
ನವದೆಹಲಿ, ಅಕ್ಟೋಬರ್ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಏರ್ಪಟ್ಟಿರುವ ಡೀಸೆಲ್ ಸರಬರಾಜು ಒಪ್ಪಂದವು ಅಮೆರಿಕದ ಮಿತ್ರರಾಷ್ಟ್ರಗಳಲ್ಲಿ ಅಸಮಾಧಾನ ಮೂಡಿಸಿರಬಹುದು. ಆದರೆ ಪ್ರತಿಯೊಂದು ದೇಶವೂ ಮೊದಲು ತನ್ನ ಜನರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯ ಎಂಬುದಕ್ಕೆ ಇದು ನಿದರ್ಶನ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಪಾದಿಸಿದ್ದಾರೆ.
ಅಮೆರಿಕ ತನ್ನ ನಾಗರಿಕರಿಗೆ ತೊಂದರೆಯಾಗುವುದನ್ನು ಬಯಸುವುದಿಲ್ಲ. ಇದೇ ಕಾರಣಕ್ಕೆ ಸ್ವಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿದೆ. ಭಾರತವೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಾಗ ತೆಗೆದುಕೊಂಡ ನಿಲುವು ಎಷ್ಟು ಸಮರ್ಥನೀಯವಾಗಿತ್ತು ಎಂಬುದಕ್ಕೆ ಟ್ರಂಪ್ ಸರ್ಕಾರದ ಇತ್ತೀಚಿನ ನಡೆಯೇ ಸಾಕ್ಷಿ ಎಂದು ಹೇಳಿದರು.
ಅಮೆರಿಕ-ರಷ್ಯಾ ಡೀಸೆಲ್ ಡೀಲ್: ಅಕ್ಟೋಬರ್ 9 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದಿಂದ ಅಮೆರಿಕ ಹಾಗೂ ಜಾಗತಿಕ ಮಾರುಕಟ್ಟೆಗಳಿಗೆ ತಕ್ಷಣವೇ 3 ಲಕ್ಷ ಟನ್‌ಗೂ ಹೆಚ್ಚು ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಪ್ರಕಟಿಸಿದ್ದರು. ನವೆಂಬರ್‌ನಲ್ಲಿ ಹೆಚ್ಚುವರಿಯಾಗಿ 5 ಲಕ್ಷ ಟನ್ ಮತ್ತು ಆ ನಂತರ ಹಂತ ಹಂತವಾಗಿ 1 ಮಿಲಿಯನ್ ಟನ್‌ಗಳಷ್ಟು ಡೀಸೆಲ್ ಪೂರೈಕೆಗೆ ರಷ್ಯಾ ಒಪ್ಪಿಗೆ ಸೂಚಿಸಿದೆ.
‘ಅಮೆರಿಕ ಫಸ್ಟ್’ ಸಮರ್ಥನೆ: ಯುರೋಪಿಯನ್ ಮಿತ್ರರಾಷ್ಟ್ರಗಳ ಟೀಕೆಗಳ ನಡುವೆಯೂ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದ ಟ್ರಂಪ್, “ನಾನು ಅಮೆರಿಕಾದ ಜನರ ಆರ್ಥಿಕ ಹಿತಾಸಕ್ತಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ; ಯಾವಾಗಲೂ ಅಮೆರಿಕಕ್ಕೇ ಮೊದಲ ಆದ್ಯತೆ” ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತ-ಅಮೆರಿಕ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ: ‘ಹಿಂದೆಂದಿಗಿಂತಲೂ ಇದು ಅತ್ಯಂತ ಭಿನ್ನ’ ಎಂದ ಡೊನಾಲ್ಡ್ ಟ್ರಂಪ್
“ನಿರ್ಬಂಧಗಳ ಜಗತ್ತು ಶಾಶ್ವತವಲ್ಲ”: ಜೈಶಂಕರ್ ವಿಶ್ಲೇಷಣೆ
ಒತ್ತಡದ ರಾಜಕಾರಣಕ್ಕೆ ಜಾಗವಿಲ್ಲ: ಪಶ್ಚಿಮದ ಹಲವು ರಾಷ್ಟ್ರಗಳು ನಿರ್ಬಂಧಗಳ ಮಧ್ಯೆಯೂ ರಷ್ಯಾದಿಂದ ಇಂಧನ ಖರೀದಿಸುತ್ತಿವೆ. ಜಾಗತಿಕ ರಾಜಕೀಯದಲ್ಲಿ ಕೇವಲ ಒತ್ತಡಗಳಿಗೆ ಮಣಿಯದೆ, ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಆಯ್ಕೆಗಳನ್ನು ಹೊಂದಿರಬೇಕು. ಯಾರೂ ಇನ್ನು ಮುಂದೆ ಒಂದೇ ದೇಶ ಅಥವಾ ಮೂಲದ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ ಎಂದರು. ಐದು ವರ್ಷಗಳ ಹಿಂದೆ ಯಾರೂ ಯೋಚಿಸಿರದ ರೀತಿಯಲ್ಲಿ ಯುಕ್ರೇನ್ ಯುದ್ಧ ದೀರ್ಘಕಾಲ ಎಳೆಯುತ್ತಿದೆ. ಇಂಧನ, ಹಣಕಾಸು ಹಾಗೂ ಪೂರೈಕೆ ಸರಪಳಿಗಳಲ್ಲಿ ಅನಿಶ್ಚಿತತೆ ಹೆಚ್ಚಿದ್ದು, ಜಗತ್ತು ಒಂದು ರೀತಿಯ ಒತ್ತೆಯಾಳು ಪರಿಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ನಮಗೆ ವಿವೇಕಯುತ ನಿರ್ಧಾರಗಳು ಅಗತ್ಯ ಎಂದು ಜೈಶಂಕರ್ ತಿಳಿಸಿದರು.
ಭಾರತ-ಯುಎಸ್ ವ್ಯಾಪಾರ ಒಪ್ಪಂದ: ಮುಗಿಯುವವರೆಗೂ ಮುಗಿದಿಲ್ಲ
ಅಮೆರಿಕದೊಂದಿಗೆ ಬಹುನಿರೀಕ್ಷಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದಂತೆ, ನಾವು ಒಪ್ಪಂದಕ್ಕೆ ತೀರಾ ಹತ್ತಿರವಾಗಿದ್ದೇವೆ. ಆದರೆ ಮಾತುಕತೆಗಳಲ್ಲಿ ಅಂತಿಮ ಹಂತದ ಸವಾಲುಗಳು ಯಾವಾಗಲೂ ಕಠಿಣವಾಗಿರುತ್ತವೆ. ಅಧಿಕೃತವಾಗಿ ಸಹಿ ಬೀಳುವವರೆಗೂ ಒಪ್ಪಂದ ಪೂರ್ಣಗೊಂಡಿದೆ ಎಂದು ಹೇಳಲಾಗದು. ಆ ತಾಂತ್ರಿಕ ಸವಾಲುಗಳನ್ನು ಎರಡೂ ದೇಶಗಳ ಸಮಾಲೋಚನಾ ತಂಡಗಳು ಬಗೆಹರಿಸುತ್ತಿವೆ ಎಂದರು.
ಮುಂಬೈ ಭೇಟಿ ವಿವಾದ: ರಾಹುಲ್ ಗಾಂಧಿಗೆ ತಿರುಗೇಟು
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ನವದೆಹಲಿ ಬದಲು ಮುಂಬೈನಲ್ಲಿ ಭೇಟಿ ಮಾಡಿದ್ದನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ಷೇಪಿಸಿದ್ದಕ್ಕೆ ಜೈಶಂಕರ್ ತೀಕ್ಷ್ಣ ವ್ಯಂಗ್ಯವಾಡಿದರು: ಮುಂಬೈ ನಗರದ ಜೊತೆ ಅವರಿಗೆ ಏನು ಸಮಸ್ಯೆಯೋ ನನಗೆ ಅರ್ಥವಾಗುತ್ತಿಲ್ಲ. ಮುಂಬೈ ಭಾರತದ ಆರ್ಥಿಕ ರಾಜಧಾನಿ, ಬಾಲಿವುಡ್‌ನ ಕೇಂದ್ರ ಮತ್ತು ಅದ್ಭುತ ನಗರ. ಬಹುಶಃ ಮುಂಬೈಗೆ ಅವರ ಬಗ್ಗೆ ಇಷ್ಟವಿಲ್ಲವೇನೋ ಎಂದು ಲೇವಡಿ ಮಾಡಿದರು.
ಹಿಂದೆ ಇಂದಿರಾ ಗಾಂಧಿಯವರು ಪಾಕಿಸ್ತಾನದ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ಶಿಮ್ಲಾದಲ್ಲಿ ಭೇಟಿಯಾಗಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಸಲ್ಮಾನ್ ಖುರ್ಷಿದ್ ಅವರು ಪಾಕ್ ಸಚಿವರನ್ನು ಭೇಟಿ ಮಾಡಲು ಜೈಪುರಕ್ಕೆ ಹೋಗಿದ್ದರು. ವಿದೇಶಿ ಗಣ್ಯರನ್ನು ದೆಹಲಿಯಿಂದ ಹೊರಗೆ ಭೇಟಿ ಮಾಡುವುದು ರಾಜತಾಂತ್ರಿಕ ಸಂಪ್ರದಾಯದ ಭಾಗ. ರಾಜಕೀಯವಾಗಿ ಮಾತನಾಡುವ ಮುನ್ನ ಸ್ವಲ್ಪ ವಿವೇಚನೆ ಇರಲಿ ಎಂದು ಜೈಶಂಕರ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ