ಸೌದಿ ಅರೇಬಿಯಾ ವಿಮಾನ ನಿಲ್ದಾಣ, ಅರಾಮ್ಕೊ ತೈಲ ಘಟಕದ ಮೇಲೂ ವೈಮಾನಿಕ ದಾಳಿ, 3 ಸಾವು, ಭಾರತೀಯರಿಗೆ ಗಾಯ
ಸೌದಿ ಅರೇಬಿಯಾದ ಅರಾಮ್ಕೊ ತೈಲ ಘಟಕ ಮತ್ತು ದಮ್ಮಾಮ್ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಗಳಿಂದ ಮೂವರು ಮೃತಪಟ್ಟು, ಹತ್ತು ಮಂದಿ ಗಾಯಗೊಂಡಿದ್ದಾರೆ. ಯೆಮೆನ್‌ನ ಹೌತಿ ಬಂಡುಕೋರರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಅಮೆರಿಕ ತನ್ನ ಸಿಬ್ಬಂದಿಯನ್ನು ವಾಪಸ್ ಕರೆಸಿದೆ. ದಾಳಿಯಲ್ಲಿ ಭಾರತೀಯನೊಬ್ಬ ಗಾಯಗೊಂಡಿದ್ದು, ಅಲ್ಲಿನ ಭಾರತೀಯ ಸಮುದಾಯದಲ್ಲಿ ಆತಂಕ ಮನೆಮಾಡಿದೆ.

ರಿಯಾದ್, ಅಕ್ಟೋಬರ್ 22: ಸೌದಿ ಅರೇಬಿಯಾದ ವಿಶ್ವವಿಖ್ಯಾತ ತೈಲ ಕಂಪನಿ ‘ಅರಾಮ್ಕೊ’ ಘಟಕ ಹಾಗೂ ದಮ್ಮಾಮ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ನಡೆಸಲಾದ ಭೀಕರ ಡ್ರೋನ್ ದಾಳಿಗಳಲ್ಲಿ ಒಟ್ಟು ಮೂವರು ಮೃತಪಟ್ಟಿದ್ದು, ಭಾರತೀಯ ನಾಗರಿಕ ಸೇರಿದಂತೆ ಹತ್ತು ಮಂದಿ ಗಾಯಗೊಂಡಿದ್ದಾರೆ. ಯೆಮೆನ್ ಮೂಲದ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಈ ಸರಣಿ ದಾಳಿಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ತನ್ನ ರಾಯಭಾರ ಕಚೇರಿಯ ಅನಗತ್ಯ ಸಿಬ್ಬಂದಿಗೆ ತಕ್ಷಣ ದೇಶ ತೊರೆಯುವಂತೆ ಅಮೆರಿಕ ಆದೇಶಿಸಿದೆ.
ಅರಾಮ್ಕೊ ತೈಲ ಸ್ಥಾವರದ ಮೇಲೆ ಡ್ರೋನ್ ದಾಳಿ
ಸೌದಿ ಅರೇಬಿಯಾದ ಆಗ್ನೇಯ ಭಾಗದಲ್ಲಿರುವ ಶೈಬಾ ತೈಲ ಕ್ಷೇತ್ರವನ್ನು ಗುರಿಯಾಗಿಸಿ ಡ್ರೋನ್ ದಾಳಿಗೆ ಯತ್ನಿಸಲಾಯಿತು. ಸೌದಿ ವಾಯು ರಕ್ಷಣಾ ಪಡೆಗಳು ಡ್ರೋನ್ ಅನ್ನು ಮಧ್ಯದಲ್ಲೇ ಹೊಡೆದುರುಳಿಸಿದರೂ, ಅದರ ಅವಶೇಷಗಳು ತೈಲ ಕ್ಷೇತ್ರದಲ್ಲಿ ಗುತ್ತಿಗೆದಾರರ ವಾಹನದ ಮೇಲೆ ಬಿದ್ದು ಭಾರಿ ಬೆಂಕಿ ಹೊತ್ತಿಕೊಂಡಿತು. ಘಟನೆಯಲ್ಲಿ ನೇಪಾಳ ಮತ್ತು ಫಿಲಿಪೈನ್ಸ್ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಈ ದಾಳಿಯಿಂದ ಸಂಸ್ಕರಣಾಗಾರದ ಕಾರ್ಯಾಚರಣೆಗೆ ಯಾವುದೇ ಅಡಚಣೆಯಾಗಿಲ್ಲ ಎಂದು ಸೌದಿ ಇಂಧನ ಸಚಿವಾಲಯ ಸ್ಪಷ್ಟಪಡಿಸಿದೆ.
ದಮ್ಮಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಅಟ್ಯಾಕ್
ಗಲ್ಫ್ ಪ್ರದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಪೂರ್ವ ಪ್ರಾಂತ್ಯದ ದಮ್ಮಾಮ್‌ನಲ್ಲಿರುವ ಕಿಂಗ್ ಫಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ವೈಮಾನಿಕ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಸೌದಿ ಪ್ರಜೆ ಸಾವನ್ನಪ್ಪಿದ್ದು, ಇತರ ಎಂಟು ಜನರು ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಕಟ್ಟಡಗಳಿಗೆ ಹಾನಿಯಾಗಿದ್ದು, ಹಲವು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.
ಅಮೆರಿಕ ಸಿಬ್ಬಂದಿ ವಾಪಸ್‌ಗೆ ಆದೇಶ ಹಾಗೂ ರಾಜತಾಂತ್ರಿಕ ಸಂಕಷ್ಟ
ದಾಳಿಗಳು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಅಮೆರಿಕದ ವಿದೇಶಾಂಗ ಇಲಾಖೆಯು, ರಿಯಾದ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ತುರ್ತಲ್ಲದ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರಿಗೆ ತಕ್ಷಣ ಸೌದಿ ಅರೇಬಿಯಾ ತೊರೆಯುವಂತೆ ತುರ್ತು ನಿರ್ಗಮನ ಆದೇಶ ಹೊರಡಿಸಿದೆ. ನಾಗರಿಕ ಮೂಲಸೌಕರ್ಯಗಳ ಮೇಲಿನ ಹೌತಿಗಳ ನಿರಂತರ ದಾಳಿಗಳು ಜನಸಾಮಾನ್ಯರ ಪ್ರಾಣಕ್ಕೆ ಸಂಚಕಾರ ತರುತ್ತಿವೆ ಎಂದು ವಾಷಿಂಗ್ಟನ್ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: ‘ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು’; ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ದಾಳಿಗೆ ಭಾರತ ಖಂಡನೆ
ಭಾರತಕ್ಕೇಕೆ ಆತಂಕ?
ಸೌದಿ ಅರೇಬಿಯಾದ ತೈಲ, ರಿಯಲ್ ಎಸ್ಟೇಟ್ ಮತ್ತು ಸೇವಾ ವಲಯಗಳಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಮಾನ ನಿಲ್ದಾಣಗಳು ಮತ್ತು ತೈಲ ಸಂಸ್ಕರಣಾಗಾರಗಳಂತಹ ಪ್ರಮುಖ ಸಾರ್ವಜನಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನೇ ಗುರಿಯಾಗಿಸಿ ದಾಳಿ ನಡೆಯುತ್ತಿರುವುದು ಹಾಗೂ ಅರಾಮ್ಕೊ ಘಟನೆಯಲ್ಲಿ ಭಾರತೀಯ ಪ್ರಜೆಯೊಬ್ಬರು ಗಾಯಗೊಂಡಿರುವುದು ಅಲ್ಲಿನ ಭಾರತೀಯ ಸಮುದಾಯ ಮತ್ತು ಅವರ ಕುಟುಂಬಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
