಳ ವಿಷಯದಲ್ಲಿ ಸರ್ಕಾರದ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ. “ವ್ಯಾಪಾರದ ವಿಷಯದಲ್ಲಿ, ರೈತರ ಹಿತಾಸಕ್ತಿಗಳು, ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯ ವಿಷಯ, ಮಧ್ಯಸ್ಥಿಕೆಗೆ ವಿರೋಧದ ವಿಷಯದಲ್ಲಿ ನಮ್ಮ ಸರ್ಕಾರವು ತುಂಬಾ ಸ್ಪಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ. “ಯಾರಾದರೂ ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೆ ದಯವಿಟ್ಟು ಭಾರತದ ಜನರಿಗೆ ನೀವು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧರಿಲ್ಲ ಎಂದು ಹೇಳಿ. ದಯವಿಟ್ಟು ನೀವು ಕಾರ್ಯತಂತ್ರದ ಸ್ವಾಯತ್ತತೆಯನ್ನು ಗೌರವಿಸುವುದಿಲ್ಲ ಎಂದು ಭಾರತದ ಜನರಿಗೆ ತಿಳಿಸಿ. ಅದನ್ನು ನಾವು ಗೌರವಿಸುತ್ತೇವೆ. ರೈತರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಾವು ಏನು ಬೇಕಾದರೂ ಮಾಡುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ: ಭಾರತಕ್ಕಿಂತ ಚೀನಾ ರಷ್ಯಾದ ಅತಿ ದೊಡ್ಡ ತೈಲ ಖರೀದಿದಾರ ದೇಶ; ಅಮೆರಿಕಕ್ಕೆ ಸಚಿವ ಜೈಶಂಕರ್ ಸಂದೇಶ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ 50% ಸುಂಕಗಳನ್ನು ವಿಧಿಸಿದ ನಂತರ ಯುಎಸ್-ಭಾರತ ಸಂಬಂಧಗಳಲ್ಲಿ ಬಿರುಕು ಉಂಟಾಗಿದೆ. ಇದರ ನಡುವೆ ಜೈಶಂಕರ್ ಅವರ ಈ ಪ್ರತಿಕ್ರಿಯೆ ಬಂದಿದೆ. ಭಾರತ ರಷ್ಯಾದ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ದಂಡವಾಗಿ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ವಿಧಿಸಲಾಗಿತ್ತು. ಆದರೆ, ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಚೀನಾದ ಸರಕುಗಳ ಮೇಲೆ ಟ್ರಂಪ್ ಇದೇ ರೀತಿಯ ಸುಂಕಗಳನ್ನು ವಿಧಿಸಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:31 pm, Sat, 23 August 25