ಜಲಗಾಂವ್ ರೈಲು ಅಪಘಾತದ ಪ್ರಯಾಣಿಕರ ಸಾವಿನ ಸಂಖ್ಯೆ 13ಕ್ಕೆ ಏರಿಕೆ; ರೈಲ್ವೆ ಸಚಿವಾಲಯದಿಂದ ಪರಿಹಾರ ಘೋಷಣೆ

|

Updated on: Jan 23, 2025 | 4:01 PM

ಬುಧವಾರ ಮಹಾರಾಷ್ಟ್ರದ ಜಲಗಾಂವ್​ನಲ್ಲಿ ರೈಲು ಅಪಘಾತ ಸಂಭವಿಸಿತ್ತು. ಹಲವಾರು ಸಾವುಗಳು ಮತ್ತು ಗಾಯಗಳಿಗೆ ಕಾರಣವಾದ ಜಲಗಾಂವ್ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ರೈಲ್ವೆ ಸಚಿವಾಲಯ ಹೆಚ್ಚುವರಿಯಾಗಿ ತಲಾ 1.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿದ್ದರಿಂದ ಪ್ರಾಣ ಉಳಿಸಿಕೊಳ್ಳಲು ಚಲಿಸುವ ರೈಲಿನಿಂದ ಪ್ರಯಾಣಿಕರು ಕೆಳಗೆ ಜಿಗಿದಿದ್ದರು. ಈ ವೇಳೆ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಮತ್ತೊಂದು ರೈಲಿನಡಿ ಸಿಲುಕಿ 13 ಜನ ಮೃತಪಟ್ಟಿದ್ದರು.

ಜಲಗಾಂವ್ ರೈಲು ಅಪಘಾತದ ಪ್ರಯಾಣಿಕರ ಸಾವಿನ ಸಂಖ್ಯೆ 13ಕ್ಕೆ ಏರಿಕೆ; ರೈಲ್ವೆ ಸಚಿವಾಲಯದಿಂದ ಪರಿಹಾರ ಘೋಷಣೆ
Jalgaon Train Accident
Follow us on

ಮುಂಬೈ: ಸುಳ್ಳು ಬೆಂಕಿಯ ವದಂತಿಯಿಂದಾಗಿ ಮುಂಬೈಗೆ ಹೋಗುತ್ತಿದ್ದ ಪುಷ್ಪಕ್ ಎಕ್ಸ್​ಪ್ರೆಸ್​ ರೈಲಿನಿಂದ ಹಾರಿ 13 ಪ್ರಯಾಣಿಕರು ಸಾವನ್ನಪ್ಪಿದ್ದರು. ಆದರೆ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಪಕ್ಕದ ಹಳಿಗಳಲ್ಲಿ ಹೋಗುತ್ತಿದ್ದ ಮತ್ತೊಂದು ಕರ್ನಾಟಕ ಎಕ್ಸ್​ಪ್ರೆಸ್​ ರೈಲು ಅವರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು. ವುಧವಾರ ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ಪುಷ್ಪಕ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ವದಂತಿ ಹರಡಿತ್ತು. ಇದರಿಂದ ಹೆದರಿದ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದರು. ಅವರು ಪಕ್ಕದ ಹಳಿ ಮೇಲೆ ನಿಂತಿದ್ದಾಗ ಮತ್ತೊಂದು ರೈಲು ಡಿಕ್ಕಿಯಾಗಿ ದುರಂತ ಸಂಭವಿಸಿತ್ತು. ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್​ಪ್ರೆಸ್​ ರೈಲು ಡಿಕ್ಕಿಯಾಗಿ 13 ಜನ ಸಾವನ್ನಪ್ಪಿದ್ದರು.

13 ಜನರ ಪೈಕಿ ಇಲ್ಲಿಯವರೆಗೆ ನಾವು 8 ಶವಗಳನ್ನು ಗುರುತಿಸಿದ್ದೇವೆ. 13 ಪ್ರಯಾಣಿಕರ ಸಾವಿಗೆ ಕಾರಣವಾದ ಸಂದರ್ಭಗಳನ್ನು ಕೇಂದ್ರ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಲಿದ್ದಾರೆ.

ಮುಂಬೈನಿಂದ 400 ಕಿ.ಮೀ ದೂರದಲ್ಲಿರುವ ಪಚೋರಾ ಬಳಿಯ ಪರ್ಧಡೆ ಮತ್ತು ಮಾಹೇಜಿ ರೈಲ್ವೆ ನಿಲ್ದಾಣಗಳ ನಡುವಿನ ಅಪಘಾತ ಸ್ಥಳಕ್ಕೆ ಇಂದು ತಲುಪುವುದಾಗಿ ಸೆಂಟ್ರಲ್ ಸರ್ಕಲ್‌ನ ಸಿಆರ್‌ಎಸ್ ಮನೋಜ್ ಅರೋರಾ ಹೇಳಿದ್ದಾರೆ.

ಇದನ್ನೂ ಓದಿ: ಯಲ್ಲಾಪುರದ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ; ಕೇಂದ್ರದಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಜಲಗಾಂವ್ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 13 ಜನರಲ್ಲಿ ನಾಲ್ವರು ನೇಪಾಳದವರು ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಮೃತಪಟ್ಟ ನಾಲ್ವರು ನೇಪಾಳಿಗಳಲ್ಲಿ ಒಬ್ಬ ಅಪ್ರಾಪ್ತ ಬಾಲಕ ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

​​ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರು ಬೆಂಕಿಯ ಭಯದಿಂದ ಪಕ್ಕದ ಹಳಿಗಳಿಗೆ ಆತುರದಿಂದ ಹಾರಿ, ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ಅಡಿ ಸಿಲುಕಿದಾಗ ಈ ದುರಂತ ಸಂಭವಿಸಿತ್ತು. ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಚೋರಾ ಪಟ್ಟಣದ ಬಳಿಯ ಮಾಹೆಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ಸಂಜೆ 4.45ರ ಸುಮಾರಿಗೆ ಪುಷ್ಪಕ್ ಎಕ್ಸ್‌ಪ್ರೆಸ್​ನಿಂದ ಹಾರಿದಾಗ ಸಂಭವಿಸಿದ ಅಪಘಾತದಲ್ಲಿ ಇತರ 15 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಕೇಂದ್ರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ಆ ಒಂದು ಸುಳ್ಳು ನಂಬಿ ರೈಲಿನಿಂದ ಹಾರಿ 11 ಜನರ ದೇಹ ಛಿದ್ರ

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ದುರಂತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಹತ್ತಿರದ ಸಂಬಂಧಿಕರಿಗೆ ತಲಾ 5 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ. ಹಾಗೇ, ಮೃತರ ಕುಟುಂಬಗಳಿಗೆ ತಲಾ 1.5 ಲಕ್ಷ ರೂ., ಗಂಭೀರ ಗಾಯಗಳಿಗೆ 50,000 ರೂ. ಮತ್ತು ಸಾಮಾನ್ಯ ಗಾಯಗಳಿಗೆ 5,000 ರೂ. ಪರಿಹಾರವನ್ನು ರೈಲ್ವೆ ಮಂಡಳಿ ಪ್ರತ್ಯೇಕವಾಗಿ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಈ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಎಲ್ಲಾ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ