ಸೌದಿ ಅರೇಬಿಯಾದಲ್ಲಿನ ದಾಳಿಯಲ್ಲಿ ಭಾರತೀಯನ ಸಾವಿಗೆ ಭಾರತ ಖಂಡನೆ
ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿರುವ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಓರ್ವ ಭಾರತೀಯ ಪ್ರಜೆ ಮೃತಪಟ್ಟು, ಇಬ್ಬರು ಭಾರತೀಯರು ಗಾಯಗೊಂಡಿರುವುದಾಗಿ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಧಿಕೃತವಾಗಿ ಖಚಿತಪಡಿಸಿದೆ. ಯೆಮೆನ್‌ನ ಹೌತಿ ಬಂಡುಕೋರರ ಕಡೆಯಿಂದ ಸೌದಿ ಅರೇಬಿಯಾದ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಈ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಮೃತರ ಕುಟುಂಬ ವರ್ಗಕ್ಕೆ ಗಾಢ ಸಂತಾಪ ಸೂಚಿಸಿರುವ ಭಾರತದ ರಾಯಭಾರ ಕಚೇರಿಯು, ಗಾಯಗೊಂಡಿರುವ ಭಾರತೀಯರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆ ಹಾಗೂ ರಾಜತಾಂತ್ರಿಕ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಭರವಸೆ ನೀಡಿದೆ.

ನವದೆಹಲಿ, ಅಕ್ಟೋಬರ್ 22: ಸೌದಿ ಅರೇಬಿಯಾದ ಪ್ರಮುಖ ನಾಗರಿಕ ಮೂಲಸೌಕರ್ಯಗಳು ಮತ್ತು ವಿಮಾನ ನಿಲ್ದಾಣಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಯಲ್ಲಿ ಓರ್ವ ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಈ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ಅಕ್ಟೋಬರ್ 21ರಂದು ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿರುವ ‘ಕಿಂಗ್ ಫಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಹಾಗೂ ಈಸ್ಟರ್ನ್ ಪ್ರಾಂತ್ಯದಲ್ಲಿರುವ ‘ಸೌದಿ ಅರಾಮ್ಕೋ’ದ ಶೈಬಾ ತೈಲ ಸಂಸ್ಕರಣಾಗಾರದ ಮೇಲೆ ನಡೆದ ದಾಳಿ ಸೇರಿದಂತೆ ನಾಗರಿಕ ಪ್ರದೇಶಗಳ ಮೇಲಿನ ನಿರಂತರ ದಾಳಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಗಳಿಂದ ನಾಗರಿಕರು ಮೃತಪಟ್ಟು, ಹಲವರು ಗಾಯಗೊಂಡಿರುವುದು ದುರದೃಷ್ಟಕರ” ಎಂದು ತಿಳಿಸಿದೆ.
ವಿದೇಶಾಂಗ ಸಚಿವಾಲಯದ ಮಾಹಿತಿಯಂತೆ, ದಮ್ಮಾಮ್ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಓರ್ವ ಭಾರತೀಯ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಇನ್ನುಳಿದಂತೆ ಶೈಬಾ ತೈಲ ಸಂಸ್ಕರಣಾಗಾರದ ಮೇಲಿನ ದಾಳಿಯಲ್ಲಿ ಮತ್ತೊಬ್ಬ ಭಾರತೀಯ ಪ್ರಜೆ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಸೌದಿ ಅರೇಬಿಯಾ ವಿಮಾನ ನಿಲ್ದಾಣ, ಅರಾಮ್ಕೊ ತೈಲ ಘಟಕದ ಮೇಲೂ ವೈಮಾನಿಕ ದಾಳಿ, 3 ಸಾವು, ಭಾರತೀಯರಿಗೆ ಗಾಯ
“ಮೃತರ ಕುಟುಂಬಕ್ಕೆ ನಮ್ಮ ಭಾವಪೂರ್ಣ ಸಂತಾಪಗಳು ಹಾಗೂ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೌದಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
Our statement on attacks on civilian and energy infrastructure in Saudi Arabia ⬇️
🔗 https://t.co/CT1ZHRz8q4 https://t.co/gbwyQ5Vpjr
— Randhir Jaiswal (@MEAIndia) October 22, 2026
ಸೌದಿ ಅರೇಬಿಯಾಗೆ ಭಾರತದ ಬೆಂಬಲ:
“ಸೌದಿ ಅರೇಬಿಯಾದ ಸಾರ್ವಭೌಮತ್ವ ಹಾಗೂ ಭದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಭಾರತವು ಸೌದಿ ಸರ್ಕಾರ ಮತ್ತು ಜನರೊಂದಿಗೆ ದೃಢವಾಗಿ ನಿಲ್ಲುತ್ತದೆ. ಈ ವಲಯದಲ್ಲಿ ಶೀಘ್ರದಲ್ಲೇ ಶಾಂತಿ ಮತ್ತು ಸಹಜ ಸ್ಥಿತಿ ಮರಳಲಿ ಎಂದು ಆಶಿಸುತ್ತೇವೆ” ಎಂದು ಭಾರತ ತನ್ನ ಬೆಂಬಲ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ದಾಳಿ; ಭಾರತೀಯ ಸೇರಿ ಇಬ್ಬರು ಸಾವು
ದಮ್ಮಾಮ್ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಓರ್ವ ಸೌದಿ ಪ್ರಜೆ ಹಾಗೂ ಓರ್ವ ಭಾರತೀಯ ಮೃತಪಟ್ಟಿರುವುದಾಗಿ ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ. ವಿಮಾನ ನಿಲ್ದಾಣದ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಬಾಂಗ್ಲಾದೇಶ ಮತ್ತು ನೇಪಾಳದ ಒಟ್ಟು 8 ಜನರು ಗಾಯಗೊಂಡಿದ್ದಾರೆ.
ಸೌದಿಯಲ್ಲಿ ಸುಮಾರು 27.4 ಲಕ್ಷ ಭಾರತೀಯರು ನೆಲೆಸಿದ್ದಾರೆ. ವೈಮಾನಿಕ ದಾಳಿಯ ಸಂದರ್ಭದಲ್ಲಿ ಕಟ್ಟಡಗಳ ಒಳಗೆ ಆಶ್ರಯ ಪಡೆಯಲು ಮತ್ತು ದಾಳಿ ಅಥವಾ ಕ್ಷಿಪಣಿ ತಡೆಯುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಭಾರತೀಯ ರಾಯಭಾರ ಕಚೇರಿ ಮನವಿ ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
